Exam preparation Tips: ವಿದ್ಯಾರ್ಥಿಗಳೇ ಪರೀಕ್ಷಾ ತಯಾರಿ ಹೇಗಿರಬೇಕು? ಹೆಚ್ಚು ಅಂಕಗಳಿಸಲು ಇಲ್ಲಿದೆ ಸಿಂಪಲ್ ಟಿಪ್ಸ್
ಶಾಲಾ ಮಕ್ಕಳಿಗೆ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಪರೀಕ್ಷೆಗಳು ಆರಂಭಗೊಳ್ಳಲಿದೆ. ಪರೀಕ್ಷೆಗಳು ಹತ್ತಿರ ಬರುತ್ತಿದ್ದಂತೆ ಪೋಷಕರ ಜವಾಬ್ದಾರಿಯು ಹೆಚ್ಚಾಗುತ್ತದೆ. ಈ ಸಮಯದಲ್ಲಿ ಮಕ್ಕಳಿಗಿಂತ ಹೆತ್ತವರಿಗೆಯೇ ಟೆನ್ಶನ್ ಹೆಚ್ಚು. ಅದರಲ್ಲಿ ಕೆಲ ಮಕ್ಕಳಂ ತೂ ಸ್ವಇಚ್ಛೆಯಿಂದ ಓದುವುದಿಲ್ಲ. ಪೋಷಕರೇ ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಮಕ್ಕಳ ಹಿಂದೆ ಬಿದ್ದು ಓದಿಸಬೇಕಾಗುತ್ತದೆ. ಕೆಲ ಮಕ್ಕಳು ಎಷ್ಟೇ ಓದಿದರೂ ತಲೆಗೆ ಹತ್ತುವುದೇ ಇಲ್ಲ. ಈ ಕೆಲವು ಟಿಪ್ಸ್ ಅನುಸರಿಸಿದ್ರೆ ಈ ಬಾರಿಯ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಬಹುದು, ಆ ಕುರಿತಾದ ಕೆಲವು ಸಲಹೆಗಳು ಇಲ್ಲಿವೆ.

ಸಾಂದರ್ಭಿಕ ಚಿತ್ರ
ಪರೀಕ್ಷೆಗಳು ಹತ್ತಿರ ಬರುತ್ತಿದ್ದಂತೆ ಹೆತ್ತವರ ಆತಂಕ ಹೆಚ್ಚಾಗುತ್ತದೆ. ಈ ವೇಳೆ ಯಲ್ಲಿ ಮಕ್ಕಳಿಗೆ ಧೈರ್ಯತುಂಬುವ ಬದಲು ಪೋಷಕರು ಭಯ ಪಡುತ್ತಾರೆ. ಈ ಬಾರಿಯ ಪರೀಕ್ಷೆಯಲ್ಲಾದ್ರೂ ಒಳ್ಳೆಯ ಅಂಕ ಗಳಿಸಲಿ ಎಂದು ಮಕ್ಕಳ ಮೇಲೆ ಹೆಚ್ಚು ಒತ್ತಡ ಹಾಕುತ್ತಾರೆ. ಇಲ್ಲಿ ಪೋಷಕರು ಹಾಕುವ ಒತ್ತಡಕ್ಕಿಂತ ಮಕ್ಕಳು ತಯಾರಿಸುವುದು ನಡೆಸುವುದು ಬಹಳ ಮುಖ್ಯ. ವೇಳಾಪಟ್ಟಿಯನ್ನು ಹಾಕಿಕೊಂಡು ಈ ಕೆಲವು ಟಿಪ್ಸ್ ನೊಂದಿಗೆ ಪರೀಕ್ಷಾ ತಯಾರಿ ನಡೆಸಿದರೆ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸಬಹುದು.
- ವೇಳಾಪಟ್ಟಿ ರಚಿಸಿಕೊಳ್ಳಿ : ಪರೀಕ್ಷೆ ಸಮಯ ಹತ್ತಿರ ಬರುತ್ತಿದ್ದಂತೆ ತಯಾರಿ ನಡೆಸುವುದು ಬಹಳ ಮುಖ್ಯ. ಈ ತಯಾರಿಯ ವೇಳೆ ವಿದ್ಯಾರ್ಥಿ ಗಳು ಟೈಮ್ ಟೇಬಲ್ ರಚಿಸಿಕೊಳ್ಳಿ. ಹೌದು, ಪರೀಕ್ಷೆಯು ಆರಂಭವಾಗಲು ಎಷ್ಟು ದಿನವಿದೆ ಎಂದು ಲೆಕ್ಕಹಾಕಿ ಎಲ್ಲಾ ವಿಷಯಗಳಿಗೆ ಹೊಂದುವಂತೆ ಟೈಮ್ ಟೇಬಲ್ ಮಾಡಿಟ್ಟುಕೊಳ್ಳಿ. ವೇಳಾಪಟ್ಟಿ ಅನುಸಾರವಾಗಿ ಓದಲು ಶುರು ಮಾಡಿ. ದಿನದ ಇಪ್ಪತ್ತಾನಾಲ್ಕು ಗಂಟೆಯನ್ನು ವಿಭಾಗಿಸಿ ಆಯಾಯ ವಿಷಯಗಳಿಗೆ ಸಮಯ ಹೊಂದಿಸಿ. ಈ ರೀತಿ ಮಾಡುವುದರಿಂದ ಪರೀಕ್ಷೆಯ ಸಮಯ ನಿಮ್ಮ ಹೊರೆಯೂ ಕಡಿಮೆಯಾಗುತ್ತದೆ. ಎಲ್ಲಾ ವಿಷಯವನ್ನು ಓದಿ ಮುಗಿಸಿದಂತೆ ಆಗುತ್ತದೆ.
