Crime News: ಸಿಡಿಲು ಬಡಿದು ಕೊಪ್ಪಳ, ಚಿತ್ರದುರ್ಗದಲ್ಲಿ ಇಬ್ಬರು ಸಾವು; ಬಾಗಲಕೋಟೆಯಲ್ಲಿ ಯೋಧನಿಂದ ಮಹಿಳೆಯ ಬರ್ಬರ ಹತ್ಯೆ
ಯೋಧನೊಬ್ಬ ಹಾಡಹಗಲೇ ಗುಂಡು ಹಾರಿಸಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡದ ನುಗ್ಲಿ ಓಣಿಯಲ್ಲಿ ನಡೆದಿದೆ.
ಕರ್ನಾಟಕದ ಹಲವೆಡೆ ಇಂದು ಭಾರೀ ಮಳೆ ಸುರಿದಿದ್ದು, ಕೆಲವು ಜಿಲ್ಲೆಗಳಲ್ಲಿ ಸಿಡಿಲು ಬಡಿದು ಜನರು ಸಾವನ್ನಪ್ಪಿರುವ ಘಟನೆಗಳೂ ನಡೆದಿವೆ. ಕೊಪ್ಪಳ, ಚಿತ್ರದುರ್ಗದಲ್ಲಿ ಸಿಡಿಲು ಬಡಿದು ಇಬ್ಬರು ಅಸುನೀಗಿದ್ದಾರೆ. ಕರ್ನಾಟಕದಲ್ಲಿ ಇನ್ನೂ 5 ದಿನಗಳ ಕಾಲ ಮಳೆ ಮುಂದುವರೆಯಲಿದ್ದು, ಈಗಾಗಲೇ ಹಲವೆಡೆ ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಇಂದಿನ ಪ್ರಮುಖ ಅಪರಾಧ ಸುದ್ದಿಗಳ ಮಾಹಿತಿ ಇಲ್ಲಿದೆ.
ಕೊಪ್ಪಳದಲ್ಲಿ ಸಿಡಿಲು ಬಡಿದು ವೃದ್ಧ ಸಾವು: ಕೊಪ್ಪಳ: ಜಮೀನಿನಲ್ಲಿ ಸಿಡಿಲು ಬಡಿದು 65 ವರ್ಷದ ವೃದ್ಧ ಸಾವನ್ನಪ್ಪಿರುವ ದುರ್ಘಟನೆ ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ಬಳಿ ನಡೆದಿದೆ. ಜಮೀನಿಗೆ ತೆರಳಿದ್ದಾಗ ಜಮೀನಿನಲ್ಲಿ ಸಿಡಿಲು ಬಡಿದು 65 ವರ್ಷದ ಶಿವಪ್ಪ ಸಾವನ್ನಪ್ಪಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲು ಬಡಿದು ಯುವಕ ಸಾವು: ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಬಳಿ ಸಿಡಿಲು ಬಡಿದು ಕುರಿಗಾಹಿ ಯಶವಂತ್ ಎಂಬ 19 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿಯಲ್ಲಿ ಕುರಿ ಮೇಯಿಸಲು ತೆರಳಿದ್ದ ಯಶವಂತ್ ಸಿಡಿಲಿಗೆ ಬಲಿಯಾಗಿದ್ದಾನೆ. ಚಳ್ಳಕೆರೆ ತಹಸೀಲ್ದಾರ್ ಎನ್.ರಘುಮೂರ್ತಿ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸಿಡಿಲು ಬಡಿದು ಮಹಿಳೆಗೆ ಗಾಯ:
ಹಾವೇರಿ: ಹಾವೇರಿ ಜಿಲ್ಲೆಯ ಹಲವೆಡೆ ಸಿಡಿಲು ಗುಡುಗಿನೊಂದಿಗೆ ಮಳೆರಾಯನ ಆರ್ಭಟ ನಡೆದಿದ್ದು, ಹಾವೇರಿ, ಸವಣೂರು ತಾಲೂಕಿನ ಹಲವೆಡೆ ಮಳೆಯಾಗಿದೆ. ಹಾವೇರಿ ತಾಲೂಕಿನ ನೆಗಳೂರು ಗ್ರಾಮದಲ್ಲಿ ಸಿಡಿಲು ಬಡಿದು ಮಹಿಳೆಗೆ ಗಾಯವಾಗಿದೆ. ಸಣ್ಣಮ್ಮ ಕರಕಣ್ಣವರ ಎಂಬ ಮಹಿಳೆಗೆ ಗಾಯವಾಗಿದೆ. ಪ್ರಾಣಾಪಾಯದಿಂದ ಪಾರಾಗಿರುವ ಮಹಿಳೆ ಮಳೆ ಬರುತ್ತಿದ್ದ ವೇಳೆ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಗಾಯವಾಗಿತ್ತು. ಗಾಯಾಳುವಿಗೆ ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಯೋಧನಿಂದ ಮಹಿಳೆಯ ಬರ್ಬರ ಹತ್ಯೆ: ಬಾಗಲಕೋಟೆ: ಹಾಡಹಗಲೇ ಗುಂಡು ಹಾರಿಸಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡದ ನುಗ್ಲಿ ಓಣಿಯಲ್ಲಿ ನಡೆದಿದೆ. ದ್ಯಾಮವ್ವ ಪೂಜಾರಿ (45) ಹತ್ಯೆಯಾದ ಮಹಿಳೆ. ಕಾರಿನಲ್ಲಿ ಬಂದು ಗುಂಡು ಹಾರಿಸಿ ಪರಾರಿ ಆಗಿದ್ದ ದುಷ್ಕರ್ಮಿಗಳ ಗುಂಡಿನ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ದ್ಯಾಮವ್ವನನ್ನು ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಆಕೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಎಸ್‌ಪಿ ಲೋಕೇಶ್ ಜಗಲಾಸರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶೂಟೌಟ್ ಮಾಡಿದವನು ಯೋಧನೆಂದು ಮೃತಳ ಸಂಬಂಧಿಕರು ಆರೋಪ ಮಾಡಿದ್ದಾರೆ. ಯೋಧ ಮುತ್ತು ಖಾನಾಪುರ ಶೂಟೌಟ್ ಮಾಡಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಮೃತ ದ್ಯಾಮವ್ವಳ ಚಿಕ್ಕಪ್ಪನ ಮಗ ಯೋಧ ಮುತ್ತು ಖಾನಾಪುರನೇ ಈ ಕೃತ್ಯ ಮಾಡಿದ್ದಾನೆಂದು ಸಂಬಂಧಿಕರು ಆರೋಪಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಶೂಟೌಟ್ ಪ್ರಕರಣದಲ್ಲಿ ಬಾಗಲಕೋಟೆ ಎಸ್ ಪಿ ಲೋಕೇಶ್ ಜಗಲಾಸರ್ ಹೇಳಿಕೆ ನೀಡಿದ್ದು, ಶೂಟೌಟ್ ಮಾಡಿದ್ದು,ಯೋಧ ಮುತ್ತು ಖಾನಾಪುರ. ಆತನಿಗೆ ಸಾತ್ ನೀಡಿದ್ದು ಕೂಡ ಸಹೋದ್ಯೋಗಿ ಯೋಧ. ಮುತ್ತು ಖಾನಾಪುರಗೆ ಇನ್ನೋರ್ವ ಯೋಧ ಶುಕ್ಲಾ ಎಂಬುವವನು ಸಾಥ್ ನೀಡಿದ್ದ. ಮನೆ ಜಾಗದ ವಿಚಾರಕ್ಕಾಗಿ ಕೊಲೆ ನಡೆದಿದೆ. ಇಬ್ಬರೂ ಹೈದರಾಬಾದ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹೈದರಾಬಾದ್ ನಿಂದ ಕಾರಿನಲ್ಲಿ ಬಂದು ಶೂಟೌಟ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕ್ರೇನ್ ಹರಿದು ಕಾರ್ಮಿಕ ಸಾವು: ಚಿಕ್ಕಬಳ್ಳಾಪುರ: ಕಾರ್ಖಾನೆಯಲ್ಲಿ ಕ್ರೇನ್ ಹರಿದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕುಡುಮಲಕುಂಟೆ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಒಡಿಶಾ ಮೂಲದ ಕಾರ್ಮಿಕ ಶಂಕರ್ ಮುಡಾ (22) ಸಾವನ್ನಪ್ಪಿರುವ ವ್ಯಕ್ತಿ. ಗೌರಿಬಿದನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.
