
ಪಾಟ್ನಾ: ಬಿಹಾರದ ಕತಿಹಾರ್ ಮೇಯರ್ ಶಿವರಾಜ್ ಪಾಸ್ವಾನ್ (Moyor Shivraj Paswan) ಅವರ ಮೇಲೆ ಗುಂಡು ಹಾರಿಸಿ ಗುರುವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅಪರಿಚಿತ ದುಷ್ಕರ್ಮಿಗಳು ನಡೆಸಿದ ಈ ಕೃತ್ಯಕ್ಕೆ ಬಿಹಾರ (Bihar) ರಾಜ್ಯವೇ ಬೆಚ್ಚಿಬಿದ್ದಿದೆ. ನಿನ್ನೆ ರಾತ್ರಿ ತಮ್ಮ ಕೆಲಸ ಮುಗಿಸಿಕೊಂಡು, ಮನೆಗೆ ವಾಪಾಸಾಗುತ್ತಿದ್ದ ಮೇಯರ್ರನ್ನು ಹತ್ಯೆ ಮಾಡಲಾಗಿದೆ.
ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಮೇಯರ್ ಶಿವರಾಜ್ ಪಾಸ್ವಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಗಂಭೀರ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಲಾಗಿದ್ದು, ಇದುವರೆಗೂ ಯಾರನ್ನೂ ಬಂಧಿಸಿಲ್ಲ.
ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕತಿಹಾರ್ ಡಿಎಸ್ಪಿ ಅಮರ್ ಕಾಂತ್ ಝಾ, ಸಂತೋಷಿ ಮಂದಿರ್ ಚೌಕಿ ಏರಿಯಾ ಬಳಿ ಈ ಹಲ್ಲೆ ನಡೆದಿದೆ. ಕತಿಹಾರ್ ಮೇಯರ್ ಮನೆಗೆ ವಾಪಾಸ್ ತೆರಳುತ್ತಿದ್ದಾಗ ಇಬ್ಬರು ಮುಸುಕುಧಾರಿಗಳು ಅಡ್ಡಗಟ್ಟಿ ಗುಂಡು ಹಾರಿಸಿದ್ದಾರೆ. ಮೂರು ಗುಂಡುಗಳು ಮೇಯರ್ ಶಿವರಾಜ್ ಪಾಸ್ವಾನ್ ಅವರ ಎದೆಗೆ ತಗುಲಿವೆ. ಕತಿಹಾರ್ ಮೆಡಿಕಲ್ ಕಾಲೇಜಿನಲ್ಲಿ ಅವರನ್ನು ದಾಖಲಿಸಲಾಗಿತ್ತು. ಆದರೆ, ಎದೆಯೊಳಗೆ ಬುಲೆಟ್ ತಾಗಿ, ಗಂಭೀರವಾಗಿ ಗಾಯವಾಗಿದ್ದರಿಂದ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ತಮ್ಮ ಮನೆಗೆ ಕೂಗಳತೆ ದೂರದಲ್ಲೇ ಮೇಯರ್ ಶಿವರಾಜ್ ಪಾಸ್ವಾನ್ ಗುಂಡಿನ ದಾಳಿಯಿಂದ ಹೆಣವಾಗಿದ್ದಾರೆ. 9 ತಿಂಗಳ ಹಿಂದಷ್ಟೇ 38 ವರ್ಷದ ಶಿವರಾಜ್ ಪಾಸ್ವಾನ್ ಕತಿಹಾರದ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ್ದರು.
ಇದನ್ನೂ ಓದಿ: Crime News: ಮನೆಯಿಂದ ಓಡಿಹೋಗಿ ಮದುವೆಯಾಗಿದ್ದಕ್ಕೆ ಅಣ್ಣಂದಿರಿಂದಲೇ ತಂಗಿಯ ಬರ್ಬರ ಹತ್ಯೆ
Murder: ಇದು ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ಕತೆ!; ಸೇಡಿಗಾಗಿ ಹನಿಮೂನ್ನಲ್ಲೇ ಹೆಂಡತಿಯನ್ನು ಕೊಂದ ಗಂಡ
(Katihar Mayor Murder Shivraj Paswan shot dead near his residence in Bihar on Thursday Night)
Published On - 10:24 am, Fri, 30 July 21