ಬೆಂಗಳೂರಿನ MAHE ಕ್ಯಾಂಪಸ್​ನಲ್ಲಿ 4 ನೇ ಆವೃತ್ತಿಯ ಮಣಿಪಾಲ್ ಅಂತಾರಾಷ್ಟ್ರೀಯ ಸಾಹಿತ್ಯ ಮತ್ತು ಕಲಾ ವೇದಿಕೆ ಸಮ್ಮೇಳನ

MAHE ಈ ಹಿಂದಿನ ಮೂರು ಯಶಸ್ವಿ ಆವೃತ್ತಿಗಳ ನಂತರ ಬೆಂಗಳೂರು ನಗರದಲ್ಲಿ ಈ ಸಮ್ಮೇಳನ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ “In Conversation with Bengaluru: Spaces, Intersections, Transitions, and Imaginaries” (SITI) ಎಂಬ ವಿಷಯದ ಬಗ್ಗೆ ವಿಸ್ತೃತ ಚರ್ಚೆಗಳು ನಡೆಯಲಿವೆ.

ಬೆಂಗಳೂರಿನ MAHE ಕ್ಯಾಂಪಸ್​ನಲ್ಲಿ 4 ನೇ ಆವೃತ್ತಿಯ ಮಣಿಪಾಲ್ ಅಂತಾರಾಷ್ಟ್ರೀಯ ಸಾಹಿತ್ಯ ಮತ್ತು ಕಲಾ ವೇದಿಕೆ ಸಮ್ಮೇಳನ
MAHE CampusImage Credit source: 180 Degrees Consulting
Follow us
ನಯನಾ ಎಸ್​ಪಿ
|

Updated on: Apr 01, 2023 | 2:29 PM

ಬಿಎಂಗಳೂರು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ನ ಬೆಂಗಳೂರು ಕ್ಯಾಂಪಸ್ ನಾಲ್ಕನೇ ಆವೃತ್ತಿಯ ಮಣಿಪಾಲ್ ಅಂತಾರಾಷ್ಟ್ರೀಯ ಸಾಹಿತ್ಯ ಮತ್ತು ಕಲಾ ವೇದಿಕೆಯನ್ನು (Manipal International Literature and Arts Platform) 6 ಏಪ್ರಿಲ್ ರಿಂದ 8 ಏಪ್ರಿಲ್ 2023 ರವರೆಗೆ ಆಯೋಜಿಸಿದೆ. ಯಲಹಂಕದಲ್ಲಿರುವ (Yelahanka) MAHE ಬೆಂಗಳೂರು ಕ್ಯಾಂಪಸ್​ನಲ್ಲಿ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸಿ, ಬೆಂಬಲಿಸುವ ಉದ್ದೇಶದಿಂದ ಈ ಸಮ್ಮೇಳನ ನಡೆಸಲಾಗುತ್ತಿದೆ. MAHE ಈ ಹಿಂದಿನ ಮೂರು ಯಶಸ್ವಿ ಆವೃತ್ತಿಗಳ ನಂತರ ಬೆಂಗಳೂರು ನಗರದಲ್ಲಿ ಈ ಸಮ್ಮೇಳನ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ “In Conversation with Bengaluru: Spaces, Intersections, Transitions, and Imaginaries” (SITI) ಎಂಬ ವಿಷಯದ ಬಗ್ಗೆ ವಿಸ್ತೃತ ಚರ್ಚೆಗಳು ನಡೆಯಲಿವೆ.

