AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಕ್​ ಫ್ರಮ್​​ ಹೋಮ್ ಮೂಲಕ ಹೆಚ್ಚು ಹಣ ಗಳಿಸಬಹುದೆಂದು ಆಸೆ ತೋರಿಸಿ 158 ಕೋಟಿ ರೂ. ವಂಚಿಸಿದ್ದ ಆರೋಪಿಗಳು ಅರೆಸ್ಟ್​

ವರ್ಕ್​ ಫ್ರಾಮ್​​ ಹೋಮ್​ (ಮನೆಯಲ್ಲೇ ಕುಳಿತು ಕೆಲಸ) ಮಾಡಿ ಲಕ್ಷಾಂತರ ರೂಪಾಯಿ ಗಳಿಸಬಹುದು ಎಂದು ಉದ್ಯೋಗಾಕಾಂಕ್ಷಿಗಳಿಗೆ ಆಸೆ ತೋರಿಸಿ, ಅವರಿಂದ ಹಣ ಹೂಡಿಕೆ ಮಾಡಿಸಿಕೊಂಡು ಪಂಗನಾಮ ಹಾಕಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವರ್ಕ್​ ಫ್ರಮ್​​ ಹೋಮ್ ಮೂಲಕ ಹೆಚ್ಚು ಹಣ ಗಳಿಸಬಹುದೆಂದು ಆಸೆ ತೋರಿಸಿ 158 ಕೋಟಿ ರೂ. ವಂಚಿಸಿದ್ದ ಆರೋಪಿಗಳು ಅರೆಸ್ಟ್​
ಸಿಸಿಬಿ
ವಿವೇಕ ಬಿರಾದಾರ
|

Updated on:Jan 30, 2024 | 10:12 PM

Share

ಬೆಂಗಳೂರು, ಜನವರಿ 30: ವರ್ಕ್​ ಫ್ರಾಮ್​​ ಹೋಮ್​ (ಮನೆಯಲ್ಲೇ ಕುಳಿತು ಕೆಲಸ) ಮಾಡಿ ಲಕ್ಷಾಂತರ ರೂಪಾಯಿ ಗಳಿಸಬಹುದೆಂಬ ಆಮಿಷ ಒಡ್ಡಿ ಜನರ ಖಾತೆಗಳಿಂದ 158 ಕೋಟಿ ರೂ. ದೋಚಿದ್ದ ಅತಿ ದೊಡ್ಡ ಸೈಬರ್​ ವಂಚಕರ (Cyber Crime) ಜಾಲವನ್ನು ಕೇಂದ್ರ ಅಪರಾಧ ವಿಭಾಗದ (CCB) ಅಧಿಕಾರಿಗಳು ಭೇದಿಸಿದ್ದಾರೆ. ಪ್ರಕರಣ ಸಂಬಂಧ ಬೆಂಗಳೂರು, ಹೈದರಾಬಾದ್ ಮತ್ತು ಮುಂಬೈನಲ್ಲಿ ಕೂತು ವಂಚಿಸುತ್ತಿದ್ದ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಕರ್ನಾಟಕ ಸೇರಿದಂತೆ 28 ರಾಜ್ಯಗಳಲ್ಲಿ 2,143 ಸೈಬರ್​ ವಂಚನೆ ಕೃತ್ಯ ಎಸಗಿದ್ದಾರೆ. ರಾಜ್ಯದಲ್ಲಿ 265 ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಗಳ ಬರೊಬ್ಬರಿ 30 ಬ್ಯಾಂಕ್ ಖಾತೆಗಳು ಪರಿಶೀಲನೆ ನಡೆಸಿದಾಗ 158 ಕೋಟಿ ರೂ. ಮೊತ್ತದ ವಹಿವಾಟು ನಡೆದಿದೆ. ಆರೋಪಿಗಳಿಂದ 11 ಮೊಬೈಲ್ ಫೋನ್‌ಗಳು ಮತ್ತು 15 ಸಿಮ್ ಕಾರ್ಡ್‌ ಸೇರಿದಂತೆ 62.8 ಲಕ್ಷ ರೂ. ಅನ್ನು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 14 ಪೊಲೀಸ್ ಠಾಣೆಗಳಲ್ಲಿ 135 ದೂರು ದಾಖಲಾಗಿವೆ. ಇನ್ನು ಪ್ರಕರಣದಲ್ಲಿ ಭಾಗಿಯಾಗಿದ್ದ ನಗರದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರಣ್ಯಪುರದ ಬಿಇಎಲ್ ಲೇಔಟ್‌ನ ನಿವಾಸಿಯಾಗಿರುವ ಭವ್ಯಾ ಎಂಬುವರಿಗೆ ಟ್ರೇಡ್​ ಸ್ಟೇಷನ್​ ಕಂಪನಿ ಹೆಸರಿನಲ್ಲಿ ಆರೋಪಿಗಳು ಸಂಪರ್ಕಿಸಿದ್ದಾರೆ. ಬಳಿಕ ಹಣ ಹೂಡಿಕೆ ಮಾಡಿದರೆ ಮನೆಯಲ್ಲೇ ಕುಳಿತು ಹೆಚ್ಚು ಹಣ ಸಂಪಾದಿಸಬಹುದು ಎಂದು ಭರವಸೆ ನೀಡಿದ್ದಾರೆ. ಇದನ್ನು ನಂಬಿದ ಭವ್ಯಾ ಅವರು ಹಂತ-ಹಂತವಾಗಿ ಹೂಡಿಕೆ ಮಾಡಿದ್ದು, ಬರೊಬ್ಬರಿ 18.75 ಲಕ್ಷ ರೂ. ವಂಚಿಸಿದ್ದಾರೆ. ಈ ಸಂಬಂಧ ಭವ್ಯಾ ಅವರು ನೀಡಿದ ದೂರಿನ ಮೇರೆಗೆ ಉಪ ಪೊಲೀಸ್ ಆಯುಕ್ತ ಅಬ್ದುಲ್ ಅಹದ್ ನೇತೃತ್ವದ ಸಿಸಿಬಿ ಅಧಿಕಾರಿಗಳು ಪ್ರಕರಣದ ಜಾಡನ್ನು ಭೇದಿಸಿದ್ದು, ಆರೋಪಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಪ್ರಾಧ್ಯಾಪಕರಿಗೆ ಪಂಗನಾಮ ಹಾಕಿದ ಸೈಬರ್ ವಂಚಕರು