- ಹಳೆಯ ಪ್ರಶ್ನೆ ಪತ್ರಿಕೆಗಳನ್ನೊಮ್ಮೆ ಗಮನಿಸಿ : ನಾಲ್ಕೈದು ವರ್ಷಗಳ ಪ್ರಶ್ನೆ ಪತ್ರಿಕೆ ಯನ್ನು ಬಿಡಿಸುವುದು ಬಹಳ ಒಳ್ಳೆಯದು. ಈ ಪ್ರಶ್ನೆಗಳಿಗೆ ಉತ್ತರ ಬರೆದು, ಉತ್ತರ ಸರಿಯಾಗಿದೆಯೇ ಇಲ್ಲವೇ ಎಂದು ಮೌಲ್ಯ ಮಾಪನ ಮಾಡಿಕೊಳ್ಳಿ. ಈ ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳೇ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಅದಲ್ಲದೇ ಈ ಪ್ರಶ್ನೆ ಪತ್ರಿಕೆ ಬಿಡಿಸುವುದರಿಂದ ಆತ್ಮವಿಶ್ವಾಸ ಹೆಚ್ಚುವುದರೊಂದಿಗೆ ಯಾವ ರೀತಿ ಪ್ರಶ್ನೆಗಳು ಬರಬಹುದು ಎನ್ನುವ ಐಡಿಯಾ ಸಿಗುತ್ತದೆ. ಈ ಪತ್ರಿಕೆ ಬಿಡಿಸುವುದರಿಂದ ಅರ್ಧ ಓದಿ ಮುಗಿಸಿದ್ದಂತೆ ಆಗುತ್ತದೆ.
- ಗಮನವಿಟ್ಟು ಅರ್ಥ ಮಾಡಿಕೊಂಡು ಓದುವ ಅಭ್ಯಾಸವಿರಲಿ : ಪ್ರತಿಯೊಬ್ಬ ವಿದ್ಯಾರ್ಥಿಗಳು ಮಾಡಬೇಕಾದ ಕೆಲಸವೇನೆಂದರೆ ಅರ್ಥ ಮಾಡಿಕೊಂಡು ಗಮನವಿಟ್ಟು ಓದುವುದು. ಕೆಲವರಿಗೆ ಬಾಯಿ ಪಟ ಮಾಡುವ ಅಭ್ಯಾಸವಿರುತ್ತದೆ. ಇನ್ನು ಕೆಲವರಿಗೆ ಎಷ್ಟೇ ಓದಿದರೂ ಕೂಡ ತಲೆಗೆ ಹೋಗುವುದೇ ಇಲ್ಲ. ಹೀಗಾಗಿ ಗಮನವಿಟ್ಟು ವಿಷಯಗಳನ್ನು ಅರ್ಥೈಸಿಕೊಂಡು ಓದುವ ಅಭ್ಯಾಸ ಬೆಳೆಸಿಕೊಂಡರೆ ಓದಿದ ವಿಷಯಗಳು ನೆನಪಿನಲ್ಲಿ ಉಳಿಯಲು ಸಾಧ್ಯ.
- ರಾತ್ರಿ ಹಗಲು ನಿದ್ದೆ ಬಿಟ್ಟು ಓದಬೇಡಿ : ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡದಿಂದ ರಾತ್ರಿ ಹಗಲೇನ್ನದೇ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ವಿಶ್ರಾಂತಿಯಿಲ್ಲದ ನಿರಂತರ ಅಭ್ಯಾಸವು ಆರೋಗ್ಯ ಸಮಸ್ಯೆಯನ್ನು ತಂದೊಡ್ಡಬಹುದು. ಪರೀಕ್ಷೆಯ ಹಿಂದಿನ ದಿನ ರಾತ್ರಿ ಚೆನ್ನಾಗಿ ನಿದ್ದೆ ಮಾಡಿ, ಬೆಳಗ್ಗೆ ಬೇಗ ಎದ್ದು ಒಂದು ಸಲ ಓದಿದ ವಿಷಯಗಳತ್ತ ಕಣ್ಣಾಯಿಸಿ.
