ಅಪಾರ್ಟ್​ಮೆಂಟ್​ ಮಾಲೀಕನ ಪುತ್ರಿ ಜತೆ ಅಕ್ರಮ ಸಂಬಂಧವಿದೆ ಎಂದು ವಾಟ್ಸ್ಯಾಪ್​ ಸ್ಟೇಟಸ್​ ಹಾಕಿದ್ದಕ್ಕೆ ಕೊಲೆ; ಇಬ್ಬರ ಬಂಧನ

ಅಪಾರ್ಟ್​ಮೆಂಟ್​ ಮಾಲೀಕನ ಪುತ್ರಿ ಜತೆ ಅಕ್ರಮ ಸಂಬಂಧವಿದೆ ಎಂದು ವಾಟ್ಸ್ಯಾಪ್​ ಸ್ಟೇಟಸ್​ ಹಾಕಿದ್ದಕ್ಕೆ ಕೊಲೆ; ಇಬ್ಬರ ಬಂಧನ
ಬಂಧಿತ ಆರೋಪಿಗಳು

ಆರೋಪಿ ಸ್ಥಾನದಲ್ಲಿ ನಿಂತಿರುವ ಮೋಹನ್​ಗೆ ಅಪಾರ್ಟ್​ಮೆಂಟ್​ ಮಾಲೀಕ ಹಲವು ಜವಾಬ್ದಾರಿ ನೀಡಿದ್ದು, ಅಪಾರ್ಟ್​ಮೆಂಟ್​ ನಿರ್ವಹಣೆ ಮಾಡುವಂತೆಯೂ ತಿಳಿಸಿದ್ದರು. ಆದರೆ, ಮೋಹನ್​ ಅವರ ಎಲ್ಲಾ ವ್ಯವಹಾರಗಳಿಗೆ ಅಡ್ಡಿಪಡಿಸುತ್ತಿದ್ದ ಕಾರ್ತಿಕ್, ಅಪಾರ್ಟ್​ಮೆಂಟ್ ಮಾಲೀಕನ ಪುತ್ರಿ ಜತೆ ಮೋಹನ್​ಗೆ ಅಕ್ರಮ ಸಂಬಂಧವಿದೆ ಎಂದು ವಾಟ್ಸ್ಯಾಪ್​ ಸ್ಟೇಟಸ್ ಸಹ ಹಾಕಿದ್ದರು.

TV9kannada Web Team

| Edited By: Skanda

Jun 19, 2021 | 1:52 PM

ಬೆಂಗಳೂರು: ವಾಟ್ಸ್ಯಾಪ್​ ಸ್ಟೇಟಸ್ ಕಥೆ ಕೊಲೆಯಲ್ಲಿ ಅಂತ್ಯ ಕಂಡ ವಿಚಾರಕ್ಕಾಗಿ ಸಂಬಂಧಿಸಿದಂತೆ ಬೆಂಗಳೂರಿನ ರಾಜಗೋಪಾಲನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವಾಟ್ಸ್ಯಾಪ್​ನಲ್ಲಿ ಸ್ಟೇಟಸ್​ ಹಾಕಿದ್ದ ಕಾರ್ತಿಕ್​ ಎಂಬಾತನನ್ನು ಹತ್ಯೆ ಮಾಡಿದ ಆರೋಪದ ಮೇಲೆ ಮೋಹನ್ ಕುಮಾರ್ ಹಾಗೂ ನಾಗರಾಜ್​ ಎಂಬ ಇಬ್ಬರನ್ನು ಪೊಲೀಸರು ಬಂಧನಕ್ಕೆ ಒಳಪಡಿಸಿದ್ದಾರೆ.

ಅಪಾರ್ಟ್​ಮೆಂಟ್​ನಲ್ಲಿ 2 ಫ್ಲ್ಯಾಟ್ ಖರೀದಿಸಿದ್ದ ಕಾರ್ತಿಕ್, ಒಟ್ಟು ₹61 ಲಕ್ಷಕ್ಕೆ ಅಗ್ರಿಮೆಂಟ್​ ಮಾಡಿಕೊಂಡಿದ್ದರು. ಆದರೆ, ₹41ಲಕ್ಷ ನೀಡಿ ಬಾಕಿ ಉಳಿದ ₹20 ಲಕ್ಷ ನೀಡದೆ ಸತಾಯಿಸುತ್ತಿದ್ದರು ಎನ್ನಲಾಗಿದೆ. ಅಲ್ಲದೇ, 2 ಫ್ಲ್ಯಾಟ್​ ನಡುವಿನ ಗೋಡೆಯನ್ನೂ ಕಾರ್ತಿಕ್​ ಒಡೆಸಿ ಕೂಡಿಸಿದ್ದರು. ಗೋಡೆ ಒಡೆದರೆ ಕಟ್ಟಡಕ್ಕೆ ತೊಂದರೆ ಆಗುತ್ತೆ ಎಂದರೂ ಕೇಳಿರಲಿಲ್ಲ. ಹೀಗಾಗಿ ಕಾರ್ತಿಕ್​ ವಿರುದ್ಧ ಅಪಾರ್ಟ್​ಮೆಂಟ್ ನಿವಾಸಿಗಳು ಠಾಣೆಗೆ ದೂರು ನೀಡಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.

