Crime News: ಬಾತ್ರೂಂನಲ್ಲಿ ಹುಟ್ಟಿದ ಮಗುವನ್ನು ಕತ್ತು ಹಿಸುಕಿ ಕೊಂದ ತಾಯಿ!
ಕೊಚ್ಚಿಯಲ್ಲಿ ತಾನು ಹೆತ್ತ ಮಗುವನ್ನು ಕೊಂದಿರುವುದಾಗಿ ಒಪ್ಪಿಕೊಂಡಿರುವ 23 ವರ್ಷದ ಮಹಿಳೆಯ ವಿರುದ್ಧ ಪೊಲೀಸರು ಕೊಲೆ ಕೇಸ್ ದಾಖಲಿಸಿದ್ದಾರೆ. ತನಿಖೆ ವೇಳೆ ತಾನು ಮಗುವನ್ನು ಕೊಲ್ಲಲು ಕಾರಣವೇನೆಂಬುದರ ಬಗ್ಗೆ ಆ ಮಹಿಳೆ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾಳೆ.
ಕೊಚ್ಚಿ: ತಾನೇ ಹೆತ್ತ ಮಗುವೆಂಬ ಅನುಕಂಪವೂ ಇಲ್ಲದೆ ಕೊಚ್ಚಿಯ ಮಹಿಳೆಯರೊಬ್ಬರು ನವಜಾತ ಶಿಶುವನ್ನು ಕತ್ತು ಹಿಸುಕಿ, ಕೆಳಗೆ ಎಸೆದು ಕೊಂದಿರುವ ಆಘಾತಕಾರಿ ಘಟನೆ (Shocking News) ನಡೆದಿದೆ. ಕೊಚ್ಚಿಯ (Kochi) ಅಪಾರ್ಟ್‌ಮೆಂಟ್‌ನಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದ ಮಹಿಳೆ ಶುಕ್ರವಾರ ಬೆಳಿಗ್ಗೆ ತನ್ನ ಬಾತ್ ರೂಂನಲ್ಲೇ ಮಗುವಿಗೆ ಜನ್ಮ ನೀಡಿದ್ದಳು. ಆಕೆ ತಾನು ಗರ್ಭಿಣಿಯಾಗಿದ್ದ (Pregnant) ವಿಷಯವನ್ನು ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ. ತನಗೆ ಮಗು ಹುಟ್ಟಿದಾಗ ನಡುಗುತ್ತಿದ್ದ ಆಕೆ ಏನು ಮಾಡುವುದೆಂದು ಗೊತ್ತಾಗದೆ ಚಡಪಡಿಸುತ್ತಿದ್ದಳು.
ಆಗ ಆ ಮಹಿಳೆಯ ತಾಯಿ ಆಕೆಯ ರೂಮಿನ ಬಾಗಿಲು ತಟ್ಟಿದ್ದಾಳೆ. ಅಮ್ಮನಿಗೆ ತಾನು ಮಗು ಹೆತ್ತಿರುವ ವಿಷಯ ಗೊತ್ತಾಗುತ್ತದೆ ಎಂಬ ಭಯದಲ್ಲಿ ಆ ಮಹಿಳೆ ನವಜಾತ ಶಿಶುವನ್ನು ಕೊರಿಯರ್ ಕವರ್‌ನಲ್ಲಿ ತುಂಬಿ, ಆ ಮಗುವಿನ ಬಾಯಿಗೆ ಬಟ್ಟೆ ತುರುಕಿದ್ದಾಳೆ. ಅಲ್ಲದೆ, ಆ ಮಗುವಿನ ಕತ್ತು ಹಿಸುಕಿ ಬಾಕ್ಸ್ನಲ್ಲಿಟ್ಟು ರಸ್ತೆಗೆ ಎಸೆದಿದ್ದಾಳೆ. ಇದರಿಂದಾಗಿ ಮಗು ಸಾವನ್ನಪ್ಪಿದೆ.
ಸದ್ಯ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಆ ಮಹಿಳೆಯ ವಿರುದ್ಧ ಪೊಲೀಸರು ಕೊಲೆ ಆರೋಪವನ್ನು ದಾಖಲಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಕೇರಳದ ಟಿವಿ ಚಾನೆಲ್‌ಗಳಲ್ಲಿ ಈ ಆಘಾತಕಾರಿ ಸುದ್ದಿಗಳು ಬಿತ್ತರವಾಗಿವೆ. ಪ್ಲಾಸ್ಟಿಕ್ ಪ್ಯಾಕೆಟ್‌ನಲ್ಲಿ ಸುತ್ತಿದ ಶಿಶುವನ್ನು ಕೊಚ್ಚಿಯ ಅಪಾರ್ಟ್‌ಮೆಂಟ್‌ನಿಂದ ಬೀಳುತ್ತಿರುವುದನ್ನು ತೋರಿಸುವ ಸಿಸಿಟಿವಿ ಕ್ಲಿಪ್ ಅನ್ನು ಟಿವಿ ಚಾನೆಲ್‌ಗಳು ಪ್ರಸಾರ ಮಾಡಿದ್ದವು.
ಇದನ್ನೂ ಓದಿ: ವಿಜಯಪುರ: ಗರ್ಭಿಣಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ; ಏನಿದು ಪ್ರಕರಣ?
