ಶಿಕ್ಷಣ ಇಲಾಖೆಯಿಂದ 2025-26ರ ಸಾಲಿನ ಶೈಕ್ಷಣಿಕ ವೇಳಾ ಪಟ್ಟಿ ಪ್ರಕಟ: ಒಟ್ಟು 123 ರಜೆ, ಇಲ್ಲಿದೆ ಮಾಹಿತಿ
ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯು 2025-26ನೇ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೇ 29, 2025 ರಿಂದ ಶಾಲೆಗಳು ಆರಂಭವಾಗಲಿದ್ದು, ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 7 ರವರೆಗೆ ದಸರಾ ರಜೆ ಮತ್ತು ಏಪ್ರಿಲ್ 11 ರಿಂದ ಮೇ 5 ರವರೆಗೆ ಬೇಸಿಗೆ ರಜೆ ಇರುತ್ತದೆ. ಒಟ್ಟು 242 ಶಾಲಾ ಕೆಲಸದ ದಿನಗಳು ಮತ್ತು 123 ರಜಾ ದಿನಗಳಿವೆ.

ಬೆಂಗಳೂರು, ಏಪ್ರಿಲ್ 04: ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯು (karnataka education department) 2025-26ರ ಸಾಲಿನ ಶೈಕ್ಷಣಿಕ ವೇಳಾ ಪಟ್ಟಿಯನ್ನು (2025-26 Academic Calendar) ಬಿಡುಗಡೆ ಮಾಡಿದೆ. ಆ ಮೂಲಕ ಶಾಲಾ ಕರ್ತವ್ಯದ ದಿನಗಳು ಮತ್ತು ರಜಾ ಅವಧಿ ಬಗ್ಗೆ ಮಾಹಿತಿ ನೀಡಲಾಗಿದೆ. ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಅವಧಿಗಳು ಮತ್ತು ರಜಾ ಅವಧಿಗಳು ಅನ್ವಯವಾಗಲಿದೆ ಎಂದು ಶಿಕ್ಷಣ ಇಲಾಖೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
2024-25ನೇ ಸಾಲಿನ ಚಟುವಟಿಕೆಗಳು ಮುಕ್ತಾಯವಾಗುತ್ತಲ್ಲಿದ್ದು, ಮುಂದಿನ 2025-26ನೇ ಸಾಲಿನ ಶೈಕ್ಷಣಿಕ ಸಾಲಿನ ಚಟುವಟಿಕೆಗಳನ್ನು ಪ್ರಾರಂಭಿಸಲು ಸದರಿ ಸಾಲಿನಲ್ಲಿ ಎಂದಿನಂತೆ ಅಗತ್ಯ ಪೂರ್ವಸಿದ್ಧತೆಗಾಗಿ 2025 ಮೇ 29ರಿಂದ ಶಾಲೆ ಪ್ರಾರಂಭಿಸಲು ಸೂಚಿಸಲಾಗಿದೆ. ಅದರಂತೆ ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.
ಪ್ರಯುಕ್ತ ರಾಜ್ಯದ ಎಲ್ಲಾ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸಹಾಯವಾಗುವಂತೆ ಒಟ್ಟು ವಾರ್ಷಿಕ ದಿನಗಳಲ್ಲಿ ಲಭ್ಯವಾಗುವ ಶೈಕ್ಷಣಿಕ ಚಟುವಟಿಕೆ ಅವಧಿಗಳು, ಕರ್ತವ್ಯದ ದಿನಗಳು ಮತ್ತು ರಜಾ ದಿನಗಳನ್ನಾಧರಿಸಿ ಅದಕ್ಕನುಗುಣವಾಗಿ ವಾರ್ಷಿಕ ಕಾರ್ಯಸೂಚಿಯನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದ್ದು, ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಮತ್ತು ಅನುಪಾಲನೆ ಮಾಡಲು ಸೂಚಿಸಲಾಗಿದೆ.
2025-26 ನೇ ಸಾಲಿನ ಶಾಲಾ ಕರ್ತವ್ಯದ ದಿನಗಳು
- ಮೊದಲನೇ ಅವಧಿ: 2025 ಮೇ 29 ರಿಂದ ಸೆಪ್ಟೆಂಬರ್ 19 ರವರೆಗೆ
- ಎರಡನೇ ಅವಧಿ: 2025 ಅಕ್ಟೋಬರ್ 08 ರಿಂದ 2026 ಏಪ್ರಿಲ್ 10 ರವರೆಗೆ
ರಜಾ ದಿನಗಳು
- ದಸರಾ ರಜೆ: 2025 ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 07 ರವರೆಗೆ
- ಬೇಸಿಗೆ ರಜೆ: 2026 ಏಪ್ರಿಲ್ 11 ರಿಂದ 2026 ಮೇ 05 ರವರೆಗೆ
ಇದನ್ನೂ ಓದಿ: Karnataka 2nd PUC Result: ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕ ಫಿಕ್ಸ್? ರಿಸಲ್ಟ್ ನೋಡೋದು ಹೇಗೆಂದು ಇಲ್ಲಿ ನೋಡಿ
2025-26ರ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಟ್ಟು 123 ರಜಾ ದಿನಗಳಿದ್ದು, ಉಳಿದ 242 ದಿನ ಶಾಲೆಗಳು ನಡೆಯಲಿವೆ. ಪರೀಕ್ಷೆ ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ 26 ದಿನಗಳು, ಪಠ್ಯೇತರ ಚಟುವಟಿಕೆ, ಪಠ್ಯ ಚಟುವಟಿಕೆ, ಸ್ಪರ್ಧೆಗಳ ನಿರ್ವಹಣಾ ಕಾರ್ಯಕ್ಕಾಗಿ 22 ದಿನ, ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನ, ಶಾಲಾ ಸ್ಥಳೀಯ ರಜೆಗಳಿಗೆ 04 ದಿನ ಮತ್ತು ಬೋಧನಾ ಕಲಿಕಾ ಪ್ರಕ್ರಿಯೆಗೆ ಉಳಿಯುವ ಕರ್ತವ್ಯಕ್ಕೆ 178 ದಿನಗಳನ್ನು ಮೀಸಲಿಡಲಾಗಿದೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.