ಮಂಗಳೂರು: ಗುದದಲ್ಲಿ ಬಚ್ಚಿಟ್ಟು 729 ಗ್ರಾಂ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ
Mangaluru Crime news: ಅಕ್ರಮವಾಗಿ ಅಬುದಾಭಿಯಿಂದ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಕಾಸರಗೋಡು ಮೂಲದ ಪ್ರಯಾಣಿಕನೊಬ್ಬನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಳ್ಳುವಲ್ಲಿ ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಹಾಗೂ ಮಂಗಳೂರಿನ ಇತರ ಅಪರಾಧ ಸುದ್ದಿಗಳು ಇಲ್ಲಿವೆ.
ಮಂಗಳೂರು, ಮಾರ್ಚ್ 4: ಪ್ರಯಾಣಿಕನೊಬ್ಬ ಅಕ್ರಮವಾಗಿ ಸಾಗಿಸುತ್ತಿದ್ದ 729 ಗ್ರಾಂ ತೂಕದ 45,92,700 ರೂಪಾಯಿ ಮೌಲ್ಯದ ಚಿನ್ನವನ್ನು (Gold Smuggling) ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Mangaluru International Airport) ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಬುಧಾಬಿಯಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ (Air India Express) ವಿಮಾನದಲ್ಲಿ ಆಗಮಿಸಿದ ಕಾಸರಗೋಡು ಮೂಲದ ಪ್ರಯಾಣಿಕರೊಬ್ಬರು ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದರು.
ಮಾರ್ಚ್ 3ರಂದು ಕಾಸರಗೋಡು ಮೂಲದ ವ್ಯಕ್ತಿ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಆತನನ್ನು ಕಸ್ಟಮ್ಸ್ ಅಧಿಕಾರಿಗಳು ಪರೀಕ್ಷೆಗೆ ಒಳಪಡಿಸಿದರು. ಇದೇ ವೇಳೆ, ಆತ ಮೂರು ಮೊಟ್ಟೆಯ ಆಕಾರದ ಲಕೋಟೆಗಳಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಗುದನಾಳದಲ್ಲಿ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಚಿನ್ನವನ್ನು ವಶಪಡಿಸಿಕೊಂಡು, ನಂತರ ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಾಪು: ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತ್ಯು
ಉದ್ಯಾವರದ ಹಲೀಮಾ ಸಾಬ್ಜು ಸಭಾಂಗಣದ ಬಳಿ ಭಾನುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನ್ನಪ್ಪಿದ್ದು, ಹಿಂಬದಿ ಕುಳಿತಿದ್ದ ಮಹಿಳೆಗೆ ಗಂಭೀರ ಗಾಯಗಳಾಗಿವೆ. ಮೃತರನ್ನು ಮುಫ್ರಿನ್ (18) ಎಂದು ಗುರುತಿಸಲಾಗಿದ್ದು, ಹೆಜಮಾಡಿಯಲ್ಲಿ ವಾಸವಾಗಿರುವ ಉಚ್ಚಿಲ ಪೋಳ್ಯ ನಿವಾಸಿ ಅಜೀಜ್ ಎಂಬವರ ಪುತ್ರನಾಗಿದ್ದಾನೆ. ಅವರ ತಾಯಿ ಹಾಜಿರ್ ಬಾನು ಅವರಿಗೆ ಗಂಭೀರ ಗಾಯಗಳಾಗಿದ್ದು, ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಫ್ರಿನ್ ತಾಯಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಉಡುಪಿಗೆ ಕರೆದುಕೊಂಡು ಹೋಗುತ್ತಿದ್ದಾಗ ನಿಂತಿದ್ದ ಪಿಕಪ್ ಟ್ರಕ್‌ಗೆ ಸ್ಕೂಟರ್ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಸ್ಕೂಟರ್‌ಗೆ ಅಪಾರ ಹಾನಿಯಾಗಿದ್ದು, ಮುಫ್ರಿನ್‌ಗೆ ಗಂಭೀರ ಗಾಯಗಳಾಗಿವೆ. ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಸ್ವಲ್ಪ ಸಮಯದ ನಂತರ ಮುಫ್ರಿನ್ ಮೃತಪಟ್ಟಿದ್ದಾರೆ. ಘಟನೆ ಕುರಿತು ಕಾಪು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಅಜಾಗರೂಕ ಚಾಲನೆ: ಉಪ್ಪಿನಂಗಡಿಯಲ್ಲಿ ಅಂಗಡಿಗಳಿಗೆ ಹಾನಿ
ಖಾಸಗಿ ಬಸ್ಸಿನ ಚಾಲಕನೊಬ್ಬ ಅಜಾಗರೂಕತೆಯಿಂದ ರಿವರ್ಸ್ ತೆಗೆದುಕೊಂಡು ಉಪ್ಪಿನಂಗಡಿ ಬಸ್ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಎರಡು ಅಂಗಡಿಗಳು, ಕೆಲವು ದ್ವಿಚಕ್ರ ವಾಹನಗಳು ಮತ್ತು ಕಾರಿಗೆ ಹಾನಿ ಮಾಡಿದ್ದಾನೆ. ಬಸ್ ಹಿಮ್ಮುಖವಾಗಿ ಚಲಿಸಿದ ವೇಳೆ, ವಾಹನ ನಿಲುಗಡೆ ಪ್ರದೇಶವನ್ನು ದಾಟಿ ಕೆಲವು ಅಂಗಡಿಗಳು ಸೇರಿದಂತೆ ವಾಣಿಜ್ಯ ಕಟ್ಟಡಕ್ಕೆ ನುಗ್ಗಿದೆ.
ಇದನ್ನೂ ಓದಿ: ಮಂಗಳೂರು ಪಣಂಬೂರು ಬೀಚ್‌ನಲ್ಲಿ ಮೂವರು ಯುವಕರು ನೀರುಪಾಲು
ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಅವಘಡದ ವೇಳೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ಅಲ್ಲಿದ್ದು, ತಕ್ಷಣವೇ ಅವರು ಸ್ಥಳದಿಂದ ಸುರಕ್ಷಿತ ಪ್ರದೇಶಕ್ಕೆ ಓಡಿಹೋಗಿದ್ದಾರೆ. ಅದೃಷ್ಟವಶಾತ್ ಅಂಗಡಿಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