‘ನಿಮ್ಮ ಜೀವನ ರೂಪಿಸೋದು ಮಾರ್ಕ್ಸ್ ಅಲ್ಲ’; ಪಿಯುಸಿ ಮಾರ್ಕ್ಸ್ಕಾರ್ಡ್ ಹಂಚಿಕೊಂಡ ಖ್ಯಾತ ಬರಹಗಾರ
Writer Ankur Warikoo shares Class 12 marksheet: ದ್ವಿತೀಯ ಪಿಯುಸಿ ಪರೀಕ್ಷೆ ಬರೆದವರು ಫಲಿತಾಂಶಕ್ಕಾಗಿ ಎದುರುನೋಡುತ್ತಿದ್ದಾರೆ. ಈ ಹೊತ್ತಿನಲ್ಲಿ 25 ವರ್ಷದ ಹಿಂದಿನ ತಮ್ಮ ಸಿಬಿಎಸ್ಇ 12ನೆ ತರಗತಿ ಪರೀಕ್ಷೆಯ ಅಂಕಪಟ್ಟಿಯನ್ನು ಅಂಕುರ್ ವಾರಿಕೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಇಂಗ್ಲೀಷ್ ಪರೀಕ್ಷೆಯಲ್ಲಿ ನೂರಕ್ಕೆ 57 ಅಂಕಗಳನ್ನು ಪಡೆದಿದ್ದಾರೆ. ಇಷ್ಟು ಕಡಿಮೆ ಅಂಕ ಬಂದಿದ್ದು ಇವರಲ್ಲಿ ಹತಾಶೆಯ ಭಾವನೆ ತಂದಿತ್ತಂತೆ. ಆದರೆ, ಇವತ್ತು ಆ ಅಂಕಗಳು ತಮ್ಮ ಬದುಕನ್ನು ಬಿಂಬಿಸುತ್ತಿಲ್ಲ. ನಾನೇ ನನ್ನ ಬದುಕಿಗೆ ರೂಪ ಕೊಟ್ಟೆ ಎಂದು ಆಂಗ್ಲ ಬಾಷೆಯ ಬರಹಗಾರರೂ ಆದ ಅವರು ಹೇಳಿಕೊಂಡಿದ್ದಾರೆ.
ನವದೆಹಲಿ, ಏಪ್ರಿಲ್ 4: ಪರೀಕ್ಷೆ ಬರೆಯುವುದು ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ಘಟ್ಟಗಳು. ಆದರೆ ಈ ಪರೀಕ್ಷೆಯೇ ಜೀವನ ಅಲ್ಲ. ಪರೀಕ್ಷೆಯಲ್ಲಿ ತೇರ್ಗಡೆ ಆಗಿದಾಕ್ಷಣ ವಿದ್ಯಾರ್ಥಿ ಜೀವನ ಪಾವನ ಆಯಿತು ಎಂದಲ್ಲ. ಪರೀಕ್ಷೆಯ ಅಂಕಗಳ ಆಚೆಗೂ ಬದುಕು ಇರುತ್ತದೆ. ಅಂಕಗಳಿಗಿಂತ ಹೆಚ್ಚಾಗಿ ಅಂತಃಸತ್ವವು ಒಬ್ಬ ವ್ಯಕ್ತಿಯನ್ನು ರೂಪಿಸುತ್ತದೆ. ಈಗ ರಾಜ್ಯದಲ್ಲಿ ಪರೀಕ್ಷಾ ಸಮಯ. ದ್ವಿತೀಯ ಪಿಯುಸಿ (II PUC) ಪರೀಕ್ಷೆ ಬರೆದವರು ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಇದೇ ವೇಳೆ, ಖ್ಯಾತ ಬರಹಗಾರ ಅಂಕುರ್ ವಾರಿಕೂ (Ankur Warikoo) ಅವರು ತಮ್ಮ 12ನೇ ತರಗತಿ (Class 12) ಪರೀಕ್ಷೆಯ ಅಂಕಪಟ್ಟಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಂಗ್ಲೀಷ್ ಭಾಷೆಯಲ್ಲಿ ಹಲವು ಪುಸ್ತಕಗಳನ್ನು ಬರೆದಿರುವ ಅವರು ಕ್ಲಾಸ್ 12ನಲ್ಲಿ ಇಂಗ್ಲೀಷ್ ಭಾಷೆಯ ಪರೀಕ್ಷೆಯಲ್ಲಿ ಪಡೆದ ಅಂಕ ನೂರಕ್ಕೆ 57 ಮಾತ್ರವಂತೆ. ಅಂದು ತಮ್ಮ ಜೀವನವೇ ನಿರರ್ಥಕ ಆಯಿತಲ್ಲ ಎಂದು ವೇದನೆ ಪಟ್ಟಿದ್ದ ಅವರು ಇವತ್ತು ಇಂಗ್ಲೀಷ್ ಭಾಷೆಯಲ್ಲಿ ಪುಸ್ತಕ ಬರೆಯುವ ಸಾಹಿತಿಯಾಗಿದ್ದಾರೆ, ಉದ್ಯಮಿಯಾಗಿದ್ದಾರೆ.
