Crime News: ಅಪ್ರಾಪ್ತೆಯನ್ನು ಮದುವೆಯಾಗಲು ಆಧಾರ್ ಕಾರ್ಡ್ ಫೋರ್ಜರಿ ಮಾಡಿ ಸಿಕ್ಕಿಬಿದ್ದ ಮಧುಮಗ
ಇಲ್ಲೊಬ್ಬ ವ್ಯಕ್ತಿ ಅಪ್ರಾಪ್ತೆಯನನ್ನು ಮದುವೆಯಾಗಲು ಆಧಾರ್ ಕಾರ್ಡ್ ಫೋರ್ಜರಿ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಆಧಾರ್ ಕಾರ್ಡ್ ಫೋರ್ಜರಿ ಮಾಡಿಕೊಟ್ಟ ವ್ಯಕ್ತಿಯ ಬಂಧನಕ್ಕೆ ತನಿಖೆ ಮುಂದುವರಿದಿದೆ.
ಬೆಂಗಳೂರು: ಕಾನೂನು ಪ್ರಕಾರ ಮಹಿಳೆಯರ ಮದುವೆಯಾಗಬೇಕಾದರೆ 18 ವರ್ಷ ತುಂಬಿರಬೇಕು. ಆದರೆ ಇಲ್ಲೊಬ್ಬ ವ್ಯಕ್ತಿ ಅಪ್ರಾಪ್ತೆಯನನ್ನು ಮದುವೆಯಾಗಲು ಆಧಾರ್ ಕಾರ್ಡ್ ಅನ್ನೇ ಫೋರ್ಜರಿ ಮಾಡಿದ ಸಿಕ್ಕಿಬಿದ್ದ ಘಟನೆ ನಗರದಲ್ಲಿ ನಡೆದಿದೆ. ಆರೋಪಿ ಮಧುಮಗ ಮನು ಸದ್ಯ ರಾಜಗೋಪಾಲನಗರ ಠಾಣಾ ಪೊಲೀಸರ ಅತಿಥಿಯಾಗಿದ್ದಾನೆ. ಅದಾಗ್ಯೂ ಆಧಾರ್ ಕಾರ್ಡ್ ಫೋರ್ಜರಿ ಮಾಡಿದ ಖತರ್ನಾಕ್ ವ್ಯಕ್ತಿಯ ಬಂಧನಕ್ಕೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.
ಆರೋಪಿ ಮನು ಎಂಬಾತ ಅಪ್ರಾಪ್ತೆ ಬಾಲಕಿಯನ್ನು ಮದುವೆಯಾಗಲು ಮುಂದಾಗಿದ್ದಾನೆ. ಅದರಂತೆ ಯುವತಿಯ ಆಧಾರ್ ಕಾರ್ಡ್ನಲ್ಲಿ ಹುಟ್ಟಿದ ವರ್ಷವನ್ನು 2005 ಆಗಿದ್ದನ್ನು 2000 ಇಸವಿಗೆ ಬದಲಾಯಿಸಲಾಗಿದೆ. ಅಲ್ಲದೆ ಲಗ್ಗೆರೆ ಸಬ್ ರಿಜಿಸ್ಟ್ರಾರ್ ಆಫೀಸ್ನಲ್ಲಿ ಮದುವೆಯಾಗಲು ದಾಖಲೆಗಳನ್ನು ಮನು ನೀಡಿದ್ದನು.
ಅದಾಗ್ಯೂ ಆಧಾರ್ ಕಾರ್ಡ್ನಲ್ಲಿ ಇಸವಿ ತಿದ್ದುಪಡಿ ಮಾಡಿವುದು ತಿಳಿದುಬಂದ ಹಿನ್ನೆಲೆ ರಾಜಗೋಪಾಲನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಯುವತಿಯ ಆಧಾರ್ ಕಾರ್ಡ್ ಅನ್ನು ಬದಲಿಸಿ ಕೊಟ್ಟವರ ಬಂಧನಕ್ಕೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿಯನ್ನೇ ಹತ್ಯೆಗೈದ ಪತಿ
ಆನೇಕಲ್: ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತ್ನಿಯನ್ನೇ ಪತಿಮಹಾಶಯನೊಬ್ಬ ಹತ್ಯೆಗೈದ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಹೂವಾಡಿಗಾರ ಬೀದಿಯಲ್ಲಿ ಪ್ರೇಮಾ(25) ಕೊಲೆಯಾದ ಮಹಿಳೆ. ತನ್ನ ಪತ್ನಿ ಪ್ರೇಮಾಳಿಗೆ ಅನೈತಿಕ ಸಂಬಂಧ ಇದೆ ಎಂದು ಶಂಕಿಸಿದ ವೆಂಕಟೇಶಾಚಾರಿ, ಜಗಳ ಮಾಡಿಕೊಂಡಿದ್ದಾನೆ. ಈ ವೇಳೆ ಜಗಳ ತಾರಕಕ್ಕೇರಿ ವೆಂಕಟೇಶಾಚಾರಿ, ಪತ್ನಿ ಕತ್ತು ಮತ್ತು ಕೈ ಭಾಗಕ್ಕೆ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ನಂತರ ಆನೇಕಲ್ ಪೊಲೀಸರಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡ್ರಗ್ಸ್ ಪೆಡ್ಲಿಂಗ್; ಮೂವರು ಅರೆಸ್ಟ್
ಬೆಂಗಳೂರು: ಡ್ರಗ್ಸ್ ಪೆಡ್ಲಿಂಗ್ನಲ್ಲಿ ತೊಡಗಿದ್ದ ಮೂವರು ಆರೋಪಿಗಳ ಸಹಿತ 90 ಲಕ್ಷ ರೂ. ಮೌಲ್ಯದ ಮಾದಕವಸ್ತುವನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಮಿತ್ರಾ, ಸೀತಾ, ಚಂದ್ರಶೇಖರ್ ಬಂಧಿತ ಆರೋಪಿಗಳಾಗಿದ್ದಾರೆ. ಆಂಧ್ರಪ್ರದೇಶದಿಂದ ಮಾದಕವಸ್ತು ತರುತ್ತಿದ್ದ ಆರೋಪಿಗಳು ಅದನ್ನು ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಅದರಂತೆ ಮಾಗಡಿ ರೋಡ್ ಬಳಿ ಮಾದಕವಸ್ತುವನ್ನು ಮಾರಾಟ ಮಾಡುತ್ತಿರುವ ವಿಚಾರ ತಿಳಿದ ಸಿಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 940 ಗ್ರಾಂ ಅಶಿಶ್ ಆಯಿಲ್, 10 ಕೆಜಿ ಗಾಂಜಾ, 2 ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರ ವಿರುದ್ಧ ಮಾಗಡಿರಸ್ತೆ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Published On - 11:54 am, Sat, 16 July 22