ಕಳ್ಳನ ಬಂಧನ: ಬಳ್ಳಾರಿ: ಗಾಂಧಿನಗರ ಠಾಣೆ ಪೊಲೀಸರು ಅಂತಾರಾಜ್ಯ ಬೈಕ್ ಕಳ್ಳ ಹನುಮಂತನನ್ನು ಬಂಧಿಸಿದ್ದಾರೆ. ಬಂಧಿತನಿಂದ 7,50,000 ರೂ. ಮೌಲ್ಯದ 13 ಬೈಕ್, 1 ಟ್ರ್ಯಾಕ್ಟರ್ ಟ್ರಾಲಿ ಜಪ್ತಿ ಮಾಡಲಾಗಿದೆ. 15ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆಂಧ್ರದ ಕರ್ನೂಲು ಜಿಲ್ಲೆಯ ಲಿಂಗಲದಿನ್ನಿ ಗ್ರಾಮದ ನಿವಾಸಿ ಹನುಮಂತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಪೊಲೀಸರಿಂದ ಕಳ್ಳನ ಬಂಧನ: ವಿಜಯನಗರ: ಮನೆಯಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗ್ತಿದ್ದ ಆರೋಪಿಗಳನ್ನ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಬಳಿ ನೆಲಮಂಗಲದ ತ್ಯಾಮಗೊಂಡ್ಲು ಪೊಲೀಸರು ಸೆರೆ ಹಿಡಿದಿದ್ದಾರೆ. ತಪ್ಪಿಸಿಕೊಳ್ಳಲು ಜಮೀನನಲ್ಲಿ ಓಡಿ ಹೋಗಿದ್ದ ದುರ್ಗಪ್ಪ ಸೇರಿದಂತೆ ನಾಲ್ವರು ಕಳ್ಳರನ್ನ ಪೊಲೀಸರಿಗೆ ಗ್ರಾಮಸ್ಥರು ಹಿಡಿದುಕೊಟ್ಟಿದ್ದಾರೆ. ಬಂಧಿತರಿಂದ ಕಾರು ಹಾಗೂ ಆಭರಣ ವಶಕ್ಕೆ ಪಡೆಯಲಾಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ಜಮೀನಿನಲ್ಲಿ ಕಳ್ಳ – ಪೊಲೀಸ ಆಟ ನಡೆದಿದ್ದು, ಮನೆ ಕಳ್ಳತನ ಮಾಡಿದ್ದ ಆರೋಪಿಗಳನ್ನ ಬಂಧಿಸಲು ಪೊಲೀಸರ ಕಾರ್ಯಾಚರಣೆ ನಡೆಸಿದ್ದರು. ನೆಲಮಂಗಲದ ತ್ಯಾಮಗೊಂಡ್ಲು ಪೊಲೀಸ್ ಠಾಣೆಯ ಪೊಲೀಸರಿಂದ ಆರೋಪಿಗಳ ಚೇಜಿಂಗ್ ನಡೆದಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳಲು ಜಮೀನಿನಲ್ಲಿ ಕಾರು ಓಡಿಸಿದ ಕಳ್ಳರು ಕೊನೆಗೂ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದ ಬಳಿ ಸಿಕ್ಕಿಬಿದ್ದಿದ್ದಾರೆ.
ವೇಗವಾಗಿ ಬರುತ್ತಿದ್ದ ಬೈಕ್ ಅನ್ನು ಅವಾಯ್ಡ್ ಮಾಡುವ ಸಲುವಾಗಿ ಲಾರಿಯೊಂದು ಡಿವೈಡರ್ ಗೆ ನುಗ್ಗಿದ ಘಟನೆ ರಾಷ್ಟ್ರೀಯ ಹೆದ್ದಾರಿ4 ಹನುಮಂತಪುರ ಬಳಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ. ಸಂಚಾರಿ ಪೊಲೀಸರ ನೆರವಿನಿಂದ ಬಿದ್ದ ಲಾರಿ ಮೇಲೆತ್ತುವ ಕಾರ್ಯ ನಡೆದಿದೆ. ಅಪಘಾತ ನಡೆದ ಸ್ಥಳದಲ್ಲಿ ವಾಹನಗಳು ಮಂದಗತಿಯಲ್ಲಿ ಚಲಿಸುತ್ತಿತ್ತು. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