AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ವಿವಿಗಳಲ್ಲಿ ಪ್ರವೇಶಾತಿ ಕುಸಿತ: ಆತಂಕ ಸೃಷ್ಟಿಸಿದ ಉನ್ನತ ಶಿಕ್ಷಣ ಇಲಾಖೆಯ ಅಂಕಿಅಂಶಗಳು

ಕರ್ನಾಟಕ ಸರ್ಕಾರ ಉನ್ನತ ಶಿಕ್ಷಣಕ್ಕೆ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿದ್ದರೂ, ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಇಂತಹದೊಂದು ಆಘಾತಕಾರಿ ಸಂಗತಿ ಅಂಕಿಅಂಶಗಳಿಂದ ಬಯಲಾಗಿದೆ. ಗುಣಮಟ್ಟದ ಕೊರತೆಯೇ ಇದಕ್ಕೆ ಕಾರಣ ಎಂದು ತಜ್ಞರು ಕೂಡ ಅಭಿಪ್ರಾಯ ಪಟ್ಟಿದ್ದಾರೆ.

ಸರ್ಕಾರಿ ವಿವಿಗಳಲ್ಲಿ ಪ್ರವೇಶಾತಿ ಕುಸಿತ: ಆತಂಕ ಸೃಷ್ಟಿಸಿದ ಉನ್ನತ ಶಿಕ್ಷಣ ಇಲಾಖೆಯ ಅಂಕಿಅಂಶಗಳು
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: Sep 17, 2025 | 8:20 AM

Share

ಬೆಂಗಳೂರು, ಸೆಪ್ಟೆಂಬರ್​ 17: ಸರ್ಕಾರ ಎಲ್ಲ ವಿದ್ಯಾರ್ಥಿಗಳಿಗೂ (Students) ಉನ್ನತ ಶಿಕ್ಷಣ ಸಿಗಬೇಕು ಎಂಬ ದೃಷ್ಟಿಯಿಂದ ಸಾವಿರಾರು ಕೋಟಿ ರೂ. ವೆಚ್ಚ ಮಾಡುತ್ತೆ. ಆದರೆ ವರ್ಷದಿಂದ ವರ್ಷಕ್ಕೆ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ (University) ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ಕ್ಷೀಣಿಸುತ್ತಿದೆ. ಸ್ವತಃ ಉನ್ನತ ಶಿಕ್ಷಣ ಇಲಾಖೆ ನೀಡಿರುವ ಮಾಹಿತಿ ಎಲ್ಲರನ್ನೂ ಅಚ್ಚರಿಗೆ ತಳ್ಳಿದ್ದು, ಸರ್ಕಾರಿ ವಿಶ್ವವಿದ್ಯಾಲಯಗಳ ಗುಣಮಟ್ಟದ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.

ರಾಜ್ಯದಲ್ಲಿ ಉನ್ನತ ಶಿಕ್ಷಣ ಮಾಡಬೇಕು ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಬಯಕೆ. ಹೀಗಾಗಿಯೇ ಖಾಸಗಿ ವಿವಿಗಳಲ್ಲಿ ದುಬಾರಿ ಹಣ ಕೊಟ್ಟು ಓದುವುದಕ್ಕೆ ಕಷ್ಟ ಆಗುತ್ತೆ ಎಂಬ ಕಾರಣಕ್ಕಾಗಿ ಸರ್ಕಾರ ಉನ್ನತ ಶಿಕ್ಷಣ ಇಲಾಖೆ ಅಡಿಯಲ್ಲಿ ಹಲವು ವಿಶ್ವವಿದ್ಯಾಲಯಗಳನ್ನು ಸ್ಥಾಪನೆ ಮಾಡಲಾಗಿದೆ.

ಇದನ್ನೂ ಓದಿ: Azim Premji Foundation Scholarship: ಉನ್ನತ ಶಿಕ್ಷಣಕ್ಕಾಗಿ ಬಾಲಕಿಯರಿಗೆ 30,000 ರೂ. ವಿದ್ಯಾರ್ಥಿವೇತನ, ಸೆ.30 ರೊಳಗೆ ಅರ್ಜಿ ಸಲ್ಲಿಸಿ