ಪ್ರಾಥಮಿಕ ತನಿಖೆಯ ನಂತರ, ಅಪಾರ್ಟ್ಮೆಂಟ್ನ 5ನೇ ಮಹಡಿಯಲ್ಲಿ ವಾಸಿಸುವ ಮಹಿಳೆ ಮತ್ತು ಆಕೆಯ ಪೋಷಕರನ್ನು ಪೊಲೀಸರು ಸುತ್ತುವರೆದಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದಾಗ ಆ ಮಹಿಳೆ ತಾನೇ ತನ್ನ ಮಗುವನ್ನು ರಸ್ತೆಗೆ ಎಸೆದಿರುವುದನ್ನು ಒಪ್ಪಿಕೊಂಡಿದ್ದಾಳೆ. ಆಕೆಯ ಪೋಷಕರು ತಮ್ಮ ಮಗಳು ಏನು ಮಾಡಿದ್ದಾಳೆ, ಆಕೆಗೆ ಯಾವಾಗ ಡೆಲಿವರಿ ಆಯಿತು ಎಂಬುದರ ಬಗ್ಗೆ ಸುಳಿವು ಕೂಡ ತಮಗೆ ಇಲ್ಲ ಎಂದು ಹೇಳಿದ್ದಾರೆ.
ಮಹಿಳೆ ಅತ್ಯಾಚಾರ ಸಂತ್ರಸ್ತೆಯೇ ಎಂಬುದು ವಿವರವಾದ ತನಿಖೆಯಿಂದ ತಿಳಿದುಬರಲಿದೆ ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತರು ಶುಕ್ರವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತ್ರಿಶೂರ್‌ನ ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
23 ವರ್ಷದ ಮಹಿಳೆಗೆ ಇನ್ನೂ ಮದುವೆಯಾಗಿಲ್ಲ. ಆಕೆ ಗರ್ಭ ಧರಿಸಿದ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಈ ಹಿಂದೆ ಗರ್ಭಪಾತ ಮಾಡಲು ಪ್ರಯತ್ನಿಸಿದ್ದರೂ ಆಕೆಯ ಪ್ರಯತ್ನ ವಿಫಲವಾಗಿತ್ತು. ಹೀಗಾಗಿ, ಹೆರಿಗೆಯಾದ ತಕ್ಷಣ ಮಗುವನ್ನು ಕತ್ತು ಹಿಸುಕಿ ಕೊಂದಿರುವುದಾಗಿ ಆಕೆ ಪೊಲೀಸರ ಬಳಿ ಒಪ್ಪಿಕೊಂಡಿದ್ದಾಳೆ. ಹೆರಿಗೆಯ ನಂತರ ಮಗುವನ್ನು ಸಾಯಿಸಲು ಅಂತರ್ಜಾಲದಲ್ಲಿ ಮಾಹಿತಿ ಸಂಗ್ರಹಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ಮಗುವಿಗೆ ಜನ್ಮ ನೀಡಿದ ಭಯವೇ ಈ ಕೃತ್ಯ ಎಸಗಲು ಕಾರಣವಾಯಿತು ಎಂದು ಪೊಲೀಸರಿಗೆ ತಿಳಿಸಿದ್ದಾಳೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಗರ್ಭಿಣಿಯರು ತೆಗೆದುಕೊಳ್ಳಲೇಬೇಕಾದ ಮುನ್ನೆಚ್ಚರಿಕಾ ಕ್ರಮಗಳಿವು
ತನ್ನ ನವಜಾತ ಶಿಶುವಿನ ಹತ್ಯೆಯ ಬಗ್ಗೆ ಮಹಿಳೆ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದು, ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಶುಕ್ರವಾರ ಮುಂಜಾನೆ 5 ಗಂಟೆ ಸುಮಾರಿಗೆ ಮಗು ಜನಿಸಿದ್ದು, ಗಾಬರಿಗೊಂಡ ಆಕೆ ಮಗುವನ್ನು ಕತ್ತು ಹಿಸುಕಲು ಯತ್ನಿಸಿದ್ದಾಳೆ. ಮಗುವಿನ ಅಳುವನ್ನು ತಡೆಯಲು ಅವಳು ಮಗುವಿನ ಬಾಯಿಗೆ ಬಟ್ಟೆಗಳನ್ನು ತುಂಬಿದಳು. ನಂತರ ಅವಳು ಮಗುವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಹೊರಗೆ ಎಸೆದಳು.
ತಾನು ಗರ್ಭಿಣಿಯಾಗಿರುವ ಬಗ್ಗೆ ತನ್ನ ಪೋಷಕರಿಗೆ ತಿಳಿದಿರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಪೋಷಕರೂ ಇದೇ ರೀತಿ ಹೇಳಿಕೆ ನೀಡಿದ್ದಾರೆ. ಆದರೆ, ಪೋಷಕರ ಪಾತ್ರದ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಈ ವಿಷಯದ ಬಗ್ಗೆ ಹೆಚ್ಚಿನ ಸ್ಪಷ್ಟತೆ ಪಡೆಯಲು ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸಲು ಯೋಜಿಸಿದ್ದಾರೆ. ಆ ಮಹಿಳೆ ಪ್ರಸ್ತುತ ಎರ್ನಾಕುಲಂ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