
ಬೆಂಗಳೂರು, (ಏಪ್ರಿಲ್ 08): ದ್ವಿತೀಯ ಪಿಯುಸಿ ಫಲಿತಾಂಶದ (2nd PUC Results) ದಿನಾಂಕದ ಗೊಂದಲಕ್ಕೆ ತೆರೆ ಬಿದ್ದಿದ್ದು, ನಾಳೆ ಅಂದರೆ ಏಪ್ರಿಲ್ 9 ರಂದು ಫಲಿತಾಂಶ ಪ್ರಕಟಣೆಯಾಗಲಿದೆ ಎಂದು ಪರೀಕ್ಷಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ನಂತರ ಮಧ್ಯಾಹ್ನ 3ಗಂಟೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ರಿಸಲ್ಟ್ ನೋಡಬಹುದಾಗಿದೆ. ಇನ್ನು ವಿಶೇಷ ಅಂದ್ರೆ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು (Marks Card) ಡಿಜಿಲಾಕರ್ ಮೂಲಕ ಲಭ್ಯವಾಗಲಿದೆ. ಒಂದು ವೇಳೆ ವೆಬ್‌ಸೈಟ್‌ನಲ್ಲಿ ರಿಸಲ್ಟ್ ನೋಡುವಾಗ ಸರ್ವರ್ ಸಮಸ್ಯೆ ಎದುರಾದರೆ ಡಿಜಿಲಾಕರ್ (DigiLocker) ಮೂಲಕವೇ ಮಾರ್ಕ್ಸ್ ಕಾರ್ಡ್ ಪಡೆದುಕೊಳ್ಳಬಹುದು. ಹಾಗಾದ್ರೆ, ಡಿಜಿಲಾಕರ್ನಿಂದ ಅಂಕಪಟ್ಟಿಯನ್ನು ಹೇಗೆ ಡೌನ್ ಲೋಡ್ ಮಾಡಿಕೊಳ್ಳಬೇಕು ಎನ್ನುವುದು ಈ ಕೆಳಗಿನಂತಿರುವ ಪ್ರಕ್ರಿಯೆಯನ್ನು ಅನುಸರಿಸಬೇಕು.
ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು https://karresults.nic.in ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ. ಹಾಗೇ ಕೇಂದ್ರ ಸರ್ಕಾರದ ಅಧಿಕೃತ ಅಪ್ಲಿಕೇಶನ್ ಆದ ಡಿಜಿಲಾಕರ್‌ನಲ್ಲಿ ಲಭ್ಯವಾಗಲಿದೆ. ಫಲಿತಾಂಶ ಚೆಕ್ ಮಾಡಿಕೊಳ್ಳಲು ಸೈಬರ್ ಸೆಂಟರ್ನಲ್ಲಿ ಸಾಲುಗಟ್ಟಿ ನಿಲ್ಲುವ ಅಗತ್ಯವಿಲ್ಲ, ಯಾವುದೇ ಕಾಗದಪತ್ರಗಳ ಜಂಜಾಟವಿಲ್ಲ. ಸರ್ವರ್ ಸಮಸ್ಯೆ ಇಲ್ಲದೇ ನಿಮ್ಮ ಫಲಿತಾಂಶ ಅತ್ಯಂತ ಸುರಕ್ಷಿತವಾಗಿ ಪಡೆದುಕೊಳ್ಳಬಹುದು.
ಸಾಮಾನ್ಯವಾಗಿ ಫಲಿತಾಂಶ ಪ್ರಕಟವಾದ ತಕ್ಷಣ ಲಕ್ಷಾಂತರ ಮಂದಿ ಒಮ್ಮೆಗೆ ಅಧಿಕೃತ ವೆಬ್‌ಸೈಟ್‌ಗಳ ಮೇಲೆ ಮುಗಿಬೀಳುತ್ತಾರೆ. ಇದರಿಂದ ಸರ್ವರ್ ಕ್ರ್ಯಾಶ್ ಆಗುವುದು ಅಥವಾ ಪೇಜ್ ಲೋಡ್ ಆಗಲು ಬಹಳ ಸಮಯ ತೆಗೆದುಕೊಳ್ಳುವುದು ಮಾಮೂಲಿ. ಆದರೆ ಈ ಬಾರಿ ನೀವು ವೆಬ್‌ಸೈಟ್ ಓಪನ್ ಆಗುವವರೆಗೆ ಕಾಯಬೇಕಾದ ಅಗತ್ಯವಿಲ್ಲ. ಡಿಜಿಲಾಕರ್ ಮೂಲಕವೇ ನೇರವಾಗಿ ಅಂಕಪಟ್ಟಿ ಡೌನ್ ಲೋಡ್ ಮಾಡಿಕೊಂಡು ನಿಮ್ಮ ಫಲಿತಾಂಶ ನೋಡಿಕೊಳ್ಳಬಹುದು.
