ನವದೆಹಲಿ, ಜುಲೈ 21: ವಿವಾದಕ್ಕೆ ಸಿಲುಕಿರುವ ನೀಟ್ ಪರೀಕ್ಷೆಯ ಫಲಿತಾಂಶ ನಿನ್ನೆ ಶನಿವಾರ ಪ್ರಕಟಿಸಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಎನ್ಟಿಎ ನಗರವಾರು ಮತ್ತು ಪರೀಕ್ಷಾ ಕೇಂದ್ರವಾರು ಫಲಿತಾಂಶಗಳನ್ನು ಪ್ರಕಟಿಸಿದೆ. ದೇಶಾದ್ಯಂತ ವಿವಿಧ ನಗರಗಳಲ್ಲಿನ 4,750 ಸೆಂಟರ್ಗಳಲ್ಲಿ 32 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕುತೂಹಲ ಎಂದರೆ ಪೇಪರ್ ಲೀಕ್ ಸೇರಿದಂತೆ ಅಕ್ರಮ ನಡೆಸಲಾಗಿತ್ತು ಎಂದು ಆರೋಪಿಸಲಾದ ಪರೀಕ್ಷಾ ಕೇಂದ್ರಗಳಲ್ಲಿ ರಿಸಲ್ಟ್ ಕಳಪೆಯಾಗಿ ಬಂದಿದೆ. ಕೆಲ ಸೆಂಟರ್ಗಳಲ್ಲಿ ಬಹಳ ಉತ್ತಮ ಎನಿಸುವ ರಿಸಲ್ಟ್ ಬಂದಿದೆ.
ಗುಜರಾತ್ನ ರಾಜ್ಕೋಟ್ನಲ್ಲಿರುವ ಅರ್ಕೆ ಯೂನಿವರ್ಸಿಟಿಯ ಎಂಜಿನಿಯರಿಂಗ್ ಸ್ಕೂಲ್, ರಾಜಸ್ಥಾನದ ಸಿಕರ್ ನಗರದ ಟಾಗೂರ್ ಪಿಜಿ ಕಾಲೇಜು, ಮಂಗಲ್ ಚಂದ್ ದಿದ್ವಾನಿಯಾ ವಿದ್ಯಾಮಂದಿರ, ಅರಾವಳಿ ಪಬ್ಲಿಕ್ ಸ್ಕೂಲ್, ಕೇರಳದ ಕೊಟ್ಟಾಯಾಂನ ಚಿನ್ಮಯ ವಿದ್ಯಾಲಯ, ರೋಹ್ಟಕ್ನ ಮಾಡಲ್ ಸ್ಕೂಲ್ ಮೊದಲಾದ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಬಹಳ ಉತ್ತಮ ಅಂಕ ಗಳಿಸಿದ್ದಾರೆ.
ಇದನ್ನೂ ಓದಿ: NEET-UG case: ‘ಮಾಸ್ಟರ್‌ಮೈಂಡ್’, ‘ಸಾಲ್ವರ್’ ಆಗಿ ಕೆಲಸ ಮಾಡಿದ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳ ಬಂಧನ
ನೀಟ್ ಯುಜಿ ಪರೀಕ್ಷೆಯಲ್ಲಿನ ಒಟ್ಟಾರೆ 720 ಅಂಕಗಳಲ್ಲಿ 600ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ ಕೆಲ ನಗರಗಳಲ್ಲಿ ಹೆಚ್ಚಿದೆ. ರಾಜಸ್ಥಾನದ ಸಿಕರ್ನಲ್ಲಿ ಒಟ್ಟು 27,000 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 4,200 ಮಂದಿ 600ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. 2,000ಕ್ಕೂ ಹೆಚ್ಚು ಮಂದಿ 450 ಅಂಕಗಳಿಗಿಂತ ಹೆಚ್ಚು ಪಡೆದಿದ್ದಾರೆ. ಕುತೂಹಲ ಎಂದರೆ ಸಿಕರ್ ನಗರವು ನೀಟ್ ಯುಜಿ ಕೋಚಿಂಗ್ ಸೆಂಟರ್ಗಳಿಗೆ ಹೆಸರುವಾಸಿಯಾಗಿದೆ. ಅಧಿಕ ಸಂಖ್ಯೆಯಲ್ಲಿ ಕೋಚಿಂಗ್ ಸೆಂಟರ್ಗಳು ಇಲ್ಲಿವೆ. ಇದೇ ಸಿಕರ್ನ ಮಂಗಲ್ ಚಂದ್ ದಿದ್ವಾನಿಯಾ ವಿದ್ಯಾಮಂದಿರ ಪರೀಕ್ಷಾ ಕೇಂದ್ರದಲ್ಲಿ 114 ಮಕ್ಕಳು 600ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. 45 ಮಕ್ಕಳು 650 ಅಂಕಗಳನ್ನು, ನಾಲ್ವರು ಮಕ್ಕಳು 700 ಅಂಕಗಳ ಗಡಿಯನ್ನು ದಾಟಿದ್ದಾರೆ.
ಕುತೂಹಲ ಎಂದರೆ, ಸಿಕರ್ ರೀತಿ ಕೋಚಿಂಗ್ ಸೆಂಟರ್ಸ್ ಹೆಚ್ಚಿರುವ ಕಡೆ ಉತ್ತಮ ಫಲಿತಾಂಶ ಬಂದಿದೆ. ಗುಜರಾತ್ನ ರಾಜಕೋಟ್ನ ಆರ್ಕೆ ಯೂನಿವರ್ಸಿಟಿ ಎಂಜಿನಿಯರಿಂಗ್ ಸ್ಕೂಲ್ ಕೇಂದ್ರದಲ್ಲಿ 12 ವಿದ್ಯಾರ್ಥಿಗಳು 700ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. 240ಕ್ಕೂ ಹೆಚ್ಚು ಮಕ್ಕಳು 600 ಅಂಕಗಳ ಗಡಿ ದಾಟುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Second PUC Exam 3 Result :ದ್ವಿತೀಯ ಪಿಯುಸಿ ಪರೀಕ್ಷೆ-3 ಫಲಿತಾಂಶ ಪ್ರಕಟ
ದೇಶಾದ್ಯಂತ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ ಶೇ. 1.3ರಷ್ಟು ಮಕ್ಕಳು, ಅಂದರೆ 30,204 ಮಕ್ಕಳು 650 ಅಂಕಗಳ ಗಡಿ ದಾಟಿದ್ದಾರೆ. 79,500 ಅಭ್ಯರ್ಥಿಗಳು 600ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.
ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ನಡೆಸಲಾಗುವ ಈ ನೀಟ್ ಯುಜಿ ಪರೀಕ್ಷೆಯಲ್ಲಿ 30,000 ದೊಳಗೆ ರ‍್ಯಾಂಕಿಂಗ್ ಪಡೆದವರಿಗೆ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಸಿಗುತ್ತದೆ. 600ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ ಮಕ್ಕಳು ಈ ರ‍್ಯಾಂಕಿಂಗ್ ಮಿತಿಯಲ್ಲಿ ಬರುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ಸಿಕರ್, ಕೋಟಾ ಮೊದಲಾದ ನಗರಗಳಲ್ಲಿನ ಮಕ್ಕಳು ಅಧಿಕ ಸಂಖ್ಯೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಪ್ರವೇಶಿಸುವ ಅವಕಾಶ ಇದೆ.
ನೀಟ್ ಪರೀಕ್ಷೆ ಫಲಿತಾಂಶ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: exams.nta.ac.in/NEET/
ಇನ್ನಷ್ಟು ಶಿಕ್ಷಣ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