ಗಂಡನಿಗೆ ಮತ್ತೊಬ್ಬಳ ಸಹವಾಸ, ವರದಕ್ಷಿಣೆ ಕಿರುಕುಳ: ನೊಂದ ಗೃಹಿಣಿ, ಮಗುವಿನ ಜೊತೆ ಕೆರೆಯಲ್ಲಿ ಸೂಸೈಡ್

ಕಲ್ಕುಂಟೆ ಅಗ್ರಹಾರ ಗ್ರಾಮದಲ್ಲಿ ಶ್ವೇತಾ ತನ್ನ ಮಗನ ಜೊತೆ ಹೊರಗಡೆ ಹೋದವಳು ನಂತರ ಮನೆಗೆ ವಾಪಸ್ ಆಗಿಲ್ಲ. ಪೋಷಕರು ಬಂದು ಊರೆಲ್ಲ ಹುಡುಕಾಡಿದ್ದಾರೆ. ಆದ್ರೆ ಎಲ್ಲೂ ಕಾಣದಿದ್ದಾಗ ಗ್ರಾಮಸ್ಥರೊಬ್ಬರು ಕೆರೆ ಏರಿ ಮೇಲೆ ಮಗು ಜೊತೆ ಹೋಗ್ತಿದ್ದಾಗಿ ಹೇಳಿದ್ರಂತೆ. ಕೆರೆಯಲ್ಲಿ ಶೋಧ ಕಾರ್ಯ ನಡೆಸಿದಾಗ ಶ್ವೇತ ಮತ್ತು ಮಗು ಶವವಾಗಿ ಪತ್ತೆಯಾಗಿದ್ದಾರೆ.

ಗಂಡನಿಗೆ ಮತ್ತೊಬ್ಬಳ ಸಹವಾಸ, ವರದಕ್ಷಿಣೆ ಕಿರುಕುಳ: ನೊಂದ ಗೃಹಿಣಿ, ಮಗುವಿನ ಜೊತೆ ಕೆರೆಯಲ್ಲಿ ಸೂಸೈಡ್
ನೊಂದ ಗೃಹಿಣಿ, ಮಗುವಿನ ಜೊತೆ ಕೆರೆಯಲ್ಲಿ ಸೂಸೈಡ್
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 21, 2022 | 4:23 PM

ಆಕೆ ಜಸ್ಟ್ 2 ವರ್ಷಗಳಿಂದಷ್ಟೆ ಮನೆಯವರು ನೋಡಿದ ವರನ ಜೊತೆ ಸಪ್ತಪದಿ ತುಳಿದಿದ್ದಳು. ಮದುವೆಯಾದ 2 ವರ್ಷಕ್ಕೆ ಮಗು ಸಹ ಆಗಿದ್ದು ಮಗಳ ಬಾಳು ಬಂಗಾರವಾಗುತ್ತೆ ಅಂತಲೆ ಎಲ್ಲರೂ ಅಂದುಕೊಂಡಿದ್ರು,. ಆದ್ರೆ ಎರಡನೆ ವರ್ಷದ ವಿವಾಹ ಸಂಭ್ರಮ ಮನೆ ಮಾಡುವ ಮುನ್ನವೆ ಮನ-ಮನೆಯ ತುಂಬ ಸೂತಕ ಆವರಿಸಿದೆ. ಬಾಳಿ ಬದುಕಬೇಕಿದ್ದ ಮಗಳು ದುರಂತ ಅಂತ್ಯ ಕಂಡಿದ್ದಾಳೆ. ಗಂಡನ ಮನೆಯಲ್ಲಿ ಸುಖವಾಗಿ ಬಾಳಿ ಬದುಕುತ್ತಾಳೆ ಅಂದುಕೊಂಡಿದ್ದ ಹೆತ್ತ ಮಗಳ ದುರಂತ ಅಂತ್ಯ ಕಂಡು ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ, ನೂರಾರು ಕಾಲ ಸುಖವಾಗಿ ಬಾಳಿ ಬದುಕಬೇಕಿದ್ದವಳನ್ನ ದುರಂತ ಅಂತ್ಯ ಕಾಣಿಸಿದ್ದಾನೆ (suicide) ಅಂತ ಅಳಿಯನ ವಿರುದ್ದ ಆಕ್ರೋಶದ ಜ್ವಾಲೆಯನ್ನೆ ಉಗುಳುತ್ತಿದ್ದಾರೆ. ಆ ಗೃಹಿಣಿಯ (woman) ಹೆಸರು ಶ್ವೇತ. ಮೂಲತಃ ಕೆಆರ್ ಪುರಂ ಬಳಿಯ ಮೇಡಹಳ್ಳಿ ನಿವಾಸಿಯಾಗಿದ್ದ ಈಕೆಯನ್ನ ಎರಡು ವರ್ಷಗಳಿಂದಷ್ಟೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ (hoskote) ತಾಲೂಕಿನ ಕಲ್ಕುಂಟೆ ಅಗ್ರಹಾರ (kalkunte) ಗ್ರಾಮದ ರಾಕೇಶ್ ಗೆ ಕೊಟ್ಟು ಮದುವೆ ಮಾಡಿದ್ರು. ಅನ್ಯೋನ್ಯ ಸಂಸಾರಕ್ಕೆ ಒಂದು ಗಂಡು ಮಗು ಸಹ ಸಾಕ್ಷಿಯಾಗಿತ್ತು. ಆದ್ರೆ ಮದುವೆಯಾಗಿ ಎರಡು ವರ್ಷ ಕಳೆಯುವಷ್ಟರಲ್ಲೆ ಪತಿರಾಯ ರಾಕೇಶ್ ಗ್ರಾಮದ ಬೇರೊಬ್ಬ ಮಹಿಳೆಯ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿರುವುದು ಪತ್ನಿಗೆ ಗೊತ್ತಾಗಿತ್ತಂತೆ.

