How To: ಮೊಬೈಲ್ ಕಳೆದುಹೋಗಿದೆಯೇ? ತಪ್ಪದೇ ಈ ಕೆಲಸ ಮಾಡಿ; ವಿಡಿಯೋ ಶೇರ್ ಮಾಡಿದ ಡಿಜಿಪಿ
What To Do When Lost Mobile?: ಮೊಬೈಲ್ ಕಳೆದುಹೋದರೆ ಏನೇನು ಮಾಡಬೇಕು? ಸರ್ಕಾರದ ಸಿಇಐಆರ್ ಪೋರ್ಟಲ್ನಲ್ಲಿ ಕಳೆದುಹೋದ ಮೊಬೈಲ್ ಅನ್ನು ಬ್ಲಾಕ್ ಮಾಡಿಸಲು ಅವಕಾಶ ಇದೆ. ಅದಕ್ಕೆ ಮುನ್ನ ಏನು ಮಾಡಬೇಕು ಎಂಬುದನ್ನು ರಾಜ್ಯ ಡಿಜಿಪಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ.
ಬೆಂಗಳೂರು: ಇವತ್ತು ಮೊಬೈಲು ನಮ್ಮ ಬಹುತೇಕ ಜಗತ್ತೇ ಆಗಿಬಿಟ್ಟಿದೆ. ನಮ್ಮ ಅದೆಷ್ಟೋ ವಿವರಗಳು ಮೊಬೈಲ್ನಲ್ಲಿ ಅಡಕಗೊಳಿಸಿರುತ್ತೇವೆ. ವಿವಿಧ ಲಾಗಿನ್ ಪಾಸ್ವರ್ಡ್ಗಳಿಂದ ಹಿಡಿದು ನಮ್ಮ ಖಾಸಗಿ ಫೋಟೋವರೆಗೂ ಅನೇಕ ಸೂಕ್ಷ್ಮ ಮಾಹಿತಿ ಮೊಬೈಲ್ನಲ್ಲಿ ಇರಬಹುದು. ಒಂದು ವೇಳೆ ಇದು ಕಳೆದುಹೋದರೆ (Lost Mobile) ನಮ್ಮ ಜಗತ್ತೇ ಕುಸಿದಂತೆ ಆಗಬಹುದು. ದುಷ್ಕರ್ಮಿಗಳ ಕೈಗೆ ಮೊಬೈಲ್ ಸಿಕ್ಕು ಅವರು ಸೂಕ್ಷ್ಮ ವಿವರಗಳನ್ನು ಕದ್ದು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಇಂಥ ಸಂದರ್ಭದಲ್ಲಿ ಏನು ಮಾಡಬೇಕು?
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಉಪಯುಕ್ತ ಮಾಹಿತಿ ಇರುವ ವಿಡಿಯೋ ಹಂಚಿಕೊಂಡಿದ್ದಾರೆ. ಮೊಬೈಲ್ ಕಳೆದುಕೊಂಡಾಗ ಜನರು ಏನು ಮಾಡಬೇಕು ಎಂಬುದು ಈ ವಿಡಿಯೋದಲ್ಲಿ ಕ್ರಮಬದ್ಧವಾಗಿ ತಿಳಿಸಲಾಗಿದೆ.
ಮೊದಲಿಗೆ ಮೊಬೈಲ್ ಕಳೆದುಹೋದಾಗ ಆದಷ್ಟೂ ಬೇಗ ಸಮೀಪದ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟು ಎಫ್ಐಆರ್ ನೊಂದಾಯಿಸಬೇಕು. ನಂತರ ಎಫ್ಐಆರ್ನ ಪಿಡಿಎಫ್ ಕಾಪಿ ಮಾಡಿಟ್ಟುಕೊಳ್ಳಬೇಕು.
ಇದಾದ ಬಳಿಕ, ಕಳೆದುಹೋದ ಮೊಬೈಲ್ನಲ್ಲಿದ್ದ ನಂಬರ್ನ ಡೂಪ್ಲಿಕೇಟ್ ಸಿಮ್ ಕಾರ್ಡ್ ಪಡೆದುಕೊಳ್ಳಬೇಕು. ಸಿಮ್ ಕಾರ್ಡ್ ಯಾರ ಹೆಸರಲ್ಲಿ ಪಡೆಯಲಾಗಿತ್ತೋ ಅವರು ಮಾತ್ರ. ಡೂಪ್ಲಿಕೇಟ್ ಸಿಮ್ ಕಾರ್ಡ್ ಪಡೆಯಬಹುದು. ನೀವು ಡೂಪ್ಲಿಕೇಟ್ ಸಿಮ್ ಕಾರ್ಡ್ ಪಡೆದ ಬಳಿಕ ಓಟಿಪಿ ಮೂಲಕ ಆಕ್ಟಿವೇಟ್ ಮಾಡಬೇಕು.
