
ಬೆಂಗಳೂರು, ಏಪ್ರಿಲ್ 15: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ (2nd PUC) ಮಹತ್ವದ ಅವಕಾಶವನ್ನು ಕಲ್ಪಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿರುವಂತೆ ಪರೀಕ್ಷೆ-2ಕ್ಕೆ ನೋಂದಣಿ ಪ್ರಕ್ರಿಯೆ ಏಪ್ರಿಲ್ 9ರಿಂದ ಪ್ರಾರಂಭವಾಗಿ ಏಪ್ರಿಲ್ 17ರವರೆಗೆ ನಡೆಯಲಿದೆ.
2026ರಲ್ಲಿ ರೆಗ್ಯೂಲರ್ ಫ್ರೆಶ್ (Regular Fresh) ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊಂಡು ಮೊದಲನೇ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ (Not Completed) ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿಸದೆ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳಬಹುದು. ವಿದ್ಯಾರ್ಥಿಗಳು ನೀಡಿರುವ ಆನ್‌ಲೈನ್ ಲಿಂಕ್ (http://tinyurl.com/mvp9k6es) ಮೂಲಕ ಅಥವಾ ತಮ್ಮ ಸಂಬಂಧಿತ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ ಪಿಯು ಎಕ್ಸಾಮ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಇದಲ್ಲದೆ, ಮೊದಲನೇ ಪರೀಕ್ಷೆಯಲ್ಲಿ ಗೈರುಹಾಜರಾಗಿದ್ದ ಅಥವಾ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ತಮ್ಮ ಲಾಗಿನ್ ಮೂಲಕ ನೇರವಾಗಿ ನೋಂದಾಯಿಸಲು ಅವಕಾಶ ನೀಡಲಾಗಿದೆ. ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡುವಂತೆ ಮಂಡಳಿ ಸೂಚಿಸಿದೆ.
ಪರೀಕ್ಷೆ-2ಕ್ಕೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಪ್ರವೇಶಪತ್ರಗಳನ್ನು ನಿಗದಿತ ಸಮಯದಲ್ಲಿ ಸಂಬಂಧಿತ ಕಾಲೇಜುಗಳ ಪ್ರಾಂಶುಪಾಲರ ಲಾಗಿನ್ ಮೂಲಕ ಲಭ್ಯಗೊಳಿಸಲಾಗುವುದು ಎಂದು ತಿಳಿಸಲಾಗಿದೆ. ಪರೀಕ್ಷೆಯ ವೇಳಾಪಟ್ಟಿಯನ್ನು ಮರುನಿಗದಿ ಮಾಡಲಾಗಿದ್ದು, ಪರೀಕ್ಷೆಗಳು 30 ಏಪ್ರಿಲ್ 2026ರಿಂದ ಆರಂಭವಾಗಲಿವೆ. ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ಪ್ರಶ್ನೆ ಕೋಶ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಉಪಯೋಗಿಸಿಕೊಂಡು ಶಾಂತ ಮನಸ್ಥಿತಿಯಲ್ಲಿ ಸಿದ್ಧತೆ ನಡೆಸಿ ಪರೀಕ್ಷೆಗೆ ಹಾಜರಾಗುವಂತೆ ಮನವಿ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.