ಅಯ್ಯೋ ವಿಧಿಯೇ! ಬುದ್ಧಿ ಮಾತು ಹೇಳಿದ್ದಕ್ಕೆ ಅನಾಯಾಸವಾಗಿ ಕೊಲೆಯಾದ ವ್ಯಕ್ತಿ

ಹುಬ್ಬಳ್ಳಿ ನಗರದ ಗೌಶಿಯಾ ಟೌನ್​ನಲ್ಲಿ ಕಳೆದ ರಾತ್ರಿ ಭೀಕರ ಕೊಲೆ ನಡೆದಿದೆ. ಬುದ್ಧಿ ಮಾತು ಹೇಳಿದ್ದಕ್ಕೆ ವ್ಯಕ್ತಿಯೋರ್ವನನ್ನು ಕಲ್ಲಿನಿಂದ ಹೊಡೆದು ಹತ್ಯೆ ಮಾಡಲಾಗಿದೆ. ಸದ್ಯ ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಮನೆಗೆ ಆಧಾರವಾಗಿದ್ದ ವ್ಯಕ್ತಿಯನ್ನ ಕಳೆದುಕೊಂಡ ಕುಟುಂಬ ಕಂಗಾಲಾಗಿದೆ.

ಅಯ್ಯೋ ವಿಧಿಯೇ! ಬುದ್ಧಿ ಮಾತು ಹೇಳಿದ್ದಕ್ಕೆ ಅನಾಯಾಸವಾಗಿ ಕೊಲೆಯಾದ ವ್ಯಕ್ತಿ
ಕೊಲೆಯಾದ ವ್ಯಕ್ತಿ, ಆರೋಪಿ
Edited By:

Updated on: Jan 22, 2026 | 3:33 PM

ಹುಬ್ಬಳ್ಳಿ, ಜನವರಿ 22: ಆತ ಇಡೀ ಕುಟುಂಬಕ್ಕೆ ಆಧಾರವಾಗಿದ್ದ. ಹೋಟೆಲ್​​​ವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಾ ಸಂಸಾರ ನಡೆಸುತ್ತಿದ್ದ. ಬುದ್ಧ ಮಾತು ಹೇಳಿದ್ದಕ್ಕೆ ಇದೀಗ ಆತನೆ ಬಲಿ (death) ಆಗಿದ್ದಾನೆ. ಮನೆ ಮುಂದೆ ನಿಂತು ಗಲಾಟೆ ಮಾಡುತ್ತಿದ್ದ ಸಂಬಂಧಿಗೆ ಜಗಳ ಮಾಡಬೇಡ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಕೊಳ್ಳೋಣ ಅಂತ ಹೇಳಿದ್ದಕ್ಕೆ ಸಂಬಂಧಿಯೇ ಕಲ್ಲಿನಿಂದ ಹೊಡೆದು ಕೊಲೆ (murder) ಮಾಡಿದ್ದಾನೆ. ಮನೆಗೆ ಆಧಾರವಾಗಿದ್ದ ವ್ಯಕ್ತಿ ಕಳೆದುಕೊಂಡ ಕುಟುಂಬ ಕಂಗಾಲಾಗಿದೆ.

ನಡೆದದ್ದೇನು?