ಇದಾದ ಬಳಿಕ ಸಿಇಐಆರ್ ವೆಬ್ಸೈಟ್ಗೆ www.ceir.gov.in ಹೋಗಿ. ಅಲ್ಲಿ ನಿಮಗೆ ಬ್ಲಾಕ್ ಸ್ಟೋಲನ್/ಲಾಸ್ಟ್ ಮೊಬೈಲ್ (Block Stolen/Lost Mobile) ಎಂದು ಕೆಂಪು ಬಣ್ಣದ ಪಟ್ಟಿಯನ್ನು ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡಿದರೆ ಒಂದು ಫಾರ್ಮ್ ತೆರೆದುಕೊಳ್ಳುತ್ತದೆ. ಅದರಲ್ಲಿ ಮೊಬೈಲ್ ನಂಬರ್, ಡಿವೈಸ್ ಬ್ಯಾಂಡ್, ಮೊಬೈಲ್ ಕಳೆದುಹೋದ ಸ್ಥಳ, ದಿನ, ರಾಜ್ಯ, ಜಿಲ್ಲೆ, ಪೊಲೀಸ್ ಠಾಣೆ, ಕಂಪ್ಲೇಂಟ್ ನಂಬರ್ ಇತ್ಯಾದಿ ವಿವರ ಭರ್ತಿ ಮಾಡಬೇಕು.
ಐಎಂಇಐ ನಂಬರ್ ಇದ್ದರೆ ನಮೂದಿಸಬಹುದು. ಇಲ್ಲದಿದ್ದರೆ ಪೊಲೀಸ್ ಕಂಪ್ಲೇಂಟ್ ನಂಬರ್ ಹಾಕಬೇಕು. ಮತ್ತು ಕಂಪ್ಲೇಂಟ್ನ ಪಿಡಿಎಫ್ ಪ್ರತಿಯನ್ನು ಲಗತ್ತಿಸಬೇಕು.
ಅದಾದ ಬಳಿಕ ಮೊಬೈಲ್ ಮಾಲೀಕರ ಹೆಸರು, ವಿಳಾಸ, ಅವರ ಆಧಾರ್ ಇತ್ಯಾದಿ ಗುರುತು ವಿವರ ಸಲ್ಲಿಸಬೇಕು. ಅಂತಿಮವಾಗಿ ಮೊಬೈಲ್ಗೆ ಒಟಿಪಿ ಪಡೆದು ಸಬ್ಮಿಟ್ ಮಾಡಿದರೆ ನಿಮ್ಮ ಅರ್ಜಿ ಸ್ವೀಕೃತವಾಗುತ್ತದೆ.
ಇದನ್ನೂ ಓದಿ: Congress Allegation: ಸರ್ಕಾರದಿಂದ ಟೆಂಡರ್ ಗೋಲ್ಮಾಲ್: ಡಿಕೆಶಿ ನಿವಾಸದಲ್ಲಿ ಬಾಂಬ್ ಸಿಡಿಸಿದ ಕೈ ನಾಯಕರು
ಇದಾಗಿ 24 ಗಂಟೆಯಲ್ಲಿ ನಿಮ್ಮ ಮೊಬೈಲ್ ಅನ್ನು ಬ್ಲಾಕ್ ಮಾಡಲಾಗುತ್ತದೆ ಎಂದು ಡಿಜಿಪಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಭರವಸೆ ನೀಡಲಾಗಿದೆ. ಇಲ್ಲಿ ಸಿಇಐಆರ್ ಪೋರ್ಟಲ್ಗೆ ಹೋಗುವ ಮುನ್ನ ನೀವು ಮರೆಯದೇ ಮಾಡಬೇಕಾದ ಎರಡು ಕೆಲಸ ಎಂದರೆ ಡೂಪ್ಲಿಕೇಟ್ ಸಿಮ್ ಕಾರ್ಡ್ ಪಡೆಯುವುದು ಮತ್ತು ಸಮೀಪದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುವುದು.
Let’s make mobile thefts less lucrative by getting them blocked… a joint initiative between Karnataka State Police & Deptt of Telecom. Please follow this vedio. ? pic.twitter.com/aObftYirWl
— DGP KARNATAKA (@DgpKarnataka) February 14, 2023
ಸಿಇಐಆರ್ ಪೋರ್ಟಲ್ ಸಹಾಯದಿಂದ ಮೊದಲ ಪ್ರಕರಣವನ್ನು ಭೇದಿಸಲಾಯಿತು ಎಂದು ಬೀದರ್ ಪ್ರಕರಣವೊಂದನ್ನು ಉಲ್ಲೇಖಿಸಿ ಡಿಜಿಪಿ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಬೀದರ್ನ ಬಸವಕಲ್ಯಾಣದ ರಂಜಾನ್ ಖಾನ್ ಎಂಬುವವರು ಎರಡು ತಿಂಗಳ ಹಿಂದೆ ಕಳೆದುಕೊಂಡ ವಿವೊ ವಿ11 ಮೊಬೈಲ್ ಅನ್ನು ಸಿಇಐಆರ್ ಪೋರ್ಟಲ್ ಸಹಾಯದಿಂದ ಯಶಸ್ವಿಯಾಗಿ ಶೋಧಿಸಲಾಯಿತು. ಇದು ಒಳ್ಳೆಯ ಆರಂಭ ಎಂದು ಪೊಲೀಸ್ ಮಹಾನಿರ್ದೇಕರು ತಿಳಿಸಿದ್ದಾರೆ.