ಪ್ರತಿ ಜಿಲ್ಲೆಗೂ ಒಂದು ಎಂಬಂತೆ 30ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿವೆ. ಆದರೆ ಕಳೆದ ಮೂರು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದರೆ ಸಾವಿರಾರು ಕೋಟಿ ರೂ. ವೆಚ್ಚ ಮಾಡಿ ಸರ್ಕಾರದ ಮಾಡಿದ ವ್ಯವಸ್ಥೆಯ ಉದ್ದೇಶ ಈಡೇರುತ್ತಿಲ್ಲ. ಏಕೆಂದರೆ ವರ್ಷದಿಂದ ವರ್ಷಕ್ಕೆ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕುಸಿಯುತ್ತಿದೆ. ಈ ಮೂಲಕ ಖಾಸಗಿ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳತ್ತ ವಿದ್ಯಾರ್ಥಿಗಳು ಮುಖ ಮಾಡುತ್ತಿದ್ದಾರೆ. ಸ್ನಾತಕ, ಸ್ನಾತಕೋತ್ತರ, ಪಿಹೆಚ್​​ಡಿ ಸೇರಿ ಹಲವು ಕೋರ್ಸ್​​ಗಳಿಗೆ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ.

ಶೈಕ್ಷಣಿಕ ವರ್ಷ – ದಾಖಲಾತಿ ಪ್ರಮಾಣ (ಲಕ್ಷಗಳಲ್ಲಿ)

  • 2022- 23 –      4.50
  • 2023- 24 –      5.21
  • 2024- 25 –      4.85
  • 2025- 26 –      2.47

ಮೂಲಭೂತ ಸೌಕರ್ಯ ಒದಗಿಸುವಂತೆ ಸಲಹೆ

ಇನ್ನು ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಶಿಕ್ಷಣ ತಜ್ಞರು, ಸರ್ಕಾರಿ ವಿವಿಗಳಲ್ಲಿ ಮೂಲಭೂತ ಸೌಕರ್ಯಗಳು ಹಾಗೂ ಬೋಧನಾ ಗುಣಮಟ್ಟ ಸೇರಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ವೇಣುಗೋಪಾಲ್ ಮಾತನಾಡಿ, ಸರ್ಕಾರಿ ಕಾಲೇಜುಗಳು ಪೈಪೋಟಿ ಕೊಡದ ರೀತಿ ಖಾಸಗಿ ಕಾಲೇಜುಗಳು ಬೆಳೆದು ನಿಂತಿವೆ ಎಂದರು.

ಪೋಷಕರು ಕೂಡ ದುಬಾರಿ ವೆಚ್ಚ ಆದರೂ ಖಾಸಗಿ ಶೈಕ್ಷಣಿಕ ಸಂಸ್ಥೆಗಳ ಮೊರೆ ಹೋಗುತ್ತಿದ್ದಾರೆ. ಸರ್ಕಾರಿ ಕಾಲೇಜು ಅಂದರೆ ಕೀಳರಿಮೆ ಎಂಬ ಮನೋಭಾವ ಇದೆ. ಇದನ್ನು ಹೋಗಲಾಡಿರುವ ನಿಟ್ಟಿನಲ್ಲಿ ಸರ್ಕಾರ ಬೋಧನಾ ಗುಣಮಟ್ಟ ಕೊರತೆ, ಉಪನ್ಯಾಸಕರ ಕೊರತೆ, ಮೌಲ್ಯಮಾಪನ ವಿಳಂಬ, ಮೂಲಭೂತ ಸೌಕರ್ಯ ಸೇರಿ ಇನ್ನಿತರ ಕೊರತೆಗಳನ್ನು ನಿವಾಸಿರುವಂತೆ ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: CBSE Board Exam 2026: CBSE ವಿದ್ಯಾರ್ಥಿಗಳಿಗೆ ಗುಡ್​​ನ್ಯೂಸ್​​, ಐಡಿ ಇಲ್ಲದೆಯೂ ಪರೀಕ್ಷೆಗೆ ಹಾಜರಾಗಲು ಅವಕಾಶ!

ಒಟ್ಟಾರೆ ರಾಜ್ಯದಲ್ಲಿ ಉನ್ನತ ಶಿಕ್ಷಣ ಎಲ್ಲರ ಕೈಗೆಟಕುವಂತ್ತಿಲ್ಲ. ಹೀಗಾಗಿಯೇ ಬಡ, ಮಧ್ಯಮ ವರ್ಗ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಹಕಾರಿ ಆಗಲು ಸರ್ಕಾರಿ ವಿವಿಗಳು ಇವೆ. ಆದರೆ ಖಾಸಗಿ ವಿವಿಗಳ ರೀತಿಯಲ್ಲಿ ಇನ್ನೂ ಅಭಿವೃದ್ಧಿ ಆಗಿಲ್ಲ. ಹೀಗಾಗಿ ವರ್ಷದಿಂದ ವರ್ಷಕ್ಕೆ ದಾಖಲಾತಿ ಪ್ರಮಾಣ ಕುಸಿಯುತ್ತಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಮತ್ತಷ್ಟು ಶಿಕ್ಷಣದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.