ಶಿಕ್ಷಣ ತಜ್ಞರು, ಕವಿಗಳು, ವಿಮರ್ಶಕರು, ಚಿತ್ರ ನಿರ್ಮಾಪಕರು ಮತ್ತು ರಂಗಕರ್ಮಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಲೇಖಕರು, ಕಲಾವಿದರು, ಸಾಹಿತ್ಯ ವಿಮರ್ಶಕರು, ವಿದ್ಯಾರ್ಥಿಗಳಿಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು, ಅವರ ವಿಚಾರಧಾರೆಗಳನ್ನು ಪರಸ್ಪರ ಹಂಚಿಕೊಳ್ಳಲು ಮತ್ತು ಸಂವಾದ ನಡೆಸಲು ಇಲ್ಲಿ ವೇದಿಕೆಯನ್ನು ಕಲ್ಪಿಸಲಾಗುತ್ತಿದೆ. ಇದಲ್ಲದೇ, ಗಿರೀಶ್ ಕಾಸರವಳ್ಳಿ. ಎಚ್.ಎಸ್.ಶಿವಪ್ರಕಾಶ್, ಪೃಥ್ವಿ ಕೊಣನೂರು, ಬಾನು ಮುಷ್ತಾಕ್ ಮತ್ತು ದೀಪಾ ಬಸ್ತಿ ಅವರಂತಹ ಅನೇಕ ವಿದ್ವಾಂಸರು, ಚಲನಚಿತ್ರ ನಿರ್ಮಾಪಕರು ಮತ್ತು ಲೇಖಕರು ಈ ಸಮ್ಮೇಳನದ ಸಂವಾದಗಳು, ವಿಚಾರಸಂಕಿರಣಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಖ್ಯಾತ ಸಾಹಿತ್ಯ ವಿಮರ್ಶಕ, ಸಂಶೋಧಕ ಮತ್ತು ಪದ್ಮಶ್ರೀ ಪುರಸ್ಕೃತರಾದ ಪ್ರೊ.ಗಣೇಶ್.ಎನ್.ದೇವಿ ಅವರು ಈ ಸಮ್ಮೇಳನದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ. ಈ ಸಾಹಿತ್ಯ ಹಬ್ಬದಲ್ಲಿ ವಿವಿಧ ಸಂವಾದಗಳು, ಮಾಸ್ಟರ್ ಕ್ಲಾಸ್​ಗಳು, ಕಾರ್ಯಾಗಾರಗಳು, ಚಿತ್ರ ಪ್ರದರ್ಶನಗಳು, ಸ್ಪರ್ಧೆಗಳು ಮತ್ತು ಕಲಾ ಪ್ರದರ್ಶನಗಳು ಇರಲಿವೆ. ಮಾಸ್ಟರ್ ಕ್ಲಾಸ್​ಗಳು ಮೂರು ದಿನವೂ ನಡೆಯಲಿದ್ದು, ಇಲ್ಲಿ ಪ್ರೊ.ರಾಜೇಂದ್ರ ಚೆನ್ನಿ ಅವರಿಂದ ಕನ್ನಡ ಸಾಂಸ್ಕೃತಿಕ ಕಲ್ಪನೆಯಲ್ಲಿ ಬೆಂಗಳೂರು, ಶರಚ್ಚಂದ್ರ ಲೆಲೆ ಅವರಿಂದ ಪರಿಸರದ ಜವಾಬ್ದಾರಿಯುತ ಬೆಂಗಳೂರು: ಆಕ್ಸಿಮೊರಾನ್, ಜಾನಕಿ ನಾಯರ್ ಅವರಿಂದ ಅರ್ಬನ್ ಲೈಫ್ ಆಫ್ ಕ್ಯಾಸ್ಟ್ ವಿಚಾರದ ಬಗ್ಗೆ ವಿಶೇಷ ಉಪನ್ಯಾಸ ಇರಲಿವೆ.

ಮೊದಲ ಎರಡು ದಿನಗಳಲ್ಲಿ ವಸುಧೇಂದ್ರ ಅವರಿಂದ ಕಥಾ ಕರ್ನಾಟಕ ಹೆಸರಿನಲ್ಲಿ ಕಿರುಚಿತ್ರಗಳ ಬಗ್ಗೆ ಕಾರ್ಯಾಗಾರ ಮತ್ತು ನಿಶಾ ಅಬ್ದುಲ್ಲಾ ಮತ್ತು ದೇಬೋಸ್ಮಿತ ದಾಮ್ ಅವರ My Body Is the City – A Theatre Workshop to Explore Body, Expression, Self, and Stories ಇರಲಿದೆ. ನಳಂದ ಆರ್ಟ್ಸ್ ಸ್ಟುಡಿಯೋದ ಕಲಾವಿದರಿಂದ ದೇಸ್ದೆಮೊಂಡ ರೂಪಕಂ, ನಾಗ್ನ ಥಿಯೇಟರ್ ನಿಂದ ದಿ ಕೇರ್ ಟೇಕರ್ ಮತ್ತು ಯಕ್ಷ ದುರ್ಗಾ ಮಹಿಳಾ ಕಲಾ ಬಳಗದಿಂದ ಪದ್ಮಾವತಿ ಕಾಳಗ, ತಾಳಮದ್ದಳೆ ಇರಲಿದೆ.