ಇದೀಗ ಆರೋಪಿ ಸ್ಥಾನದಲ್ಲಿ ನಿಂತಿರುವ ಮೋಹನ್​ಗೆ ಅಪಾರ್ಟ್​ಮೆಂಟ್​ ಮಾಲೀಕ ಹಲವು ಜವಾಬ್ದಾರಿ ನೀಡಿದ್ದು, ಅಪಾರ್ಟ್​ಮೆಂಟ್​ ನಿರ್ವಹಣೆ ಮಾಡುವಂತೆಯೂ ತಿಳಿಸಿದ್ದರು. ಆದರೆ, ಮೋಹನ್​ ಅವರ ಎಲ್ಲಾ ವ್ಯವಹಾರಗಳಿಗೆ ಅಡ್ಡಿಪಡಿಸುತ್ತಿದ್ದ ಕಾರ್ತಿಕ್, ಅಪಾರ್ಟ್​ಮೆಂಟ್ ಮಾಲೀಕನ ಪುತ್ರಿ ಜತೆ ಮೋಹನ್​ಗೆ ಅಕ್ರಮ ಸಂಬಂಧವಿದೆ ಎಂದು ವಾಟ್ಸ್ಯಾಪ್​ ಸ್ಟೇಟಸ್ ಸಹ ಹಾಕಿದ್ದರು.

ಅಕ್ರಮ ಸಂಬಂಧವಿದೆ ಎಂದು ಹೇಳಿದ್ದಕ್ಕೆ ಕುಪಿತಗೊಂಡ ಮೋಹನ್​, ತಲೆ ಮೇಲೆ ಕಲ್ಲು ಎತ್ತಿಹಾಕಿ ಕಾರ್ತಿಕ್​ರನ್ನು ಕೊಲೆಗೈದಿದ್ದರು. ಜೂನ್​ 16ರಂದು ಈ ಘಟನೆ ನಡೆದಿದ್ದು, ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ​ ದಾಖಲಾಗಿತ್ತು. ಇದೀಗ ಪೊಲೀಸರು ಮೋಹನ್​ ಹಾಗೂ ನಾಗರಾಜ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ಕುಂದಾಪುರದಲ್ಲಿ ಅವಾಂತರ ಸೃಷ್ಟಿಸಿದ್ದ ವಾಟ್ಸ್ಯಾಪ್​ ಸ್ಟೇಟಸ್ ಕೆಲ ದಿನಗಳ ಹಿಂದೆಯಷ್ಟೇ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಯಡಮೊಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ವಾಟ್ಸ್ಯಾಪ್​ ಸ್ಟೇಟಸ್​ನಿಂದ ಜೋರಾದ ದ್ವೇಷ ಕೊಲೆಯಲ್ಲಿ ಅಂತ್ಯವಾದ ಘಟನೆಯೊಂದು ನಡೆದಿತ್ತು. ಯಡಮೊಗೆ ಗ್ರಾಮದ ನಿವಾಸಿ ಉದಯ್​ ಗಾಣಿಗ ಹತ್ಯೆ ಪ್ರಕರಣದಲ್ಲಿ ಯಡಮೊಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಎಂಬುವವರ ಮೇಲೆ ಕೊಲೆ ಆರೋಪ ಕೇಳಿಬಂದಿದ್ದು, ಭಾರೀ ಸುದ್ದಿಯಾಗಿತ್ತು.

ಯಡಮೊಗೆ ಗ್ರಾಮದಲ್ಲಿ ಸುಮಾರು 25 ಕೊರೊನಾ ಪಾಸಿಟಿವ್ ಪ್ರಕರಣ ಇದ್ದು, ಅದರ ನಿರ್ವಹಣೆಗೆ ಸಂಬಂಧಿಸಿದಂತೆ ವಾಟ್ಸ್ಯಾಪ್​ ಸ್ಟೇಟಸ್ ಹಾಕಿದ್ದ ಉದಯ್ ಗಾಣಿಗ ಊರಿಗೆ ಬೇಲಿ ಹಾಕುವ ಮೊದಲು ವ್ಯವಸ್ಥೆ ಕಲ್ಪಿಸಿ ಎಂದು ಪ್ರಾಣೇಶ್ ಯಡಿಯಾಳ ಅವರ ಕಾಲೆಳೆದಿದ್ದರು. ಅಲ್ಲದೇ ಅದಕ್ಕೂ ಮುನ್ನ ಉದಯ್ ಮನೆಯಲ್ಲಿ ಬೋರ್​ವೆಲ್ ಕೊರೆಸಲು ಪ್ರಾಣೇಶ್ ಅವಕಾಶ ಕೊಟ್ಟಿಲ್ಲ ಎನ್ನುವ ವಿಷಯವೂ ದ್ವೇಷಕ್ಕೆ ಕಾರಣವಾಗಿತ್ತು. ನಂತರ ವಾಟ್ಸ್ಯಾಪ್​ ಸ್ಟೇಟಸ್​ನಿಂದ ಪ್ರಾಣೇಶ್ ಯಡಿಯಾಳ ಮತ್ತಷ್ಟು ಕುಪಿತರಾಗಿ ಉದಯ್​ ಅವರ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಈ ಸಂಬಂಧ ಆರೋಪಿಗಳೆಲ್ಲರನ್ನೂ ಬಂಧಿಸಿದರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮೈಸೂರು: ಅನ್ಯಜಾತಿಯ ಹುಡುಗನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಲೆ ಮಾಡಿದ ತಂದೆ 

ಅನೈತಿಕ ಸಂಬಂಧ ಶಂಕೆ; ಮಹಿಳೆ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದ ತಂದೆ, ಅಪ್ರಾಪ್ತ ಮಗ ಅರೆಸ್ಟ್

Follow us on

Related Stories

Most Read Stories

Click on your DTH Provider to Add TV9 Kannada