- ಸೂಕ್ತ ಉತ್ತರ ಬರೆಯಿರಿ : ಕೆಲವು ಮಕ್ಕಳು ಪುಟ ಭರ್ತಿ ಮಾಡುವ ಸಲುವಾಗಿ ಇಲ್ಲ ಸಲ್ಲದ ವಿಷಯಗಳನ್ನು ಉತ್ತರದಲ್ಲಿ ಸೇರಿಸುತ್ತಾರೆ. ಆದರೆ ಸರಿಯಾದ ಅಂಕ ಸಿಗಬೇಕೆಂದರೆ ಕೇಳಿದ ಪ್ರಶ್ನೆಗೆ ನೇರ ಉತ್ತರವಿರಲಿ ಹಾಗೂ ಅಗತ್ಯವಿದ್ದರೆ ವಿವರಣಾತ್ಮಕವಾಗಿ ಉತ್ತರಿಸಿ. ಇಲ್ಲದಿದ್ದರೆ ನೀವು ಬರೆದಿರುವ ಹೆಚ್ಚುವರಿ ಉತ್ತರವು ಮೌಲ್ಯ ಮಾಪಕರಿಗೆ ತೃಪ್ತಿಯಾಗದೇ ಕಡಿಮೆ ಅಂಕ ನೀಡುವ ಸಾಧ್ಯತೆಯೇ ಹೆಚ್ಚಿರುತ್ತದೆ.
- ಸ್ನೇಹಿತರೊಂದಿಗೆ ಚರ್ಚಿಸಬೇಡಿ : ಪರೀಕ್ಷೆ ದಿನ ಬೆಳಗ್ಗೆ ಅಥವಾ ಪರೀಕ್ಷೆ ಕೊಠಡಿಗೆ ಹೋಗುವ ಮೊದಲು ಸ್ನೇಹಿತರ ಜೊತೆಗೆ ಚರ್ಚಿಸಬೇಡಿ. ಗುಂಪು ಚರ್ಚೆಯಲ್ಲಿ ಭಾಗಿಯಾಗುವುದನ್ನು ತಪ್ಪಿಸಿ. ಈ ಚರ್ಚೆ ಗಳು ಗೊಂದಲವನ್ನು ಉಂಟು ಮಾಡಬಹುದು. ಆದರೆ ಗೊತ್ತಿಲ್ಲದ ವಿಷಯಗಳನ್ನು ಕೇಳಿ ತಿಳಿದುಕೊಳ್ಳಿ..ಆದರೆ ಗೊಂದಲ ಮಾಡಿಕೊಳ್ಳಬೇಡಿ. ಪರೀಕ್ಷೆ ಮುಗಿಸಿ ಬಂದ ನಂತರ ಬರೆದಿರುವ ಉತ್ತರದ ಬಗ್ಗೆ ಅಥವಾ ಪ್ರಶ್ನೆ ಪತ್ರಿಕೆಯ ಬಗ್ಗೆ ಚರ್ಚೆ ಬೇಡ. ಒಂದು ವೇಳೆ ನೀವು ಉತ್ತರ ಸರಿಯಾಗಿ ಬರೆದಿದ್ದಲ್ಲಿ ಆ ಆಲೋಚನೆಯೇ ನಿಮ್ಮ್ ನಾಳೆಯ ಪರೀಕ್ಷೆಗೆ ತೊಡಕು ಉಂಟು ಮಾಡುತ್ತದೆ.
- ವಿಶ್ರಾಂತಿ ತೆಗೆದುಕೊಳ್ಳಿ : ಪರೀಕ್ಷೆ ದಿನ ಹತ್ತಿರ ಬರುತ್ತಿದ್ದಂತೆ ಕೇವಲ ಓದಿನಲ್ಲೇ ಮುಳುಗಬೇಡಿ. ಸ್ವಲ್ಪ ವಿಶ್ರಾಂತಿ ಹಾಗೂ ನಿಮ್ಮ ಅಗತ್ಯ ಕೆಲಸ ಮಾಡಿಕೊಳ್ಳಿ. ವ್ಯಾಯಾಮ ಹಾಗೂ ವಾಕಿಂಗ್ ನಂತಹ ಚಟುವಟಿಕೆಯಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಊಟ, ತಿಂಡಿ ಹಾಗೂ ನಿದ್ರೆ ಸರಿಯಾಗಿ ಮಾಡಿ, ಹೆಚ್ಚು ಒತ್ತಡ ತೆಗೆದುಕೊಂಡು ಓದಬೇಡಿ. ಈ ಕೆಲವು ಸಲಹೆಗಳು ಪರೀಕ್ಷೆಗೆ ಉತ್ತಮ ತಯಾರಿ ನಡೆಸಲು ಒಳ್ಳೆಯ ಅಂಕ ಪಡೆಯಲು ನೆರವಾಗುತ್ತದೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