ಈ ಸಮ್ಮೇಳನಕ್ಕೆ ಆಹ್ವಾನ ನೀಡಿ ಮಾತನಾಡಿದ ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಅವರು, “ಶ್ರೇಷ್ಠತೆಯ ಸಂಸ್ಥೆಯಾಗಿ, ನಾವು ಬೌದ್ಧಿಕ ಮತ್ತು ಸೃಜನಶೀಲ ಪ್ರಯತ್ನಗಳನ್ನು ಸದಾ ನಡೆಸುತ್ತಿರುತ್ತೇವೆ. ಇದನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ. m.i.l.a.p ಒಂದು ವಿಶಿಷ್ಟವಾದ ಕಾರ್ಯಕ್ರಮವಾಗಿದ್ದು, ಇಲ್ಲಿ ನೀವು ಭೂಮಿಯ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಪೂರ್ಣವಾದ ಸಂಯೋಜನೆಯನ್ನು ಕಾಣಬಹುದಾಗಿದೆ. ಇಲ್ಲಿಗೆ ಆಗಮಿಸಿ ನೋಡುವವರಿಗೆ ಒಂದು ಶ್ರೀಮಂತವಾದ ಅನುಭವವನ್ನು ನೀಡುತ್ತದೆ’’ ಎಂದು ತಿಳಿಸಿದರು.

ಮಾಹೆಯ ಬೆಂಗಳೂರು ಕ್ಯಾಂಪಸ್ ನ ಪ್ರೊ-ವೈಸ್ ಚಾನ್ಸೆಲರ್ ಪ್ರೊ.ಮಧು ವೀರರಾಘವನ್ ಅವರು ಮಾತನಾಡಿ, “ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ವಿಶ್ವವಿದ್ಯಾಲಯವೊಂದು ವಾಣಿಜ್ಯೇತರ ಸಾಹಿತ್ಯ ಮತ್ತು ಕಲಾ ಸಮ್ಮೇಳನವನ್ನು ಆಯೋಜಿಸುತ್ತಿದೆ. ಈ ಸಮ್ಮೇಳನದಲ್ಲಿ ಸಾಹಿತ್ಯ, ಪ್ರದರ್ಶನ ಮತ್ತು ದೃಶ್ಯ ಕಲೆಗಳನ್ನು ಪ್ರದರ್ಶಿಸಲಾಗುತ್ತದೆ. ಈ ಒಂದು ವಿಶಿಷ್ಟವಾದ ಸಮ್ಮೇಳನದಲ್ಲಿ ನಮ್ಮೊಂದಿಗೆ ಸೇರಲು ಸ್ಥಳೀಯ ಸಮುದಾಯ, ಓದುಗರು ಮತ್ತು ನಗರದಾದ್ಯಂತ ಇರುವ ಕಲಾ ಉತ್ಸಾಹಿಗಳನ್ನು ಸ್ವಾಗತಿಸುತ್ತಿದ್ದೇವೆ. ಹೊಸ ಕ್ಯಾಂಪಸ್​ನಲ್ಲಿ ನಾವು ನಗರದ ಈ ಭಾಗದಲ್ಲಿ ಸಾಂಸ್ಕೃತಿಕ ವಾತಾವರಣವನ್ನು ಸೃಷ್ಟಿಸಲು ಬಯಸುತ್ತೇವೆ.’’ ಎಂದ ಹೇಳಿದ್ದಾರೆ.