ಮೇಲ್ನೋಟಕ್ಕೆ ಈರುಳ್ಳಿ ಸಾಗಾಟ; ಮೂಟೆಯಡಿ ಕೈಹಾಕಿದ ಪೊಲೀಸರಿಗೆ ಸಿಕ್ತು 5 ಲಕ್ಷ ಮೌಲ್ಯದ ಸ್ಪಿರೀಟ್
ಈರುಳ್ಳಿ ಮೂಟೆಗಳನ್ನು ತಮಿಳುನಾಡಿಗೆ ಸಾಗಾಟ ಮಾಡುತ್ತಿದ್ದ ಕ್ಯಾಂಟರ್ ತಡೆದ ಚಾಮರಾಜನಗರ ಪೊಲೀಸರು ಪರಿಶೀಲನೆ ನಡೆಸಿದಾಗ ಸಾವಿರಾರು ಲೀಟರ್ ಸ್ಪಿರಿಟ್ ಅಕ್ರಮ ಸಾಗಾಟ ಪತ್ತೆಯಾಗಿದೆ.
ಚಾಮರಾಜನಗರ: ಕಳ್ಳರು ಚಾಪೆ ಕೆಳಗೆ ನುಸುಳಿದರೆ ಪೊಲೀಸರು ರಂಗೋಲಿ ಕೆಳಗೆ ನುಸುಳಿ ಕಳ್ಳತನ ಪತ್ತೆಹಚ್ಚುತ್ತಾರೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. ಕ್ಯಾಂಟರ್ ಒಳಗೆ ನೋಡಿದರೆ ತರಕಾರಿ ತುಂಬಿಕೊಂಡು ಹೋಗುತ್ತಿದ್ದಾರೆ ಎಂದು ಅಂದುಕೊಳ್ಳಬೇಕು. ಅಷ್ಟೆ ಯಾಕೆ ಪೊಲೀಸರು ಮೊದಲು ನೋಡಿದಾಗಲು ಹಾಗೇ ಅಂದುಕೊಂಡಿದ್ದರು. ಆದರೂ ಯಾಕೋ ಅನುಮಾನಗೊಂಡ ಪೊಲೀಸರು ಪರಿಶೀಲನೆ ನಡೆಸಿದಾಗ ಕಳ್ಳರ ಅಸಲಿಯತ್ತು ಬೆಳಕಿಗೆ ಬಂದಿದೆ. ಈರುಳ್ಳಿ ಮೂಟೆ ಕೇಳಗೆ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಸಾವಿರಾರು ಲೀಟರ್ ಸ್ಪಿರಿಟ್ ಪತ್ತೆಯಾಗಿದೆ. ಚಾಮರಾಜನಗರ ತಾಲೂಕಿನ ಪುಣಜನೂರು ಚೆಕ್‌ಪೋಸ್ಟ್ ಬಳಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಈ ಪ್ರಕರಣ ಪತ್ತೆಹಚ್ಚಲಾಗಿದೆ.
ಲಾರಿ ಚಾಲಕನ್ನ ವಿಚಾರಣೆ ನಡೆಸಿದಾಗ ಈರುಳ್ಳಿ ಲಾರಿ ಇದಾಗಿದ್ದು, ಮೈಸೂರು ಮಾರ್ಕೆಟ್ನಿಂದ ಕೇರಳದ ಪಾಲಕ್ಕಾಡ್ಗೆ ಹೋಗುತ್ತಿರುವುದಾಗಿ ಹೇಳಿದ್ದಾರೆ. ಆದರೆ ಪೊಲೀಸರು ಮಾತ್ರ ಅನುಮಾನದ ಕಣ್ಣುಗಳಿಂದ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಈರುಳ್ಳಿ ಚೀಲದ ಕೆಳಗಿನ ಭಾಗದಲ್ಲಿ ಕ್ಯಾನ್‌ಗಳು ಇರುವುದು ಕಂಡುಬಂದಿದೆ. ಕೂಡಲೇ ಪೊಲೀಸರು ಈರುಳ್ಳಿ ಮೂಟೆ ಕೆಳಗಿಳಿಸಿ ನೋಡಿದಾಗ ಸ್ಪಿರಿಟ್ ತುಂಬಿದ ಕ್ಯಾನ್‌ಗಳು ಪತ್ತೆಯಾಗಿವೆ.
ನಂತರ ಪೊಲೀಸರು ಕ್ಯಾಂಟರ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಕ್ಯಾಂಟರ್‌ನ ಒಳಭಾಗದಲ್ಲಿ ಸ್ಪೀರಿಟ್ ತುಂಬಿದ 35 ಲೀಟರ್ ಸಾಮರ್ಥ್ಯದ 202 ಕ್ಯಾನ್‌ಗಳು ಪತ್ತೆಯಾಗಿವೆ. ಅದರಲ್ಲಿ ಬರೋಬ್ಬರಿ 7070 ಲೀಟರ್ ಸ್ಪಿರಿಟ್ ಇರುವುದು ಗೊತ್ತಾಗಿದೆ. ಈ ವೇಳೆ ಕ್ಯಾಂಟರ್‌ನಲ್ಲಿದ್ದ ಹರಿ ಹಾಗೂ ವಿನೋದ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹೇಳಿದ್ದೇ ಬೇರೆ. ಕ್ಯಾಂಟರ್ ಮೈಸೂರಿನಿಂದ ಕೇರಳಕ್ಕೆ ತೆರಳುತ್ತಿತ್ತು. ನಮಗೆ ಈರುಳ್ಳಿ ಲೋಡ್ ಇದೆ ಎಂದು ಹೇಳಿದರು. ಒಳಗೆ ಸ್ಪೀರಿಟ್ ಇದ್ದದ್ದು ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಸದ್ಯ ವಶಪಡಿಸಿಕೊಂಡಿರುವ ಸ್ಪಿರಿಟ್ ಮೌಲ್ಯ ಸುಮಾರು 5 ಲಕ್ಷಕ್ಕೂ ಹೆಚ್ಚು ಎಂದು ಹೇಳಲಾಗಿದೆ.
ಪ್ರಕರಣ ಸಂಬಂಧ ನಾಲ್ವರ ವಿರುದ್ಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ಸ್ಪಿರಿಟ್ ಎಲ್ಲಿ ತಯಾರಿಗಿದ್ದು, ಇದರ ಜಾಲ ಏನಾದರು ಇದಿಯಾ ಎಂಬುದು ತನಿಖೆ ನಂತರವಷ್ಟೇ ಗೊತ್ತಾಗಬೇಕಿದೆ.
ವರದಿ: ದಿಲೀಪ್ ಚೌಡಹಳ್ಳಿ, ಟಿವಿ9 ಚಾಮರಾಜನಗರ
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