ಪ್ರೇಯಸಿಗೆ ಚಾಕು ಇರಿದ ಭಗ್ನ ಪ್ರೇಮಿ, ಚಾಕು ಇರಿದವನಿಗೆ ಧರ್ಮದೇಟು… ಇಬ್ಬರೂ ಆಸ್ಪತ್ರೆ ಪಾಲು
ಭಗ್ನ ಪ್ರೇಮಿಯಿಂದ ಹಲ್ಲೆಗೊಳಗಾದ ಯುವತಿಯು ತನ್ನ ಮೇಲೆ ದಾಳಿ ಮಾಡಿರುವ ಯುವಕನು ಪದೇ ಪದೇ ಗ್ರಾಮದ ತಮ್ಮ ಮನೆ ಮುಂದೆ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು. ಒಂದು ವರ್ಷದ ಹಿಂದೆ ಗ್ರಾಮದಲ್ಲಿ ರಾಜೀ ಪಂಚಾಯಿತಿ ಆಗಿತ್ತು. ತನ್ನ ತಂಟೆಗೆ ಬರುವುದಿಲ್ಲವೆಂದು ಆತ ಎಲ್ಲರ ಮುಂದೆ ಒಪ್ಪಿಕೊಂಡಿದ್ದನು. ಆದರೆ...
ಇಬ್ಬರದ್ದು ಒಂದೇ ಊರು. ಪರಸ್ಪರ ಇಬ್ಬರೂ ಪ್ರೀತಿಸುತ್ತಿದ್ದರು. ಇಬ್ಬರದ್ದು ಒಂದೇ ಮರಾಠಾ ಜಾತಿ. ಆದ್ರೆ ಇವರ ಯುವತಿಯ ಕುಟುಂಬಸ್ಥರ ವಿರೋಧ. ಈ ನಡುವೆ ಪ್ರೀತಿಸಿದ ಯುವತಿಯು ಊಲ್ಟಾ ಹೊಡೆದಿದ್ದಳು. ಒಂದು ವರ್ಷದಿಂದ ಪ್ರೇಯಸಿಯ ಕೊಲೆಗೆ ಸ್ಕೇಚ್ ಹಾಕಿದ್ದ ಭಗ್ನ ಪ್ರೇಮಿ.. ಕೊನೆಗೂ ಹಾಡಹಗಲೇ ಪ್ರೇಯಸಿಗೆ ಚಾಕು ಇರಿದ ಭಗ್ನ ಪ್ರೇಮಿಯ ಸೇಡು ಕುರಿತು ಒಂದು ವರದಿ ಇಲ್ಲಿದೆ.
ಸುಮಾರು ಮಧ್ಯಾಹ್ನ 2.30 ಆಸುಪಾಸು. ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತದ ಬಳಿ ನಡೆದ ಘಟನೆ. ಇಬ್ಬರು ಯುವತಿಯರು ಹೊರಟ್ಟಿದ್ದ ವೇಳೆ ಬೈಕ್ ಮೇಲೆ ಬಂದ ಯುವಕನೊಬ್ಬನು ಥೇಟ್ ಫಿಲ್ಮೀ ಸ್ಟೈಲ್ ನಂತೆ ಯುವತಿಗೆ ಚಾಕು ಇರಿದಿದ್ದಾನೆ. ಎರಡು ಮೂರು ಬಾರಿ ಹೊಟ್ಟೆ, ಕೈ ಬೆನ್ನು ಮುಂತಾದ ಭಾಗಕ್ಕೆ ಚಾಕು ಇರಿದ್ದಾನೆ. ಇದನ್ನು ನೋಡಿದ ಸಾರ್ವಜನಿಕರು ಚಾಕು ಇರಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಬಳಿಕ ಆತನನ್ನು ಕೋಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹೀಗೆ ಸಾರ್ವಜನಿಕರು ಥಳಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಭಗ್ನ ಪ್ರೇಮಿಯನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ತಲೆಗೆ ಬಲವಾಗಿ ಪೆಟ್ಟು ತಿಂದು ಇನ್ನೂ ಸೇಡಿನ ಬಗ್ಗೆ ಮಾತನಾಡುತ್ತಿರುವ ಯುವಕನ ಹೆಸರು ಚೇತನ. ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದ ನಿವಾಸಿ.