ಹಂತ 1: ವೆಬ್‌ಸೈಟ್‌ಗಿಂತಲೂ ವೇಗವಾಗಿ ಮತ್ತು ಸುಲಭವಾಗಿ ನಿಮ್ಮ ಅಂಕಪಟ್ಟಿ ಪಡೆಯಲು ನೀವು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಬೇಕು ಅಷ್ಟೇ. ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ‘DigiLocker’ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ಅಪ್ಲಿಕೇಶನ್ ಇಲ್ಲದಿದ್ದರೆ ನೇರವಾಗಿ digilocker.gov.in ವೆಬ್‌ಸೈಟ್‌ಗೂ ಭೇಟಿ ನೀಡಬಹುದು.
ಹಂತ 2: ಅಪ್ಲಿಕೇಶನ್ ತೆರೆದ ನಂತರ ಮುಖಪುಟದಲ್ಲಿ ಕಾಣುವ ‘ಡಾಕ್ಯುಮೆಂಟ್ ವರ್ಗಗಳ’ (Document Categories) ಅಡಿಯಲ್ಲಿ ‘ಶಿಕ್ಷಣ ಮತ್ತು ಕಲಿಕೆ’ (Education and Learning) ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಹಲವಾರು ಶಿಕ್ಷಣ ಮಂಡಳಿಗಳ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ನಮ್ಮ ರಾಜ್ಯದ ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ’ (KSEAB) ಅನ್ನು ಹುಡುಕಿ ಆಯ್ಕೆ ಮಾಡಿ.
ಹಂತ 3: ನಂತರದ ಸ್ಕ್ರೀನ್‌ನಲ್ಲಿ ನಿಮಗೆ ‘Class XII Marksheet’ ಅಥವಾ ‘2nd PUC Marksheet’ ಎಂಬ ಆಯ್ಕೆ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಪಿಯುಸಿ ನೋಂದಣಿ ಸಂಖ್ಯೆ (Roll Number/Registration Number) ಮತ್ತು ಪರೀಕ್ಷೆ ಬರೆದ ವರ್ಷವನ್ನು (2026) ನಮೂದಿಸಿ. ಆಧಾರ್ ಕಾರ್ಡ್‌ನಲ್ಲಿರುವಂತೆ ನಿಮ್ಮ ವಿವರಗಳನ್ನು ಗಮನಿಸಿ ನೋಡಿ ಸಬ್‌ಮಿಟ್ ಮಾಡಿ.
ಹಂತ 4: ಬಳಿಕ ಕರ್ನಾಟಕ ಪಿಯುಸಿ 2 ಫಲಿತಾಂಶ ಪರದೆಯ ಮೇಲೆ ಮೂಡುತ್ತದೆ. ಇದರಲ್ಲಿ ನಿಮ್ಮ ವಿಷಯವಾರು ಅಂಕಗಳು ಲಭ್ಯವಿರುತ್ತವೆ. ಅಲ್ಲಿರುವ ಡೌನ್‌ಲೋಡ್ ಬಟನ್ ಕ್ಲಿಕ್ ಮಾಡುವ ಮೂಲಕ ಪಿಡಿಎಫ್ (PDF) ರೂಪದಲ್ಲಿ ನಿಮ್ಮ ಅಂಕಪಟ್ಟಿಯನ್ನು ಪಡೆದುಕೊಳ್ಳಬಹುದಾಗಿದೆ.
