ಅಮೆರಿಕ: ಮನೆಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣವೊಂದರಲ್ಲಿ ಯಜಮಾನನ ಕೊಲೆ, ಇಬ್ಬರು ಹೆಣ್ಣಮಕ್ಕಳ ಮೇಲೂ ಚಾಕು ಪ್ರಹಾರ
ಕೊಲೆ ಯಾಕೆ ನಡೆಯಿತು, ಹೇಗೆ ನಡೆಯಿತು ಅಂತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಇದುವರೆಗೆ ಯಾರನ್ನೂ ಬಂಧಿಸಿಲ್ಲ. 22-ವರ್ಷದ ಯುವತಿಯನ್ನು ಅವರು ಪ್ರಶ್ನಿಸುತ್ತಿದ್ದಾರೆ ಮತ್ತು ಆಕೆ ನೀಡಿರುವ ಹೇಳಿಕೆಗಳಿಗೆ ಪೂರಕವಾಗುವ ಸಾಕ್ಷ್ಯಾಧಾರಗಳನ್ನು ಶೋಧಿಸುತ್ತಿದ್ದಾರೆ.
ಅಮೆರಿಕದ ನ್ಯೂ ಯಾರ್ಕ್ (New York) ನಗರದದ ಬ್ರೂಕ್ಲಿನ್ ಪ್ರದೇಶದಲ್ಲಿ ವಾಸವಾಗಿದ್ದ ಒಂದು ಅಮಾಯಕ ಕುಟುಂಬದ ಮೇಲೆ ಹಂತಕರಿಗೆ ಅದ್ಯಾವ ದ್ವೇಷವಿತ್ತೋ? ಅವರ ಮನೆಗೆ ಕ್ರಿಸ್ಮಸ್ ಮುನ್ನಾದಿನ ನುಗ್ಗಿದ ಕೊಲೆಗಡುಕರು ಮನೆಯ ಯಜಮಾನ 61-ವರ್ಷ-ವಯಸ್ಸಿನ ಕಾರ್ಲೊ ಸೆಕಂಡಿಮೊ (Carlo Secondino) ಹರಿತವಾದ ಆಯುಧಗಳಿಂದ ಇರಿದು ಕೊಂದಿದ್ದಾರೆ ಮತ್ತು ಅವರು ಇಬ್ಬರು ಹೆಣ್ಣುಮಕ್ಕಳ ಮೇಲೆ ಕೂಡ ಮಾರಣಾಂತಿಕ (fatal) ಹಲ್ಲೆ ನಡೆಸಿದ್ದಾರೆ. 19-ವರ್ಷದ ಅವರ ಕಿರಿಯ ಮಗಳು ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೆ 22-ವರ್ಷದ ಹಿರಿ ಮಗಳ ಕೈಗೆ ಮೇಲೆ ಇರಿತದ ಗಾಯಗಳಾಗಿವೆ. ಚಿಕಿತ್ಸೆಯ ಬಳಿಕ ಆಕೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಆದರೆ ಕಿರಿ ಮಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
22-ವರ್ಷದ ಯುವತಿ ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ ಇಬ್ಬರು ಹಂತಕರು ಏಕಾಏಕಿ ಮನೆಯೊಳಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಸೇಫ್ ನಿಂದ ಹಣ ಹೊರತೆಗೆದು ತಮಗೆ ನೀಡಬೇಕೆಂದು ಅವರು ಒತ್ತಾಯಿಸಿದರೆಂದು ಆಕೆ ಪೊಲೀಸರಿಗೆ ಹೇಳಿದ್ದಾಳಾದರೂ ಅಧಿಕಾರಿಗಳು ಮನೆಯ ಪರಿಶೀಲನೆ ನಡೆಸುವಾಗ ಸೇಫ್ ಕಾಣಿಸಿಲ್ಲ.
ಇದನ್ನೂ ಓದಿ: ಸೆನ್ಸೇಷನಲ್ ಕ್ರೈಮ್ ಕತೆಗಳು: ತೂತುಕುಡಿಯ ಅಮಾನುಷ ಜೋಡಿ ಲಾಕಪ್ ಕೊಲೆ ತಮಿಳುನಾಡು ಜನರನ್ನು ತತ್ತರಿಸುವಂತೆ ಮಾಡಿದ್ದವು!
ಕೊಲೆ ಯಾಕೆ ನಡೆಯಿತು, ಹೇಗೆ ನಡೆಯಿತು ಅಂತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಇದುವರೆಗೆ ಯಾರನ್ನೂ ಬಂಧಿಸಿಲ್ಲ. 22-ವರ್ಷದ ಯುವತಿಯನ್ನು ಅವರು ಪ್ರಶ್ನಿಸುತ್ತಿದ್ದಾರೆ ಮತ್ತು ಆಕೆ ನೀಡಿರುವ ಹೇಳಿಕೆಗಳಿಗೆ ಪೂರಕವಾಗುವ ಸಾಕ್ಷ್ಯಾಧಾರಗಳನ್ನು ಶೋಧಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಈಗಲೂ ಕಾರ್ಲೊ ಅವರ ಮನೆಗೆ ಭೇಟಿ ನೀಡುವುದನ್ನು ಮುಂದುವರಿಸಿದ್ದಾರೆ ಮತ್ತು ಅವರ ನೆರೆಹೊರೆಯವರೊಂದಿಗೆ ವಿಚಾರಣೆ ನಡೆಸುತ್ತಿದ್ದಾರೆ.
