Raichur News: ಕೆರೆಯಲ್ಲಿ ಮುಳುಗಿದ ಸಹೋದರನ ಮಗನನ್ನು ಕಾಪಾಡಲು ಹೋಗಿ ಇಬ್ಬರೂ ನೀರುಪಾಲು
ಕುಡಿಯಲು ಕೆರೆಯಿಂದ ನೀರು ತುಂಬಿಕೊಂಡು ಬರಲು ಬಂದ ಬಾಲಕ ಯಾಸೀನ್ ರಫೀ ಕಾಲು ಜಾರಿ ಕೆರೆಯಲ್ಲಿ ಬಿದ್ದಿದ್ದಾನೆ. ಬಾಲಕನ ಕಿರುಚಾಟ ಕೇಳಿ ರಕ್ಷಣೆಗೆ ಹೋಗಿದ್ದ ಚಿಕ್ಕಪ್ಪ ಸಲೀಂ ಈಜು ಬಾರದ ಹಿನ್ನೆಲೆ ಇಬ್ಬರೂ ಮೃತಪಟ್ಟಿದ್ದಾರೆ.
ರಾಯಚೂರು: ಕೆರೆಯಲ್ಲಿ ಮುಳುಗಿ ಚಿಕ್ಕಪ್ಪ, ಆತನ ಸಹೋದರರನ ಮಗ ಮೃತಪಟ್ಟ ಘಟನೆ ರಾಯಚೂರು ತಾಲೂಕಿನ ಕೊರ್ತಕುಂದಾ ಕೆರೆಯಲ್ಲಿ ನಡೆದಿದೆ. ಸಲೀಂ ಹುಸೇನ್ಸಾಬ್(32), ಯಾಸೀನ್ ರಫೀ(13) ಮೃತ ದುರ್ದೈವಿಗಳು. ನಿನ್ನೆ ಸಂಜೆ ಮೃತ ಬಾಲಕ ನರೇಗಾ ಕೆಲಸಕ್ಕೆ ಚಿಕ್ಕಪ್ಪನ ಜೊತೆಯಲ್ಲಿ ಹೋಗಿದ್ದ. ಈ ವೇಳೆ ಕುಡಿಯಲು ಕೆರೆಯಿಂದ ನೀರು ತುಂಬಿಕೊಂಡು ಬರಲು ಬಂದ ಬಾಲಕ ಯಾಸೀನ್ ರಫೀ ಕಾಲು ಜಾರಿ ಕೆರೆಯಲ್ಲಿ ಬಿದ್ದಿದ್ದಾನೆ. ಬಾಲಕನ ಕಿರುಚಾಟ ಕೇಳಿ ರಕ್ಷಣೆಗೆ ಹೋಗಿದ್ದ ಚಿಕ್ಕಪ್ಪ ಸಲೀಂ ಈಜು ಬಾರದ ಹಿನ್ನೆಲೆ ಇಬ್ಬರೂ ಮೃತಪಟ್ಟಿದ್ದಾರೆ. ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾಡಾನೆ ದಾಳಿಗೆ ಮಾವಿನ ತೋಟದ ಕಾವಲುಗಾರ ಸಾವು
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ವಿರೂಪಸಂದ್ರ ಗ್ರಾಮದ ಬಳಿ ವೀರಭದ್ರಯ್ಯ(52) ಎಂಬುವವರು ಕಾಡಾನೆ ದಾಳಿಗೆ ಮೃತಪಟ್ಟಿದ್ದಾರೆ. ಲೋಕೇಶ್ ಎಂಬುವರ ತೋಟದ ಕಾವಲಿಗಿದ್ದ ವೀರಭದ್ರಯ್ಯ ಮುಂಜಾನೆ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿದ್ಯುತ್ ಪ್ರವಹಿಸಿ ಕೋತಿ ಸಾವು
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕಣಕಾಲ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕದ ವಿದ್ಯುತ್ ಪ್ರವಹಿಸಿ ಕೋತಿ ಸಾವನ್ನಪ್ಪಿದೆ. ಕಣಕಾಲ ಗ್ರಾಮದ ನ್ಯೂ ಹೈಸ್ಕೂಲ್ ಬಳಿ ನಿನ್ನೆ ರಾತ್ರಿ ಘಟನೆ ನಡೆದಿದೆ. ವಿದ್ಯುತ್ ತಗುಲಿ ಸಾವನ್ನಪ್ಪಿದ ಕೋತಿ ಹೊರತೆಗೆಯಲು ಜನ ಹರಸಾಹಸ ಪಟ್ಟಿದ್ದು ಮತ್ತೆರಡು ಕೋತಿಗಳು ಮೃತ ಕೋತಿಯ ಸಮೀಪಕ್ಕೂ ಸುಳಿಯಲು ಬಿಡದೆ ಕಣ್ಣೀರಿಟ್ಟಿವೆ. ಸದ್ಯ ಆಂಜನೇಯ ಸ್ವರೂಪಿ ಎಂಬ ಕಾರಣಕ್ಕಾಗಿ ಧಾರ್ಮಿಕ ವಿಧಿ ವಿಧಾನದ ಮೂಲಕ ಅಂತ್ಯಕ್ರಿಯೆ ನಡೆಸಲು ಜನರು ನಿರ್ಧರಿಸಿದ್ದಾರೆ. ವಾಹನದ ಮೇಲೆ ಕೂಡಿಸಿ ವಾದ್ಯಮೇಳಗಳೊಂದಿಗೆ ಮೃತ ಕೋತಿಯ ಮೆರವಣಿಗೆ ಮಾಡಲಾಗಿದೆ. ಗ್ರಾಮಸ್ಥರು ರಾತ್ರಿಯಿಡೀ ಭಜನೆ ಮಾಡಿದ್ದಾರೆ. ಕಣಕಾಲ ಗ್ರಾಮದ ಪತ್ರಿಮಠದ ಬಳಿ ಕೋತಿಯ ಅಂತ್ಯಕ್ರಿಯೆ ನೆರವೇರಿದೆ.
ಕಳ್ಳತನ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು
ಕಳ್ಳತನ ಪ್ರಕರಣದ ಮೂವರು ಆರೋಪಿಗಳನ್ನು ಕಲಬುರಗಿಯ ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ವಾಸೀಂ, ಮೊಹಮ್ಮದ್ ತಾಜೂದ್ದೀನ್, ಶೇಖ್ ಆಸೀಫ್ ಬಂಧಿತರು. ಬಂಧಿತರಿಂದ 7.24 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಬೈಕ್ ಜಪ್ತಿ ಮಾಡಲಾಗಿದೆ. ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