ಅಂಕಗಳಲ್ಲ, ನಿಮ್ಮನ್ನು ರೂಪಿಸುವ ಶಕ್ತಿ ನಿಮಗೆ ಮಾತ್ರವೇ ಇರುವುದು
‘12ನೇ ತರಗತಿ ಪರೀಕ್ಷೆಯಲ್ಲಿ ಇಂಗ್ಲೀಷ್ನಲ್ಲಿ 100ಕ್ಕೆ ಕೇವಲ 57 ಅಂಕ ಪಡೆದಿದ್ದೆ. ಇಷ್ಟು ಕಡಿಮೆ ಅಂಕವನ್ನು ನಿರೀಕ್ಷಿಸಿರಲಿಲ್ಲ. ವೈಫಲ್ಯದ ಭಾವನೆ ಕಾಡಿತ್ತು.
‘ಇವತ್ತು ಜನರು ನನ್ನನ್ನು ಉತ್ತಮ ವಾಗ್ಮಿ ಎಂದು ಭಾವಿಸುತ್ತಾರೆ. ನಾನು ಗಳಿಸಿದ ಅಂಕಗಳು ನನ್ನ ಸಾಮರ್ಥ್ಯಕ್ಕೆ ಪ್ರತೀಕವಾಗಿದ್ದರೆ ನಾನೀಗ ಎಲ್ಲಿಯೂ ಸಲ್ಲದವನಾಗಿರಬೇಕಿತ್ತು.
View this post on Instagram
‘ಆಗ ನನಗೆ ಇದ್ದ ಭಾವನೆ ಈಗ ಯಾರಿಗಾದರೂ ಮೂಡಿದ್ದರೆ ಈ ವಿಷಯ ನೆನಪಿಟ್ಟುಕೊಳ್ಳಿ: ನಿಮ್ಮ ಅಂಕಗಳು ನಿಮ್ಮನ್ನು ನಿರ್ಧರಿಸುವ ಶಕ್ತಿ ಹೊಂದಿರುವುದಿಲ್ಲ. ನಿಮ್ಮನ್ನು ನಿರ್ಧರಿಸುವ ಶಕ್ತಿ ನಿಮಗೆ ಮಾತ್ರವೇ ಇರುವುದು.
‘ಸಾಕಷ್ಟು ಬಾರಿ ವಿಫಲನಾಗಿರುವ ನನ್ನ ಕಿವಿಮಾತು ತಿಳಿಯಿರಿ… ನೀವಿನ್ನೂ ಅಸ್ತಿತ್ವದಲ್ಲಿ ಇರುವುದೇ ನಿಮ್ಮ ಬಳಿ ಇರುವ ಬಹುದೊಡ್ಡ ಉಡುಗೊರೆ ಎಂಬುದನ್ನು ತಿಳಿಯಿರಿ. ನಿಮ್ಮ ಬಳಿ ಸಮಯ ಇದೆ. ನಿಮ್ಮ ಬಳಿ ನೀವು ಇದ್ದೀರಿ. ಅದನ್ನು ಯಥೇಚ್ಛವಾಗಿ ಉಪಯೋಗಿಸಿ,’ ಎಂದು ಅಂಕುರ್ ವಾರಿಕೂ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇವತ್ತಲ್ಲ (ಏ.03), ಇದು ನಕಲಿ ನೋಟಿಸ್
ಅಂಕುರ್ ವಾರಿಕೂ ಅವರು ಇಂಗ್ಲೀಷ್ ಮೀಡಿಯಂ ಸ್ಕೂಲ್ನಲ್ಲೇ ಓದಿದ್ದರು. ಅವರ ಇಂಗ್ಲೀಷ್ ಜ್ಞಾನವೂ ಚೆನ್ನಾಗಿತ್ತು. ಆದರೂ ಕೂಡ ಪರೀಕ್ಷೆಯಲ್ಲಿ 57 ಅಂಕ ಪಡೆದಿದ್ದರು. ಅವರ ಶಾಲೆಯಲ್ಲಿ ಇಂಗ್ಲೀಷ್ನಲ್ಲಿ ಅತ್ಯಂತ ಕಡಿಮೆ ಅಂಕ ಗಳಿಸಿದ ಮಕ್ಕಳಲ್ಲಿ ಅವರೂ ಒಬ್ಬರು. ಈ ಅಂಕವೇ ಅವರಿಗೆ ಗುರುತಾಗಿ ತೋರತೊಡಗಿತ್ತಂತೆ. ಅದೇ ಬಾಧೆಯಲ್ಲಿ ಅವರು ಉತ್ಸಾಹ ಕಳೆದುಕೊಂಡಿದ್ದರೆ ಇವತ್ತು ಇಪತ್ತು ವರ್ಷದ ಬಳಿಕ ಅವರೊಬ್ಬ ಸೆಲಬ್ರಿಟಿ ಮಟ್ಟಕ್ಕೆ ಬೆಳೆಯಲು ಆಗುತ್ತಿರಲಿಲ್ಲ.
‘ಯಾವ ಪರೀಕ್ಷೆಯೂ ನನ್ನ ಅಸ್ತಿತ್ವ ಆಗಿರಲಿಲ್ಲ. ಅಂಕ ಕೇವಲ ಒಂದು ಫಲಿತಾಂಶ ಮಾತ್ರವೇ. ನನ್ನ ಸ್ವಂತ ಶ್ರಮದಿಂದ ಫಲಿತಾಂಶವನ್ನು ಬದಲಿಸಿದೆ,’ ಎಂದು 43 ವರ್ಷದ ಅಂಕುರ್ ವಾರಿಕೂ ಹೇಳುತ್ತಾರೆ.
ಇನ್ನಷ್ಟು ಶಿಕ್ಷಣ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