ಪ್ರೇಯಸಿಯನ್ನು ಕೊಂದು ಶವವನ್ನು ಸೆಪ್ಟಿಕ್ ಟ್ಯಾಂಕ್‌ನಲ್ಲಿ ಮುಚ್ಚಿಟ್ಟ ಹೈದರಾಬಾದ್ ಅರ್ಚಕನಿಗೆ ಜೀವಾವಧಿ ಶಿಕ್ಷೆ
ತೆಲಂಗಾಣದ ಹೈದರಾಬಾದ್ ನ್ಯಾಯಾಲಯವು ಅರ್ಚಕ ವೆಂಕಟ ಸಾಯಿ ಸೂರ್ಯ ಕೃಷ್ಣನಿಗೆ ತನ್ನ ಪ್ರೇಯಸಿ ಅಪ್ಸರಾಳನ್ನು ಕೊಲೆ ಮಾಡಿದ್ದಕ್ಕಾಗಿ ಜೀವಾವಧಿ ಶಿಕ್ಷೆ ವಿಧಿಸಿದೆ. ಮದುವೆಗಾಗಿ ಆಕೆ ತನ್ನ ಮೇಲೆ ಒತ್ತಡ ಹೇರಿದ ನಂತರ ಆಕೆಯನ್ನು ಕೊಂದು ಆಕೆಯ ದೇಹವನ್ನು ಸೆಪ್ಟಿಕ್ ಟ್ಯಾಂಕ್‌ನಲ್ಲಿ ಮುಚ್ಚಿಟ್ಟಿದ್ದ. 2023ರಲ್ಲಿ ನಡೆದ ತೆಲಂಗಾಣದ ಶಂಶಾಬಾದ್ ಕೊಲೆ ಪ್ರಕರಣದಲ್ಲಿ ಅರ್ಚಕನಿಗೆ ಇದೀಗ ಜೀವಾವಧಿ ಶಿಕ್ಷೆ ನೀಡಲಾಗಿದೆ. ಪೊಲೀಸರ ಪ್ರಕಾರ, ಸಾಯಿ ಸೂರ್ಯ ಕೃಷ್ಣ ಅಪ್ಸರಾಳ ಜೊತೆ ಪ್ರೀತಿಯ ನಾಟಕವಾಡುವಾಗ ತಾನು ಈಗಾಗಲೇ ಮದುವೆಯಾಗಿದ್ದೇನೆ ಎಂಬ ಅಂಶವನ್ನು ಮರೆಮಾಚಿದ್ದ. ಅವಳನ್ನು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಶೋಷಿಸಿದ ನಂತರ, ಅವಳು ಮದುವೆಗೆ ಒತ್ತಾಯಿಸಿದ್ದಳು. ಆಗ ಆಕೆಯ ಕೊಲೆಗೆ ಸಂಚು ರೂಪಿಸಿದ್ದ.

ಹೈದರಾಬಾದ್, ಮಾರ್ಚ್ 27: ಹೈದರಾಬಾದ್ ನ್ಯಾಯಾಲಯವು ಬುಧವಾರ 2023ರ ಜೂನ್‌ನಲ್ಲಿ ತನ್ನ ಪ್ರೇಯಸಿಯಾದ ಕಿರುತೆರೆ ನಟಿಯನ್ನು ಕೊಂದಿದ್ದಕ್ಕಾಗಿ 36 ವರ್ಷದ ಅರ್ಚಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಲಯವು ಐಪಿಸಿಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿತು ಮತ್ತು 10 ಲಕ್ಷ ರೂ. ದಂಡ ವಿಧಿಸಿತು. ಅರ್ಚಕ ವೆಂಕಟ ಸಾಯಿ ಸೂರ್ಯ ಕೃಷ್ಣನಿಗೆ 2023ರಲ್ಲಿ ತಾನು ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯ ಕೊಲೆಗಾಗಿ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ಹಾಳು ಮಾಡಿದ್ದಕ್ಕಾಗಿ ನ್ಯಾಯಾಲಯವು ಹೆಚ್ಚುವರಿಯಾಗಿ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ತನಿಖಾಧಿಕಾರಿಗಳ ಪ್ರಕಾರ, ಈಗಾಗಲೇ ವಿವಾಹಿತನಾಗಿದ್ದ ಸಾಯಿ ಕೃಷ್ಣ ಅಪ್ಸರಾ ಎಂಬ ಮಹಿಳೆಯೊಂದಿಗೆ ಸುಳ್ಳು ಮದುವೆ ಭರವಸೆ ನೀಡುವ ಮೂಲಕ ಸಂಬಂಧ ಬೆಳೆಸಿಕೊಂಡಿದ್ದ. ಇಬ್ಬರೂ ಸ್ವಲ್ಪ ಸಮಯದವರೆಗೆ ಸಂಬಂಧ ಹೊಂದಿದ್ದರು. ಆದರೆ, ಅಪ್ಸರಾ ಆತನ ಭರವಸೆಯನ್ನು ಈಡೇರಿಸಿ ಮದುವೆಯಾಗುವಂತೆ ಒತ್ತಡ ಹೇರಲು ಪ್ರಾರಂಭಿಸಿದಾಗ ಸಾಯಿ ಕೃಷ್ಣ ಅವಳನ್ನು ಕೊಲ್ಲಲು ಸಂಚು ರೂಪಿಸಿದನು.