ಹುಬ್ಬಳ್ಳಿ ನಗರದ ಗೌಶಿಯಾ ಟೌನ್​​ನಲ್ಲಿ ಕಳೆದ ರಾತ್ರಿ ಘಟನೆ ನಡೆದಿದೆ. ಅಹ್ಮದ್ ರಜಾಕ್​​ (48) ಕೊಲೆಯಾದ ವ್ಯಕ್ತಿ. ಹೋಟೆಲ್​​ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಅಹ್ಮದ್ ರಜಾಕ್​ ಕಳೆದ ರಾತ್ರಿ 9 ಗಂಟೆ ಸಮಯದಲ್ಲಿ ಹಳೆ ಹುಬ್ಬಳ್ಳಿ ನಿವಾಸಿ ಸದ್ದಾಂ ಎಂಬಾತ ಕಲ್ಲಿನಿಂದ ಎದೆ ಸೇರಿದಂತೆ ತಲೆಗೆ ಹೊಡೆದಿದ್ದ. ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದ ಅಹ್ಮದ್ ರಜಾಕ್​ನನ್ನ ಕೂಡಲೇ ಹುಬ್ಬಳ್ಳಿ ಕಿಮ್ಸ್​ಗೆ ಕೆರೆದುಕೊಂಡು ಬರಲಾಗಿತ್ತು. ಆದರೆ ಆಸ್ಪತ್ರೆ ಸೇರುವ ಮುನ್ನವೇ ಅಹ್ಮದ್ ರಜಾಕ್ ಕೊನೆಯುಸಿರೆಳೆದಿದ್ದ. ಇನ್ನು ಅಹ್ಮದ್ ರಜಾಕ್​ನನ್ನು ಕೊಲೆ ಮಾಡಿರುವ ಸದ್ದಾಂ ಬೇರಾರು ಅಲ್ಲಾ, ಸಹೋದರನ ಮಗಳ ಗಂಡ. ಬುದ್ಧಿ ಮಾತು ಹೇಳಿದ್ದಕ್ಕೆ ಸದ್ದಾಂ, ಅಹ್ಮದ್ ರಜಾಕ್​​ನನ್ನ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಕೆಲಸ ಹುಡುಕಲು ಹೋದವಳು ಶವವಾಗಿ ಪತ್ತೆ, ಇಷ್ಟಪಟ್ಟವನೊಂದಿಗೆ ಬಾಳುವ ಮೊದಲೇ ದುರಂತ ಅಂತ್ಯ

ಕೊಲೆಯಾದ ಅಹ್ಮದ್ ರಜಾಕ್, ಗೌಸಿಯಾ ಟೌನ್​ನಲ್ಲಿರುವ ಸ್ವಂತ ಮನೆಯಲ್ಲಿ ವಾಸವಾಗಿದ್ದು, ಕಳೆಗಿನ ಮನೆಯಲ್ಲಿ ತಾನಿದ್ದರೆ, ಮೇಲಿನ ಮಹಡಿಯಲ್ಲಿ ಆತನ ಸಹೋದರ ಇಮ್ರಾನ್ ವಾಸವಾಗಿದ್ದ. ಇಮ್ರಾನ್​ನ ಪುತ್ರಿ ನೇಹಾ ಮದುವೆ ಆರು ವರ್ಷದ ಹಿಂದೆ ಸದ್ದಾಂ ಜೊತೆ ಆಗಿತ್ತು. ಆದರೆ ಮದುವೆಯಾದ ನಂತರ ಸದ್ದಾಂ ಮತ್ತು ನೇಹಾ ನಡುವೆ ಪ್ರತಿನಿತ್ಯ ಜಗಳ ವಾಗುತ್ತಿತ್ತಂತೆ. ಹೀಗಾಗಿ ನೇಹಾ ಎರಡು ತಿಂಗಳ ಹಿಂದಷ್ಟೇ ತವರು ಮನೆಗೆ ಬಂದಿದ್ದಳು. ಕಳೆದ ರಾತ್ರಿ ಸದ್ದಾಂ ಮತ್ತು ಆತನ ಕುಟುಂಬದವರು ಇಮ್ರಾನ್ ಮನೆಗೆ ಆಗಮಿಸಿದ್ದರು. ಮನೆಯೊಳಗೆ ಬಾರದೇ ಸದ್ದಾಂ ಹೊರಗಡೆ ನಿಂತು ಗಲಾಟೆ ಮಾಡುತ್ತಿದ್ದ. ಇದನ್ನು ನೋಡಿದ ಅಹ್ಮದ್ ರಜಾಕ್, ಮನೆಯೊಳಗ ಬಂದು ಕೂತು ಮಾತನಾಡಿ. ಸಮಸ್ಯೆಯನ್ನು ಜಮಾತ್​​ಗೆ ಹೋಗಿ ಅಲ್ಲಿ ಹಿರಿಯರ ಮುಂದಿಟ್ಟು ಬಗೆಹರಿಸಿಕೊಳ್ಳೋಣ ಅಂತ ಬುದ್ದಿ ಹೇಳಿದ್ದನಂತೆ.

