ರಾಯಚೂರಿನಲ್ಲಿ ಅಪ್ರಾಪ್ತ ಬಾಲಕರ ಗಲಾಟೆ: ಡ್ರಾಗರ್, ಚಾಕುವಿನಿಂದ ಹಲ್ಲೆಗೆ ಯತ್ನ
ರಾಯಚೂರು ನಗರದಲ್ಲಿರುವ ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿರುವ 9ನೇ ತರಗತಿಯ ವಿದ್ಯಾರ್ಥಿಯ ಮೇಲೆ 7ನೇ ತರಗತಿಯ ವಿದ್ಯಾರ್ಥಿಗಳು ಡ್ರಾಗರ್, ಚಾಕು, ಹಕ್ಕಿಗೆ ಹೊಡೆಯೋ ಗನ್ ಮತ್ತು ಇತರೆ ಟೂಲ್ಸ್ನಿಂದ ಹಲ್ಲೆ ಮಾಡಲು ಮುಂದಾಗಿದ್ದರು.
ರಾಯಚೂರು, ಜನವರಿ 01: ಅಪ್ರಾಪ್ತ ಬಾಲಕರು (Boys) ಡ್ರಾಗರ್, ಚಾಕು, ಹಕ್ಕಿಗೆ ಹೊಡೆಯೋ ಗನ್ ಮತ್ತು ಇತರೆ ಟೂಲ್ಸ್ನಿಂದ ಹಲ್ಲೆ ಮಾಡಲು ಮುಂದಾಗಿದ್ದ ಘಟನೆ ನಗರದ ಜ್ಯೋತಿ ಕಾಲೋನಿಯಲ್ಲಿ ನಡೆದಿದೆ. 9ನೇ ಮತ್ತು 7ನೇ ತರಗತಿ ವಿದ್ಯಾರ್ಥಿಗಳ (Students) ನಡುವೆ ಗಲಾಟೆ ನಡೆದಿದೆ. ಇಂದು (ಜ.01) 9ನೇ ತರಗತಿ ವಿದ್ಯಾರ್ಥಿ ಶಾಲೆಗೆ ಬಂದಿದ್ದಾನೆ. ಕೆಲ ಹೊತ್ತಿನ ಬಳಿಕ ವಿದ್ಯಾರ್ಥಿ ತಿನಿಸು ತರಲು ಶಾಲೆಯಿಂದ ಹೊರಗಡೆ ಬಂದಿದ್ದಾನೆ.
ಈ ವೇಳೆ 7ನೇ ತರಗತಿಯ ವಿದ್ಯಾರ್ಥಿ ಮತ್ತು ಆತನ ಸ್ನೇಹಿತರು ಬೈಕ್ ಮೇಲೆ ಬಂದು 9ನೇ ತರಗತಿಯ ವಿದ್ಯಾರ್ಥಿಯನ್ನ ಅಡ್ಡ ಹಾಕಿದ್ದಾರೆ. ಆಗ 9ನೇ ತರಗತಿಯ ವಿದ್ಯಾರ್ಥಿ ದಾರಿ ಬಿಡು ಎಂದಿದ್ದಾನೆ. ಅದಕ್ಕೆ 7ನೇ ತರಗತಿಯ ವಿದ್ಯಾರ್ಥಿ ಮತ್ತು ಆತನ ಸ್ನೇಹಿತರು ನಮಗೆ ದಾರಿ ಬಿಡು ಎನ್ನುತ್ತೀಯಾ ” ಏ ಸಾಲೇ ಕೋ ಮಾರೋ” ಎಂದು ಆತನಿಗೆ ಚಾಕುವಿನಿಂದ ಇರಿಯಲು ಮುಂದಾಗಿದ್ದಾರೆ.
ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿಗೆ ಬೆಂಗಳೂರಿಗೆ ಬಂದಿದ್ದ ಕೇರಳ ಎಸ್ಪಿ ಪುತ್ರನ ಮೇಲೆ ಹಲ್ಲೆ: ಆರೋಪ
ಆಗ 9ನೇ ತರಗತಿ ವಿದ್ಯಾರ್ಥಿ ತಪ್ಪಿಸಿಕೊಂಡಿದ್ದು, ಬೆರಳಿಗೆ ಗಾಯವಾಗಿದೆ. ಇದನ್ನು ಕಂಡ ಸ್ಥಳಿಯರು ಬಾಲಕರನ್ನು ಬೆದರಿಸಿದ್ದಾರೆ. ಆಗ ಆರೋಪಿಗಳು ಮಾರಕಾಸ್ತ್ರಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪಶ್ಚಿಮ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಚಾರ ತಿಳಿಯುತ್ತಿದ್ದಂತೆ ಹಲ್ಲೆಗೊಳಗಾದ ಬಾಲಕನ ತಂದೆ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆಗ ಹಲ್ಲೆಗೊಳಗಾದ ಬಾಲಕ ತಂದೆಗೆ, ಎದೆ ನೋವುತ್ತಿದೆ ಎಂದು ಹೇಳಿದ್ದಾನೆ. ಕೂಡಲೆ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಮಧ್ಯೆ ಗಾಯಾಳು ಬಾಲಕನ ಟಿಸಿ ತೆಗೆದುಕೊಂಡು ಹೋಗುವಂತೆ ಪೋಷಕರಿಗೆ ಖಾಸಗಿ ಶಾಲಾ ಆಡಳಿತ ಒತ್ತಡ ಹಾಕುತ್ತಿದೆ ಎಂದು ಹಲ್ಲೆಗೊಳಗಾದ ಬಾಲಕನ ತಂದೆ ಈರಣ್ಣ ಹೇಳಿದರು.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:52 pm, Mon, 1 January 24