ಮಾಧ್ಯಮಗಳೊಂದಿಗೆ ಮಾತಾಡಿರುವ ಜಾನಿ ಶ್ಯೂ ಹೆಸರಿನ ನೆರೆಹೊರೆಯವರು, ‘ನನ್ನ ರೂಂಮೇಟ್ ಬೆಳಗ್ಗೆ 7 ಗಂಟೆಗೆ ಹೊರಟವನು ಕ್ಷಣಾರ್ಧದಲ್ಲಿ ವಾಪಸ್ಸು ಬಂದು ನನ್ನನ್ನು ಹೊರಗೆ ಕರೆದ. ನಾನು ಹೊರಗೆ ಹೋದಾಗ ಕಾರ್ಲೊ ಮನೆ ಸುತ್ತ ಜನ ನೆರೆದಿದ್ದರು. ಯಾರನ್ನೋ ಕೊಲ್ಲಲಾಗಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದರು,’ ಅಂತ ಹೇಳಿದ್ದಾರೆ.
ಮತ್ತೊಬ್ಬ ನೆರೆಮನೆಯವರಾದ ಜೋ ಪಗಾನೋ ಅವರಿಗೆ ಕಾರ್ಲೊ ಕುಟುಂಬದ ಪರಿಚಯವಿತ್ತು. ‘ಮನೇಲಿ ಒಬ್ಬ ತಂದೆ ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದರು. ಅವರು ಹೆಚ್ಚಾಗಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಅದಕ್ಕಿಂತ ಜಾಸ್ತಿ ನನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾರೆ. ‘ನಾನು 12-ವರ್ಷಗಳಿಂದ ಇಲ್ಲಿ ವಾಸವಾಗಿದ್ದೇನೆ ಮತ್ತು ಈ ಕುಟುಂಬ ಸಹ ಅಷ್ಟೇ ಸಮಯದಿಂದ ಇಲ್ಲಿ ವಾಸವಾಗಿದೆ,’ ಎಂದು ಜೋ ಹೇಳಿದ್ದಾರೆ.
ಕಾರ್ಲೊ ಡೆಲಿವರಿಮ್ಯಾನ್ ಅಗಿ ಕೆಲಸ ಮಾಡುತ್ತಿದ್ದ ಮೈಕ್ಸ್ ಡೈನರ್ ನ ಸಹ-ಮಾಲೀಕ ಯದೀರಾ ಗೊಮೆಜ್ ನ್ಯೂ ಯಾರ್ಕ್ ಪೋಸ್ಟ್ ಗೆ, ‘ಈ ಯುವತಿಯರು ಚಿಕ್ಕವರಾಗಿದ್ದಾಗಲೇ ಅವರಮ್ಮ ಕುಟುಂಬವನ್ನು ತೊರೆದು ಹೋದಳು. ಹಾಗಾಗಿ ಮಕ್ಕಳಿಗೆ ಕಾರ್ಲೊ ತಾಯಿ, ತಂದೆ ಎರಡೂ ಆಗಿದ್ದರು. ಇಲ್ಲಿರುವ ಪ್ರತಿಯೊಬ್ಬರು ಅವರನ್ನು ಇಷ್ಟಪಡುತ್ತಿದ್ದರು. ಅವರ ಸಾವು ನಮಗೆ ಬಹುದೊಡ್ಡ ಹಾನಿಯಾಗಿದೆ. ಕೆಲಸ ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಯಾರಾದರೂ ಸಹಾಯ ಕೇಳಿಕೊಂಡು ಹೋದರೆ ಇಲ್ಲ ಅನ್ನುತ್ತಿರಲಿಲ್ಲ, ಎಲ್ಲರಿಗೂ ನೆರವಾಗುತ್ತಿದ್ದರು,’ ಎಂದು ಹೇಳಿದ್ದಾರೆ. ತನಿಖೆ ಮುಂದುವರಿಯುತ್ತಿದೆ. ನ್ಯೂ ಯಾರ್ಕ್ ಪೋಸ್ಟ್ ವರದಿಯೊಂದರ ಪ್ರಕಾರ ಕಾರ್ಲೊ ಕುಟುಂಬದ ಮೇಲೆ ನಡೆದ ಆಕ್ರಮಣ ಪೂರ್ವನಿಯೋಜಿತವಾಗಿರಬಹುದು.
ನ್ಯೂ ಯಾರ್ಕ್ ಪೊಲೀಸ ಡಾಟಾ ಪ್ರಕಾರ ನಗರದಲ್ಲಿ ಕಳೆದ ಜನವರಿಯಿಂದ ಅಪರಾಧ ಪ್ರಮಾಣ ಶೇಕಡ 17 ರಷ್ಟು ಕಡಿಮೆಯಾಗಿದೆ ಮತ್ತು ಕೊಲೆ ಪ್ರಕರಣಗಳಲ್ಲಿ ಶೇಕಡ 12 ರಷ್ಟು ಇಳಿಕೆಯಾಗಿದೆ.
ಹೆಚ್ಚಿನ ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