ಇದರಿಂದ ಕೆರಳಿದ ಸದ್ದಾಂ, ಅಹ್ಮದ್ ರಜಾಕ್ ನನ್ನು ಮನೆಯಿಂದ ಹೊರಗಡೆ ಎಳೆದುಕೊಂಡು ಬಂದು, ಹಲ್ಲೆ ಮಾಡಿದ್ದನಂತೆ. ಜೊತೆಗೆ ಜೋರು ಗಲಾಟೆಯಲ್ಲಿ ತಳ್ಳಾಟ ನೂಕಾಟ ಕೂಡ ನಡೆದಿಯಂತೆ. ಈ ವೇಳೆ ಕೈನಿಂದ ಎದೆಗೆ ಹೊಡೆದಿದ್ದು, ಅಷ್ಟೇ ಅಲ್ಲದೆ ತನ್ನ ಬಳಿಯಿದ್ದ ಕೀಯಿಂದ ಸದ್ದಾಂ, ಅಹ್ಮದ್ ರಜಾಕ್ ಮೇಲೆ ಹಲ್ಲೆ ಮಾಡಿದ್ದನಂತೆ. ಈ ಗಲಾಟೆಯಲ್ಲಿ ಅಹ್ಮದ್ ರಜಾಕ್ ಮೃತಪಟ್ಟಿದ್ದಾನೆ.

ಇನ್ನು ಅಹ್ಮದ್ ರಜಾಕ್​ಗೆ ಮೂವರು ಪುತ್ರಿಯರಿದ್ದು, ಓರ್ವ ಪುತ್ರಿಯ ಮದುವೆ ಮಾತ್ರವಾಗಿದೆ. ಇನ್ನಿಬ್ಬರು ಮಕ್ಕಳ ಮದುವೆ ಸೇರಿದಂತೆ ಮನೆಯ ಖರ್ಚು, ವೆಚ್ಚಕ್ಕಾಗಿ ಅಹ್ಮದ್ ರಜಾಕ್ ಪ್ರತಿನಿತ್ಯ ಕೆಲಸ ಮಾಡುತ್ತಿದ್ದ. ಆದರೆ ಸಹೋದರನ ಮಗಳ ವಿಷಯದಲ್ಲಿ ಬುದ್ದಿ ಹೇಳಲು ಹೋಗಿ ಕೊಲೆಯಾಗಿದ್ದಾನೆ.

ಇದನ್ನೂ ಓದಿ: ನನ್ನ ಮಗನಿಗೆ ಹೃದಯಾಘಾತ ಆಗಿಲ್ಲ, ಇದು ಕೊಲೆ?: ಬಾಬಾಜಾನ್ ಸಾವಿಗೆ ಬಿಗ್​ ಟ್ವಿಸ್ಟ್​, ಹೂತಿದ್ದ ಶವವನ್ನು ಹೊರತೆಗೆದ ಅಧಿಕಾರಿಗಳು

ಸದ್ಯ ಘಟನೆಗೆ ಸಂಬಂಧಿಸಿದಂತೆ ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸದ್ದಾಂ ಸೇರಿದಂತೆ ಆತನ ಕುಟುಂಬದ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮತ್ತೊಂದಡೆ ಅಹ್ಮದ್ ರಜಾಕ್​​ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಅಹ್ಮದ್ ರಜಾಕ್ ಹಲ್ಲೆ ಮಾಡಿದ್ದರಿಂದಲೇ ಮೃತಪಟ್ಟರಾ ಅಥವಾ ಹೃದಯಾಘಾತದಿಂದ ಮೃತಪಟ್ಟಿರೋದಾ ಅನ್ನೋದು ಗೊತ್ತಾಗಲಿದೆ. ಸಮಸ್ಯೆಯನ್ನು ಕೂತು ಮಾತನಾಡಿ ಬಗೆಹರಿಸಿಕೊಂಡಿದ್ದರೆ ಸಂಸಾರ ಸರಿಹೋಗುತ್ತಿತ್ತು. ಆದರೆ ಸದ್ದಾಂ ಸಿಟ್ಟಿನಲ್ಲಿ ಅಹ್ಮದ್ ರಜಾಕ್ ಮೇಲೆ ಹಲ್ಲೆ ಮಾಡಿ ಸಂಕಷ್ಟವನ್ನು ತಂದುಕೊಂಡಿದ್ದು ಮಾತ್ರ ದುರ್ದೈವದ ವಿಚಾರ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.