ಹೀಗಾಗಿ ಹಲವು ಬಾರಿ ಇದೇ ವಿಚಾರವಾಗಿ ಗಂಡ ಹೆಂಡತಿ ನಡುವೆ ಜಗಳ ನಡೆದಿದ್ದು ಹಲವು ಬಾರಿ ಎರಡೂ ಮನೆಯವರು ಕುಳಿತು ರಾಜಿ ಪಂಚಾಯ್ತಿ ಮಾಡಿದ್ದಾರೆ. ಆದ್ರೆ ಎಷ್ಟೇ ಬುದ್ದಿವಾದ ಹೇಳಿದರೂ ಗಂಡ ಕೇಳದೆ ಅದೇ ಹಳೆ ಚಾಳಿ ಮುಂದುವರೆಸಿದ್ದಾನೆ. ಇತ್ತೀಚೆಗೆ ಪತ್ನಿ ಶ್ವೇತಾಗೆ ವರದಕ್ಷಿಣೆ ಕಿರುಕುಳವನ್ನು (dowry torture) ನೀಡಿದ್ದಾನಂತೆ. ಹೀಗಾಗಿ ರಾಜಿ ಪಂಚಾಯ್ತಿ ಮಾಡಿದರೂ ಗಂಡ ಸರಿಹೋಗಿಲ್ಲ ಅಂತಾ ಮನನೊಂದು ಗೃಹಿಣಿ ಶ್ವೇತಾ ಸೋಮವಾರ ಸಂಜೆ ಒಂದೂವರೆ ವರ್ಷದ ಮಗು ಜೊತೆ ಮನೆ ಬಿಟ್ಟು ಹೋಗಿದ್ದು ಗ್ರಾಮದ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕಲ್ಕುಂಟೆ ಅಗ್ರಹಾರ ಗ್ರಾಮದಲ್ಲಿ ತನ್ನ ಮನೆಯಿಂದ ಗೃಹಿಣಿ ಶ್ವೇತಾ ಒಂದೂವರೆ ವರ್ಷದ ಮಗನ ಜೊತೆ ಹೊರಗಡೆ ಹೋದವಳು ನಂತರ ಮನೆಗೆ ವಾಪಸ್ ಆಗಿಲ್ಲ. ಆತಂಕಗೊಂಡ ಗಂಡನ ಮನೆಯವರು ಮೃತಳ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು ಪೋಷಕರು ಬಂದು ಊರೆಲ್ಲ ಹುಡುಕಾಡಿದ್ದಾರೆ. ಆದ್ರೆ ಎಲ್ಲೂ ಕಾಣದಿದ್ದಾಗ ಗ್ರಾಮಸ್ಥರೊಬ್ಬರು ಕೆರೆ ಏರಿ ಮೇಲೆ ಮಗು ಜೊತೆ ಹೋಗ್ತಿದ್ದಾಗಿ ಹೇಳಿದ್ರಂತೆ. ಹೀಗಾಗಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದಾಗ ಶ್ವೇತ ಮತ್ತು ಒಂದೂವರೆ ವರ್ಷದ ಯಕ್ಷಿತ್ ಶವವಾಗಿ ಪತ್ತೆಯಾಗಿದ್ದಾರೆ.

ಇನ್ನು ಮದುವೆಗೆ ಅಂತ ಲಕ್ಷ ಲಕ್ಷ ಹಣ ಚಿನ್ನಾಭರಣ ಎಲ್ಲವನ್ನೂ ಕೊಟ್ಟು ಮದುವೆ ಮಾಡಿದ್ದರೂ ಬೇರೊಬ್ಬಳ ಸಹವಾಸಕ್ಕೆ ಬಿದ್ದು ಕಿರುಕುಳ ನೀಡಿದ ಕಾರಣ ನಮ್ಮ ಮಗಳು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದು ಇದಕ್ಕೆಲ್ಲ ಕಾರಣ ಗಂಡ ರಾಕೇಶ್ ಮತ್ತು ಅವರ ಮನೆಯವರು ಅಂತ ಮೃತಳ ಪೋಷಕರು ಆರೋಪಿಸಿದ್ದಾರೆ. ಪೋಷಕರಿಗೆ ಮಗಳ ದುರಂತ ಅಂತ್ಯ ತೀರದ ನೋವನ್ನುಂಟು ಮಾಡಿದೆ. ಮದುವೆಯಾದ ಎರಡು ವರ್ಷಕ್ಕೆ ಮಗುವಿನ ಸಮೇತ ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದು ನಿಜಕ್ಕೂ ದುರಂತ.

ವರದಿ: ನವೀನ್, ಟಿವಿ 9, ದೇವನಹಳ್ಳಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