ಇದನ್ನೂ ಓದಿ: ಹೈದರ್ ಅಲಿಯನ್ನು ಮುಗಿಸಿದವರಿಗೆ ಗಲ್ಲು ಇಲ್ಲವೇ ಜೀವಾವಧಿ ಸೆರೆವಾಸದ ಶಿಕ್ಷೆಯಾಗಬೇಕು: ಮೃತನ ಅತ್ತಿಗೆ
ಜೂನ್ 3, 2023ರಂದು ಅವನು ಕೊಯಮತ್ತೂರಿಗೆ ಪ್ರವಾಸಕ್ಕೆ ಹೋಗುತ್ತಿದ್ದೇವೆ ಎಂದು ಅಪ್ಸರಾಳನ್ನು ನಂಬಿಸಿ ಕರೆದುಕೊಂಡು ಹೋಗಿದ್ದ. ಆ ರಾತ್ರಿ ಅವರು ರಲ್ಲಾಗುಡದಲ್ಲಿ ಊಟ ಮಾಡಿ ಸುಲ್ತಾನಪಲ್ಲಿಯಲ್ಲಿರುವ ಗೋಶಾಲೆಗೆ ಭೇಟಿ ನೀಡಿದರು. ಜೂನ್ 4ರ ಮುಂಜಾನೆ ಸಾಯಿ ಕೃಷ್ಣ ಅಪ್ಸರಾಳನ್ನು ಶಂಶಾಬಾದ್ ಬಳಿಯ ನರ್ಖೋಡಾ ಗ್ರಾಮದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಲ್ಲಿನಿಂದ ಹೊಡೆದು ಕೊಂದಿದ್ದಾನೆ. ನಂತರ ಅವನು ಅವಳ ದೇಹವನ್ನು ಸರೂರ್ ನಗರಕ್ಕೆ ಸಾಗಿಸಿದನು. ಆಕೆಯ ಶವವನ್ನು SRO ಕಚೇರಿಯ ಬಳಿಯ ಒಳಚರಂಡಿ ಮ್ಯಾನ್‌ಹೋಲ್‌ನಲ್ಲಿ ತುಂಬಿಸಿ, ಸಿಮೆಂಟ್‌ನಿಂದ ಮುಚ್ಚಿ ನಂತರ ತಾನೇ ಹೋಗಿ ಆಕೆ ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿದನು.
ಇದನ್ನೂ ಓದಿ: ಮರ್ಯಾದೆ ಹತ್ಯೆ ಕೇಸ್: 6 ವರ್ಷದ ಬಳಿಕ 4 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್
ಅನುಮಾನದಿಂದ ತಪ್ಪಿಸಿಕೊಳ್ಳುವ ಆಶಯದೊಂದಿಗೆ ಸಾಯಿ ಕೃಷ್ಣ ದಿನಚರಿ ಮುಂದುವರಿಸಿದನು. ಆದರೆ, ಕಾಣೆಯಾದ ವ್ಯಕ್ತಿಯ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಅಂತಿಮವಾಗಿ ಆಕೆ ಕೊಲೆಯಾಗಿದ್ದಾಳೆಂಬುದಕ್ಕೆ ಸಾಕ್ಷಿಗಳನ್ನು ಪತ್ತೆಹಚ್ಚಿದರು. ಸಾಯಿ ಕೃಷ್ಣ ಅಪರಾಧವನ್ನು ಹೇಗೆ ನಡೆಸುವುದು ಮತ್ತು ಶವವನ್ನು ಹೇಗೆ ವಿಲೇವಾರಿ ಮಾಡುವುದು ಎಂಬುದರ ಕುರಿತು ಗೂಗಲ್‌ನಲ್ಲಿ ಹುಡುಕಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಘಟನೆ ಬೆಳಕಿಗೆ ಬಂದ ಕೂಡಲೇ ಪೊಲೀಸರು ಸಾಯಿ ಕೃಷ್ಣನನ್ನು ಬಂಧಿಸಿದರು. ವಿಚಾರಣೆಯ ಸಮಯದಲ್ಲಿ, ಪೂರ್ವಯೋಜಿತ ಕೊಲೆ ಮತ್ತು ಸಾಕ್ಷ್ಯಗಳನ್ನು ನಾಶಮಾಡಲು ಪ್ರಯತ್ನಿಸಿದ್ದಕ್ಕಾಗಿ ನ್ಯಾಯಾಲಯವು ಬಲವಾದ ಪುರಾವೆಗಳನ್ನು ಕಂಡುಕೊಂಡಿತು. ಇದು ಬುಧವಾರದ ಜೀವಾವಧಿ ಶಿಕ್ಷೆಗೆ ಕಾರಣವಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