ಬೆಂಗಳೂರು, ಡಿಸೆಂಬರ್ 17: ಮುಂಬೈ (Mumbai) ಮೂಲದ ಸೈಬರ್ ವಂಚಕರು (Cyber Crime) ಸಿಬಿಐ ಪೊಲೀಸರ (CBI Police) ಹೆಸರಿನಲ್ಲಿ ಬೆಂಗಳೂರಿನ 83 ವರ್ಷದ ವೃದ್ದೆಗೆ 1 ಕೋಟಿಗೂ ಅಧಿಕ ಹಣ ವಂಚಿಸಿದ್ದಾರೆ. ಮುಂಬೈ ಪೊಲೀಸರ ಹೆಸರಿನಲ್ಲಿ ಕರೆ ಮಾಡಿದ್ದ ಆರೋಪಿಗಳು, “ನಿಮ್ಮ ಮತ್ತೊಂದು ದೂರವಾಣಿ ಸಂಖ್ಯೆಯಿಂದ ಮನಿ ಲ್ಯಾಂಡರಿಂಗ್ ನಡೆಯುತ್ತಿದೆ. ನಿಮ್ಮ ವಿರುದ್ಧ ಮನಿ ಲ್ಯಾಂಡರಿಂಗ್ ಕೇಸ್ ದಾಖಲಾಗಿದೆ ಎಂದು ವೃದ್ಧೆಗೆ ಬೆದರಿಕೆ ಹಾಕಿದ್ದಾರೆ.
ಬಳಿಕ, ಆರೋಪಿಗಳು ವೃದ್ಧೆಯ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದಿದ್ದಾರೆ. ಆರೋಪಿಗಳ ಬೆದರಿಕೆಗೆ ಹೆದರಿದ ವೃದ್ಧೆ ಆರೋಪಿಗಳ ಖಾತೆ ಹಂತ ಹಂತವಾಗಿ 32 ಲಕ್ಷ ರೂ., 50 ರೂ. ಲಕ್ಷ, 32 ಲಕ್ಷ ರೂ., 10 ಲಕ್ಷ ರೂ. ಒಟ್ಟು 1.24 ಕೋಟಿ ರೂ. ಸೈಬರ್ ವಂಚಕರ ಖಾತೆಗೆ ವರ್ಗಾವಣೆ ಮಾಡಿದ್ದಾರೆ.
ಹಣ ಖಾತೆಗೆ ಜೆಮೆಯಾದ ಬಳಿಕ ಆರೋಪಿಗಳು ಮತ್ತೆ ಸಂಪರ್ಕಿಸಿದ ಹಿನ್ನೆಲೆಯಲ್ಲಿ ವೃದ್ಧೆ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ, ವಂಚನೆಗೆ ಒಳಗಾಗಿರುವುದು ತಿಳಿದುಕೊಡಿದ್ದಾರೆ. ನಂತರ, ಘಟನೆ ನಡೆದು ಎರಡು ತಿಂಗಳ ಬಳಿಕ ವೃದ್ಧೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ವೃದ್ಧೆ ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಳೆದ ತಿಂಗಳಷ್ಟೇ ಇದೇ ರೀತಿಯಾಗಿ ಸೈಬರ್ ಕ್ರೈಂ ನಡೆದಿತ್ತು. ವಂಚಕರು ವೃದ್ದೆಯೊಬ್ಬರಿಂದ 10 ಲಕ್ಷ ಹಣ ಸುಲಿಗೆ ಮಾಡಿದ್ದರು.
ಸೈಬರ್ ವಂಚಕರು ವಿಡಿಯೋ ಕರೆ ಮಾಡಿ ಹೆದರಿಸಿ ಅಮಾಯಕರಿಂದ ಹಣ ವಸೂಲಿ ಮಾಡಿರುವ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದಿತ್ತು. ರಮೇಶ್ ನೂಲ್ವಿ ಹಣ ಕಳೆದುಕೊಂಡಿದ್ದ ವ್ಯಕ್ತಿ. ಪೊಲೀಸ್ ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ರಮೇಶ್ ನೂಲ್ವಿ ಎಂಬುವರಿಗೆ ವಿಡಿಯೋ ಕರೆ ಮಾಡಿದ್ದನು. ಆತ ಪೊಲೀಸ್ ಠಾಣೆಯಲ್ಲಿ ಕುಳಿತು ಮಾತನಾಡುತ್ತಿರುವಂತೆ ಠಾಣೆಯ ಸೆಟ್ ಕೂಡ ಇತ್ತು. ನಿಮ್ಮ ಮೇಲೆ ಅಕ್ರಮ ಹಣ ವರ್ಗಾವಣೆ, ಡ್ರಗ್ಸ್ ಸಾಗಾಣಿಕೆ ಕೇಸು ದಾಖಲಾಗಿದ್ದು, ಕೋರ್ಟ್ ಅರೆಸ್ಟ್ ವಾರೆಂಟ್ ನೀಡಿದೆ ಎಂದು ಹೇಳಿದ್ದನು. ಅಲ್ಲದೇ, ನೀವು ಕೂಡಲೇ ಮುಂಬೈ ಕ್ರೈಂ ಬ್ರ್ಯಾಂಚ್ಗೆ ಹಾಜರಾಗಬೇಕು ಅಂತ ರಮೇಶ್ ಅವರಿಗೆ ಹೇಳಿದ್ದನು. ಅಲ್ಲದೇ, ನಕಲಿ ವಾರೆಂಟ್ ಪ್ರತಿಯನ್ನು ಕೂಡ ಕಳಿಸಿದ್ದನು.
ಇದನ್ನು ನೋಡಿದ ರಮೇಶ ಭಯಗೊಂಡು, ಆರೋಪಿ ಕೇಳಿದ ಖಾತೆಗೆ 3 ಲಕ್ಷ ರೂ. ಕೂಡಲೇ ವರ್ಗಾವಣೆ ಮಾಡಿದ್ದರು. ಬಳಿಕ, ರಮೇಶ್ ಅವರಿಗೆ ಇವರೆಲ್ಲ ನಕಲಿ ಅಧಿಕಾರಿಗಳು ಎಂಬುವುದು ಗೊತ್ತಾಗಿತ್ತು. ಕೂಡಲೇ ಧಾರವಾಡದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಂಥ ಮೋಸಕ್ಕೆ ಬಲಿಯಾಗಬೇಡಿ ಅಂತ ಧಾರವಾಡ ಎಸ್ಪಿ ಡಾ. ಗೋಪಾಲ ಬ್ಯಾಕೋಡ್ ಮನವಿ ಮಾಡಿದ್ದರು.
ವರದಿ:- ಪ್ರದೀಪ್
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