ಇನ್ನು ಘಟನೆಯಲ್ಲಿ ದಾಳಿಗೊಳಗಾದ ಯುವತಿಯ ಹೆಸರು ಅಂಬಿಕಾ. ಕಳೆದ ಆರೇಳು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರಂತೆ. ಕಳೆದ ವರ್ಷ ಯುವಕನ ನಡತೆ ಸರಿಯಲ್ಲ. ಆತನಿಗೆ ಕುಡಿತದ ಚಟ ಇದೆ ಎಂದು ಯುವತಿಯ ಮನೆಯವರು ಯುವಕನ ಮದುವೆ ಆಫರ್ ರಿಜೆಕ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಮತ್ತು ಪತ್ನಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಎಫ್ಐಆರ್ ದಾಖಲು
ಇದರಿಂದ ಘಾಸಿಗೊಳಗಾಗಿದ್ದ ಭಗ್ನ ಪ್ರೇಮಿ ಚೇತನ ಪ್ರೀತಿಸಿ ವಂಚನೆ ಮಾಡಿದ ಯುವತಿಗೆ ಬುದ್ದಿ ಕಲಿಸಬೇಕೆಂದು ಹಠಕ್ಕೆ ಬಿದ್ದಿದ್ದ. ಅದರಂತೆ ಒಂದು ವರ್ಷ ಕಾಯ್ದು ನಿನ್ನೆ ಮಂಗಳವಾರ ಸಂಬಂಧಿಯೊಬ್ಬರ ಹುಟ್ಟಿದ ಹಬ್ಬಕ್ಕೆ ಗ್ರಾಮದಿಂದ ಶಿವಮೊಗ್ಗ ನಗರಕ್ಕೆ ಯುವತಿ ಬಂದಿದ್ದಳು. ಈ ಹುಟ್ಟಿದ ಹಬ್ಬಕ್ಕೆ ಗೀಫ್ಟ್ ತರಲು ಮಾರುಕಟ್ಟೆಗೆ ಬಂದಿದ್ದಳು. ಯುವತಿಯು ಶಿವಮೊಗ್ಗಕ್ಕೆ ಬರುವುದನ್ನು ಗಮನಿಸಿದ ಯುವಕ ಕೈಯಲ್ಲಿ ಮೂರು ಚಾಕು ಹಿಡಿದುಕೊಂಡು ಬಂದಿದ್ದನು. ಈ ವೇಳೆ ಒಂದು ಚಾಕುವಿನಿಂದ ಯುವತಿಗೆ ಇರಿದಿದ್ದನು.
ರೀಲ್ಸ್ ಮಾಡುವ ಯುವತಿಯನ್ನು ನೋಡಿದ್ರೆ ಆಕೆ ತುಂಬಾ ಬೋಲ್ಡ್ ಆಗಿದ್ದಳು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಈಗ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಆಗಿದ್ದಾಳೆ. ಈ ಘಟನೆಯಿಂದ ಹೆತ್ತವರು ಭಗ್ನ ಪ್ರೇಮಿ ಚೇತನನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಾಡಹಗಲೇ ಹೀಗೆ ಯುವತಿಯ ಮೇಲೆ ದಾಳಿ ಮಾಡಿದ ಇಂತಹ ಯುವಕನನ್ನು ಸುಮ್ಮನೆ ಬಿಡಬಾರದು. ಆತನಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಹೆತ್ತ ತಂದೆಯೇ ಪೊಲೀಸರಿಗೆ ಒತ್ತಾಯಿಸಿದ್ದಾರೆ.
ಇನ್ನು ಭಗ್ನ ಪ್ರೇಮಿಯಿಂದ ಹಲ್ಲೆಗೊಳಗಾದ ಯುವತಿಯು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತನ್ನ ಮೇಲೆ ದಾಳಿ ಮಾಡಿರುವ ಯುವಕನು ಪದೇ ಪದೇ ಗ್ರಾಮದ ತಮ್ಮ ಮನೆ ಮುಂದೆ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು. ಒಂದು ವರ್ಷದ ಹಿಂದೆ ಗ್ರಾಮದಲ್ಲಿ ರಾಜೀ ಪಂಚಾಯಿತಿ ಆಗಿತ್ತು. ತನ್ನ ತಂಟೆಗೆ ಬರುವುದಿಲ್ಲವೆಂದು ಆತ ಎಲ್ಲರ ಮುಂದೆ ಒಪ್ಪಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿರಲಿಲ್ಲ. ಆದರೆ ಆತ ಹೀಗೆ ದ್ವೇಷ ಇಟ್ಟುಕೊಂಡು ಬಂದು ಕೊಲೆ ಸ್ಕೇಚ್ ಹಾಕಿರುವುದು ಗೊತ್ತಿರಲಿಲ್ಲ. ತನ್ನ ಕೊಲೆಗೆ ಯತ್ನಿಸಿರುವ ಯುವಕನಿಗೆ ಪೊಲೀಸರು ತಕ್ಕ ಪಾಠ ಕಲಿಸಬೇಕೆಂದು ದಾಳಿಗೊಳಗಾದ ಯುವತಿ ಒತ್ತಾಯಿಸಿದ್ದಾಳೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:18 am, Wed, 17 January 24