ಬೆಂಗಳೂರು: ರಾಮಸಂದ್ರ ಬಳಿ ಯುವತಿ ಮೃತದೇಹ ಪತ್ತೆ (Women Dead body Found) ಪ್ರಕರಣ ಸಂಬಂಧ ಇನ್ನೂ ಮೃತ ಯುವತಿಯ ಗುರುತು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈಗಾಗಲೇ ಸ್ಥಳದಲ್ಲಿ ಸಿಕ್ಕ ಸಣ್ಣ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಅದಾಗ್ಯೂ ಪೊಲೀಸರು ಯುವತಿಯ ಗುರುತು ಪತ್ತೆಹಚ್ಚುವ ನಿಟ್ಟಿನಲ್ಲಿ ಅಪಹರಣ ಮತ್ತು ಕಾಣೆಯಾದವರ ಪ್ರಕರಣವನ್ನು ಪರಿಶೀಲಿಸಲು ಮುಂದಾಗಿದ್ದಾರೆ.
ಮೃತದೇಹ ಪತ್ತೆಯಾದ ಸ್ಥಳದಲ್ಲಿ ಸಿಕ್ಕ ತಲೆ ಕೂದಲು, ಸ್ವಾಬ್, ಹೊಂಗೆ ಮರದ ಎಲೆ, ಸ್ಥಳದಲ್ಲಿದ್ದ ಮಣ್ಣು, ದೇಹದ ಅಂಗಗಳನ್ನು ಪೊಲೀಸರು ಎಫ್ಎಸ್ಎಲ್ಗೆ ರವಾನಿಸಿದ್ದು, ವರದಿ ಬಂದನಂತರವಷ್ಟೇ ಕೃತ್ಯದ ಬಗ್ಗೆ ತಿಳಿದುಬರಲಿದೆ. ಇಂದು ಅಥವಾ ನಾಳೆ ಎಫ್ಎಸ್ಎಲ್ ವರದಿ ಪೊಲೀಸರ ಕೈ ಸೇರುವ ಸಾಧ್ಯತೆ ಇದೆ.
ಇದನ್ನೂ ಓದಿ: ಕೆಂಗೇರಿಯ ರಾಮಸಂದ್ರ ಬಳಿ ಸುಟ್ಟು ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ; ಅತ್ಯಾಚಾರವೆಸಗಿ ಕೊಂದಿರುವ ಶಂಕೆ
ಸುಟ್ಟು ಹಾಕಿರೋದು ಕನ್ಫರ್ಮ್
ಯುವತಿಯನ್ನು ಜೀವಂತವಾಗಿ ಸುಟ್ಟುಹಾಕಲಾಗಿಲ್ಲ. ಬದಲಾಗಿ ಬೇರೊಂದು ಸ್ಥಳದಲ್ಲಿ ಕೊಲೆ ಮಾಡಿ ರಾಮಸಂದ್ರ ಬಳಿ ಸುಟ್ಟು ಹಾಕಿರುವುದು ದೃಢವಾಗಿದೆ. ಏಕೆಂದರೆ ಮೃತದೇಹ ಸಿಕ್ಕ ಜಾಗದಲ್ಲಿ ಯಾವುದೇ ಒದ್ದಾಟದ ಕುರುಹು ಪೊಲೀಸರ ಕಣ್ಣಿಗೆ ಪತ್ತೆಯಾಗಿಲ್ಲ. ಸದ್ಯ ಆರೋಪಿಗಳ ಪತ್ತೆ ಪೊಲೀಸರಿಗೆ ಅತಿದೊಡ್ಡ ಸವಾಲು ಆಗಿದ್ದು, ಯಾವಾಗ ಕೃತ್ಯ ನಡೆದಿದೆ ಎಂದು ಇನ್ನೂ ಗೊತ್ತಾಗಿಲ್ಲ. ಹಾಗಾಗಿ ಟವರ್ ಡಂಪ್ ಆಧಾರದ ಮೇಲೆ ಪತ್ತೆಹಚ್ಚುವುದು ಕಷ್ಟವಾಗಿದೆ. ಸರಿಯಾದ ಸಮಯ ಗೊತ್ತಾದರೆ ಟವರ್ ಡಂಪ್ ಮೂಲಕ ಆರೋಪಿಗಳನ್ನು ಪತ್ತೆ ಮಾಡಬಹುದು. ಸದ್ಯ ಯಾವಾಗ ಕೃತ್ಯ ನಡೆದಿದೆ ಅನ್ನೋದನ್ನ ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ.
ಏನಿದು ಪ್ರಕರಣ?
ಕೆಂಗೇರಿಯ ರಾಮಸಂದ್ರ ಬಳಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಂದು ಸುಟ್ಟಿರುವ ಸ್ಥಿತಿಯಲ್ಲಿ ಶವ ನಿನ್ನೆ ಪತ್ತೆಯಾಗಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ ದುಷ್ಕರ್ಮಿಗಳು ಅತ್ಯಾಚಾರವೆಸಗಿ ಮಹಿಳೆಯನ್ನು ಕೊಲೆಗೈದು ಸುಟ್ಟುಹಾಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪಶ್ಚಿಮ ವಿಭಾಗದ ಪ್ರಭಾರ ಡಿಸಿಪಿ ಡಾ.ಶರಣಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇನ್ನು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಪಶ್ಚಿಮ ವಿಭಾಗ ಪ್ರಭಾರ ಡಿಸಿಪಿ ಶರಣಪ್ಪ, ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿಯಂತೆ ಕೊಲೆ ಮಾಡಿ ಸುಟ್ಟುಹಾಕಿದ್ದಾರೆ. ಕೊಲೆಯಾದ ಮಹಿಳೆಯ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಡೀಸೆಲ್ ಟ್ಯಾಂಕರ್ಗೆ ಕಾರು ಡಿಕ್ಕಿಯಾಗಿ ಇಬ್ಬರ ಸಾವು