ಇಂಟರ್ನೆಟ್ ಕೆಫೆಗಳಿಗೆ ಅಲೆಯುವ ಅಥವಾ ಸ್ಲೋ ಇರುವ ವೆಬ್‌ಸೈಟ್‌ಗಳನ್ನು ಪದೇ ಪದೇ ರಿಫ್ರೆಶ್ ಮಾಡುವ ಕಿರಿಕಿರಿ ಇಲ್ಲದೆಯೇ ನಿಮ್ಮ ಅಂಕಪಟ್ಟಿಯನ್ನು ನೇರವಾಗಿ ನಿಮ್ಮ ಮೊಬೈಲ್‌ನಲ್ಲೇ ಪಡೆಯಬಹುದು. ಕೇಂದ್ರ ಸರ್ಕಾರದ ‘ಡಿಜಿಲಾಕರ್’ ಸೌಲಭ್ಯದ ಮೂಲಕ ಫಲಿತಾಂಶ ಘೋಷಣೆಯಾದ ಕೆಲವೇ ಕ್ಷಣಗಳಲ್ಲಿ ನಿಮ್ಮ ಅಂಕಪಟ್ಟಿ ಡಿಜಿಟಲ್ ರೂಪದಲ್ಲಿ ನಿಮ್ಮ ಕೈ ಸೇರಲಿದೆ. ಇದು ಕೇವಲ ಫಲಿತಾಂಶ ನೋಡುವುದಕ್ಕೆ ಮಾತ್ರವಲ್ಲದೆ, ಅಧಿಕೃತ ಅಂಕಪಟ್ಟಿಯಾಗಿ ಕೂಡ ಎಲ್ಲೆಡೆ ಮಾನ್ಯತೆ ಪಡೆಯುತ್ತದೆ ಎಂಬುದು ವಿಶೇಷ.
ಸಾಮಾನ್ಯವಾಗಿ ಫಲಿತಾಂಶ ಪ್ರಕಟವಾದ ತಕ್ಷಣ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಸರ್ವರ್ ಸಮಸ್ಯೆ ಉಂಟಾಗಿ ವಿದ್ಯಾರ್ಥಿಗಳು ಪರದಾಡುವುದು ಸಾಮಾನ್ಯ. ಆದರೆ ಡಿಜಿಲಾಕರ್ ಮೂಲಕ ವಿದ್ಯಾರ್ಥಿಗಳು ಯಾವುದೇ ಅಡೆತಡೆಯಿಲ್ಲದೆ, ಸುಲಭವಾಗಿ ತಮ ಅಂಕಪಟ್ಟಿಯನ್ನು ವೀಕ್ಷಿಸಬಹುದು ಮತ್ತು ಅದರ ಡಿಜಿಟಲ್ ಪ್ರತಿಯನ್ನು ತಕ್ಷಣವೇ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇನ್ನು ಮುಂದಿನ ವ್ಯಾಸಂಗಕ್ಕೆ ಪ್ರವೇಶಾತಿ ಪಡೆಯಲು ಅಥವಾ ಇತರ ಯಾವುದೇ ಅಧಿಕೃತ ಕೆಲಸಗಳಿಗೆ ಈ ಡಿಜಿಟಲ್ ಅಂಕಪಟ್ಟಿಯನ್ನು ನೇರವಾಗಿ ಬಳಸಿಕೊಳ್ಳಬಹುದು. ಶಾಲೆಯಿಂದ ಅಥವಾ ಕಾಲೇಜಿನಿಂದ ಮೂಲ ಅಂಕಪಟ್ಟಿ ಕೈಸೇರುವವರೆಗೂ ಕಾಯುವ ಅಗತ್ಯ ಇರುವುದಿಲ್ಲ. ತಂತ್ರಜ್ಞಾನದ ಬಳಕೆಯೊಂದಿಗೆ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ಫಲಿತಾಂಶದ ಲಭ್ಯತೆಯನ್ನು ಮತ್ತಷ್ಟು ಸುಗಮ ಹಾಗೂ ಪಾರದರ್ಶಕಗೊಳಿಸಿದೆ. ವಿದ್ಯಾರ್ಥಿಗಳು ಈಗಲೇ ತಮ್ಮ ಡಿಜಿಲಾಕರ್ ಖಾತೆಯನ್ನು ಸಕ್ರಿಯಗೊಳಿಸಿಕೊಂಡು, ಫಲಿತಾಂಶ ಪ್ರಕಟವಾದ ತಕ್ಷಣ ಸುಲಭವಾಗಿ ಅಂಕಪಟ್ಟಿ ಪಡೆಯಬಹುದು.
ಮತ್ತಷ್ಟು ಶಿಕ್ಷಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:10 pm, Wed, 8 April 26