SSLC Grace Mark: ಎಸ್ಎಸ್ಎಲ್ಸಿ ಗ್ರೇಸ್ ಮಾರ್ಕ್ ರದ್ದತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಈ ವರ್ಷ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ಕೊಟ್ಟ ಹೊರತಾಗಿಯೂ ಫಲಿತಾಂಶ ಕಡಿಮೆಯಾಗಿತ್ತು. ಈ ವಿಚಾರ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಅತ್ತ ಸಿಇಟಿ ಪರೀಕ್ಷೆಯಲ್ಲಿ ಮಾಡಿರುವ ಎಡವಟ್ಟಿಗೆ ಸರ್ಕಾರ ಅಧಿಕಾರಿಯ ಎತ್ತಂಗಡಿ ಮಾಡಿ ಕೈತೊಳೆದುಕೊಂಡಿದೆ. ಇದೀಗ ಗ್ರೇಸ್ ಮಾರ್ಕ್ಸ್ ಅನ್ನು ಮುಂದಿನ ವರ್ಷದಿಂದ ರದ್ದು ಮಾಡುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರು, ಮೇ 17: ಮುಂದಿನ ವರ್ಷದಿಂದ ಎಸ್ಎಸ್ಎಲ್ಸಿ ಗ್ರೇಸ್ ಮಾರ್ಕ್ (SSLC Grace Marks) ರದ್ದು ಮಾಡುವಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ವಿಧಾನಸೌಧದಲ್ಲಿ ನಡೆದ ಸಿಎಂ, ಡಿಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡ ಅವರು, ಈ ವರ್ಷ ಗ್ರೇಸ್ ಮಾರ್ಕ್ ಕೊಟ್ಟ ವಿಚಾರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ವಿದ್ಯಾರ್ಥಿಗಳಿಗೆ 20 ಗ್ರೇಸ್ ಮಾರ್ಕ್ಸ್ ನೀಡಿದ್ದೀರಿ. ಯಾವ ಕಾರಣ ಮತ್ತು ಉದ್ದೇಶದಿಂದ ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. ಗ್ರೇಸ್ ಮಾರ್ಕ್ಸ್ ನೀಡಲು ನಿಮಗೆ ಯಾರು ಹೇಳಿದ್ದು ಎಂದು ತರಾಟೆಗೆ ತೆಗೆದುಕೊಂಡರು.
ವಿದ್ಯಾರ್ಥಿಗಳು ಅವರ ಅರ್ಹತೆ ಆಧಾರದಲ್ಲಿ ಪ್ರಗತಿ ಸಾಧಿಸಬೇಕು. ಗ್ರೇಸ್ ಮಾರ್ಕ್ಸ್ ನೀಡಿದರೆ ಸ್ಪರ್ಧಾ ಸಾಮರ್ಥ್ಯ ಕಡಿಮೆ ಆಗಲ್ವಾ? ಕಡಿಮೆ ಅಂಕ ಪಡೆದರೆ ವಿದ್ಯಾರ್ಥಿಗಳು ಅನರ್ಹರಾ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಶಿವಕುಮಾರ್ ಮಾತಿಗೆ ಸಿಎಂ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದರು.
ನಾನೂ ಕೂಡ 300 ಅಂಕ ಪಡೆದಿದ್ದೆ; ಡಿಕೆ ಶಿವಕುಮಾರ್
ತಾವು ಗಳಿಸಿದ್ದ ಅಂಕವನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಡಿಕೆ ಶಿವಕುಮಾರ್, ನಾನು ಕೂಡ 300 ಅಂಕ ಪಡೆದಿದ್ದೆ. ಹಾಗೆಂದು ಅಸಮರ್ಥರು ಎನ್ನುತ್ತೀರಾ ಎಂದು ಪ್ರಶ್ನಿಸಿದರು.
ಇದೇ ವೇಳೆ, ಕೋವಿಡ್ ಸಂದರ್ಭದಲ್ಲಿ 5-10 ಗ್ರೇಸ್ ಮಾರ್ಕ್ಸ್ ಕೊಡುತ್ತಿದ್ದೆವು. ಈಗ ಅದನ್ನು ಹೆಚ್ಚಿಸಿದ್ದೇವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈಗ ಕೋವಿಡ್ ಇದೆಯೇನ್ರೀ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈಗ ಕೊಟ್ಟಿರುವ ಗ್ರೇಸ್ ಮಾರ್ಕ್ಸ್ನಲ್ಲಿ ಯಾವುದೇ ಬದಲಾವಣೆ ಇಲ್ಲ: ಮಧು ಬಂಗಾರಪ್ಪ
ಮುಂದಿನ ವರ್ಷದಿಂದ ಎಸ್ಎಸ್ಎಲ್ಸಿ ಗ್ರೇಸ್ ಮಾರ್ಕ್ಸ್ ಇರುವುದಿಲ್ಲ ಎಂದು ವಿಧಾನಸೌಧದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಈ ವರ್ಷ ಮಾತ್ರ ಗ್ರೇಸ್ ಮಾರ್ಕ್ಸ್ ಕೊಡಲು ತೀರ್ಮಾನ ಕೈಗೊಳ್ಳಲಾಗಿತ್ತು. ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇರಲ್ಲ. ಸಿಎಂ ಇದರ ಬಗ್ಗೆ ಸಭೆಯಲ್ಲಿ ಮಾಹಿತಿ ಕೇಳಿದ್ದರು. ಪರೀಕ್ಷಾ ನಡವಳಿಕೆ ಸರಿ ಮಾಡಲು ಮುಂದಾಗಿದ್ದೆವು. ಈಗ ಕೊಟ್ಟಿರುವ ಗ್ರೇಸ್ ಮಾರ್ಕ್ಸ್ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಶೇ 20ರಷ್ಟು ಗ್ರೇಸ್ ಮಾರ್ಕ್ ಕೊಟ್ಟರೂ ಕಡಿಮೆ ಫಲಿತಾಂಶ!
ಮೇ 9ರಂದು ರಾಜ್ಯದಲ್ಲಿ 2023-24ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿತ್ತು. ಈ ಬಾರಿ 1.70 ಲಕ್ಷ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ನೀಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೇರ್ಗಡೆಗೆ ಕನಿಷ್ಠ ಅಂಕವನ್ನು 35ರಿಂದ 25ಕ್ಕೆ ಶಿಕ್ಷಣ ಇಲಾಖೆ ಇಳಿಸಿತ್ತು. ಒಂದು ವೇಳೆ ಗ್ರೇಸ್ ಮಾರ್ಕ್ ನೀಡದಿದ್ದರೆ ಇಷ್ಟೂ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡು ಫಲಿತಾಂಶ ಪ್ರಮಾಣ ಇನ್ನಷ್ಟು ಕುಸಿಯುತ್ತಿತ್ತು ಎಂದೂ ಮಂಡಳಿ ತಿಳಿಸಿತ್ತು.
ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಟ್ಟು 8,59,967 ಲಕ್ಷ ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 6,31,204 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಉಡುಪಿ ಜಿಲ್ಲೆ ಶೇ 94ರ ಫಲಿತಾಂಶದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ಯಾದಗಿರಿ ಜಿಲ್ಲೆ ಶೇ 50.59 ರ ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:33 pm, Fri, 17 May 24