ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕರ್ತವ್ಯಕ್ಕೆ ಪ್ರಾಥಮಿಕ ಶಿಕ್ಷಕರು: ಆದೇಶ ಹಿಂಪಡೆದ ಕೆಎಸ್‌ಇಎಬಿ
ಕಳೆದ ವರ್ಷ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಕಲು ಮಾಡಲು ಶಿಕ್ಷಕರೇ ಸಹಾಕ ಮಾಡಿದ್ದರು. ಈ ಆರೋಪದ ಮೇಲೆ 38 ಶಿಕ್ಷಕರನ್ನು ಅಮಾನತು ಮಾಡಲಾಗಿತ್ತು. ಹಾಗಾಗಿ, ಈ ಬಾರಿಯ ಪರೀಕ್ಷೆಗೆ ನಕಲು ಪ್ರೌಢಶಾಲಾ ಸಹ ಶಿಕ್ಷಕರ ಬದಲು ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಲು ಸುತ್ತೋಲೆ ಹೊರಡಿಸಲಾಗಿತ್ತು. ಆದರೆ ಈಗ ಆ ಆದೇಶವನ್ನು ಹಿಂಪಡೆಯಲಾಗಿದೆ.
ಬೆಂಗಳೂರು, ಮಾರ್ಚ್.14: ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿ (KSEAB) ಪ್ರಾಥಮಿಕ ಶಾಲಾ ಶಿಕ್ಷಕರನ್ನು ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸುವ ಆದೇಶವನ್ನು ಹಿಂಪಡೆದಿದೆ. ಬುಧವಾರ ಹೊರಡಿಸಿರುವ ಪರಿಷ್ಕೃತ ಆದೇಶದಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ನೀಡಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸುವಂತೆ ಎಲ್ಲ ಜಿಲ್ಲೆಗಳ ಉಪನಿರ್ದೇಶಕರಿಗೆ ಮಂಡಳಿ ತಿಳಿಸಿತ್ತು. ಪುಟ್ಟಣ್ಣ, ಮರಿತಿಬ್ಬೇಗೌಡ ಸೇರಿದಂತೆ ವಿವಿಧ ಶಾಸಕರು ಹಾಗೂ ಶಿಕ್ಷಕ ಸಮುದಾಯ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ಕೆಎಸ್‌ಇಎಬಿ (Karnataka School Education and Assessment Board) ಪರಿಷ್ಕೃತ ಆದೇಶ ಹೊರಡಿಸಿದೆ.
ಅವ್ಯವಹಾರ ತಪ್ಪಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಈ ಬಾರಿ ಪ್ರೌಢಶಾಲಾ ಶಿಕ್ಷಕರನ್ನು ಕೊಠಡಿ ಪರಿವೀಕ್ಷಕರನ್ನಾಗಿ ಮಾಡದಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಿತ್ತು. ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿರುವ ಕ್ಲಸ್ಟರ್ ಹೊರತಾದ ಕೇಂದ್ರಗಳಿಗೆ ಕೊಠಡಿ ಮೇಲ್ವಿಚಾರಕರಾಗಿ ಹಾಗೂ ಪರೀಕ್ಷೆಯ ಇತರೆ ಕಾರ್ಯಗಳಿಗೆ ನಿಯೋಜಿಸಬೇಕು. ಆಯಾ ವಿಷಯಗಳ ಶಿಕ್ಷಕರನ್ನು ಅದೇ ವಿಷಯದ ದಿನ ಪರೀಕ್ಷಾ ಕಾರ್ಯಕ್ಕೆ ಬಳಸಿಕೊಳ್ಳಬಾರದು ಎಂದು ಸೂಚಿಸಿತ್ತು.
ಇದನ್ನೂ ಓದಿ: SSLC Exam: ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಆಹಾರ ಕ್ರಮ ಹೀಗಿರಲಿ: ಡಾ ರವಿಕಿರಣ ಪಟವರ್ಧನ ಶಿರಸಿ
ಆದರೆ ಈಗ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸುವ ಆದೇಶವನ್ನು ಹಿಂಪಡೆದಿದೆ.
ಈ ಹಿಂದೆ 2023ರ ಮಾರ್ಚ್–ಏಪ್ರಿಲ್‌ನಲ್ಲಿ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿಗಳಿಗೆ ಸಹಕರಿಸಿದ ಆರೋಪದ ಮೇಲೆ 38 ಶಿಕ್ಷಕರನ್ನು ಅಮಾನತು ಮಾಡಲಾಗಿತ್ತು. ಹಾಗಾಗಿ, 2024ರ ಪರೀಕ್ಷೆಯಲ್ಲಿ ನಕಲು, ವ್ಯವಹಾರಕ್ಕೆ ಸಂಪೂರ್ಣ ಕಡಿವಾಣ ಹಾಕಲು ಪರೀಕ್ಷಾ ಕಾರ್ಯಕ್ಕೆ ಪ್ರೌಢಶಾಲಾ ಸಹ ಶಿಕ್ಷಕರ ಬದಲು ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಲು ಸುತ್ತೋಲೆ ಹೊರಡಿಸಲಾಗಿತ್ತು. ಈ ಕ್ರಮಕ್ಕೆ ಶಿಕ್ಷಕರು ವಿರೋಧ ವ್ಯಕ್ತಪಡಿಸಿದ್ದರು. ಸರ್ಕಾರದ ಕ್ರಮ ಸರಿ ಇಲ್ಲ. ಮರುಪರಿಶೀಲಿಸಬೇಕು ಎಂದು ವಿಧಾನಪರಿಷತ್ತಿನ ಸದಸ್ಯರಾದ ಪುಟ್ಟಣ್ಣ ಹಾಗೂ ಮರಿತಿಬ್ಬೇಗೌಡ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