ಆರೋಪಿಗಳು ವಾಟ್ಸಾಪ್ ಮತ್ತು ಟೆಲಿಗ್ರಾಮ್ ಅಪ್ಲಿಕೇಶನ್‌ಗಳಲ್ಲಿ ಅಪರಿಚಿತರಿಗೆ ಸಂದೇಶಗಳನ್ನು ಕಳುಹಿಸುತ್ತಾರೆ. ಬಳಿಕ ವರ್ಕ್​ ಫ್ರಾಮ್​ ಹೋಮ್​ ಆಮಿಷ ಒಡ್ಡುತ್ತಾರೆ. ಇವರ ಬಲೆಗೆ ಬಿದ್ದ ನಾಗರಿಕರಿಗೆ “ನಮ್ಮ ಸಿಬ್ಬಂದಿ ಹೆಚ್ಚುವರಿ ಆದಾಯಕ್ಕಾಗಿ ಮನೆಯಿಂದ ಕೆಲಸ ಮಾಡಿದ್ದಾರೆ. ಈ ಅಧಿಕ ಹಣ ಗಳಿಸುತ್ತಿದ್ದಾರೆ” ಎಂದು ಹೇಳುತ್ತಾರೆ. ಅಲ್ಲದೆ ಬಲೆಗೆ ಬಿದ್ದ ಜನರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಖಾತೆಗಳು ಮತ್ತು ಯೂಟ್ಯೂಬ್ ವೀಡಿಯೊಗಳನ್ನು ಕಳಸಿ ನಂಬಿಸುತ್ತಾರೆ. ಬಳಿಕ ಹೂಡಿಕೆ ಮಾಡುವಂತೆ ಮಾಡುತ್ತಾರೆ. ಮೊದಲಿಗೆ ಸಣ್ಣ ಪ್ರಮಾಣದ ಹಣವನ್ನು ಹೂಡಿಕೆ ಮಾಡಿಸಿಕೊಳ್ಳುತ್ತಾರೆ. ಹೂಡಿಕೆ ಮಾಡಿದ ಹಣಕ್ಕಿಂತ ಡಬಲ್​ ಹಣವನ್ನು ಹೂಡಿಕೆದಾರರಿಗೆ ನೀಡುತ್ತಾರೆ.

ನಂತರ ರೇಟಿಂಗ್​, ಗೂಗಲ್​ ರೇಟಿಂಗ್​ ನೆಪದಲ್ಲಿ ನಾಗರಿಕರ ಬಳಿ ಹಣ ಹೂಡಿಕೆ ನೆಪದಲ್ಲಿ ಅವರ ಬ್ಯಾಂಕ್​ ಖಾತೆಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತಾರೆ. ಬಳಿಕ ಜಾಲಕ್ಕೆ ಸಿಲುಕಿದವರ ಬ್ಯಾಂಕ್​ ಖಾತೆಗಳಲ್ಲಿನ ಕೋಟ್ಯಾಂತರ ಹಣವನ್ನು ದೋಚಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡುತ್ತಿದ್ದರು. ಹೀಗೆ ದೇಶದ ಸಾಕಷ್ಟು ಜನರಿಗೆ ಮೋಸ ಮಾಡಿದ್ದಾರೆ. ಇನ್ನು ಪ್ರಕರಣ ಕಿಂಗ್​ಪಿಂಗ್​ಗಳು ವಿದೇಶದಲ್ಲಿದ್ದು ಅವರ ಬಂಧನಕ್ಕಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:11 pm, Tue, 30 January 24