ಅಂತಾರಾಷ್ಟ್ರೀಯ ಶಿಕ್ಷಣ ಸಮೀಕ್ಷೆ ವರದಿ ಬಹಿರಂಗ: AI ಬಳಸುವ ವಿದ್ಯಾರ್ಥಿಗಳ ಅಂಕಗಳಲ್ಲಿ ಕುಸಿತ!

PISA ವರದಿಯು ಜಾಗತಿಕ ಶಿಕ್ಷಣದ ಪ್ರಮುಖ ಅಂಶಗಳನ್ನು ಬಹಿರಂಗಪಡಿಸಿದೆ. ಪೋಷಕರ ಆಸಕ್ತಿಯ ಕೊರತೆ, ಹೆಚ್ಚುತ್ತಿರುವ ಡಿಜಿಟಲ್ ಗೊಂದಲಗಳು ಮತ್ತು AI ಬಳಕೆಯು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ. ಆದರೆ, ಏಷ್ಯಾದ ದೇಶಗಳ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಮುನ್ನಡೆಯಲ್ಲಿದ್ದಾರೆ. AI ಬಳಸುವ ವಿದ್ಯಾರ್ಥಿಗಳು ಕಡಿಮೆ ಅಂಕ ಗಳಿಸುತ್ತಿರುವುದು ಗಮನಾರ್ಹ.

ಅಂತಾರಾಷ್ಟ್ರೀಯ ಶಿಕ್ಷಣ ಸಮೀಕ್ಷೆ ವರದಿ ಬಹಿರಂಗ: AI ಬಳಸುವ ವಿದ್ಯಾರ್ಥಿಗಳ ಅಂಕಗಳಲ್ಲಿ ಕುಸಿತ!
ಅಂತರರಾಷ್ಟ್ರೀಯ ವಿದ್ಯಾರ್ಥಿ ಮೌಲ್ಯಮಾಪನ ಕಾರ್ಯಕ್ರಮ

Updated on: Sep 10, 2026 | 12:02 PM

ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) ಇತ್ತೀಚೆಗೆ ತನ್ನ ಅಂತರರಾಷ್ಟ್ರೀಯ ವಿದ್ಯಾರ್ಥಿ ಮೌಲ್ಯಮಾಪನ ಕಾರ್ಯಕ್ರಮ (PISA) 2025 ಅಧ್ಯಯನದ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ವಿಶ್ವದಾದ್ಯಂತ 91 ದೇಶಗಳು ಹಾಗೂ ಆರ್ಥಿಕತೆಗಳಿಂದ 15 ವರ್ಷ ವಯಸ್ಸಿನ ಸುಮಾರು 33 ಮಿಲಿಯನ್ ಮಕ್ಕಳನ್ನು ಪ್ರತಿನಿಧಿಸುವ 7.6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪರೀಕ್ಷಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ವರದಿಯು ಶಿಕ್ಷಣ ಕ್ಷೇತ್ರದಲ್ಲಿ ಪೋಷಕರ ಆಸಕ್ತಿ, ತಂತ್ರಜ್ಞಾನದ ಪ್ರಭಾವ ಮತ್ತು AI ಬಳಕೆಯ ಬಗ್ಗೆ ಕೆಲವು ಆತಂಕಕಾರಿ ಹಾಗೂ ಆಸಕ್ತಿದಾಯಕ ಅಂಶಗಳನ್ನು ಹೊರಹಾಕಿದೆ.

ಮಕ್ಕಳ ಶಿಕ್ಷಣದಲ್ಲಿ ಕುಟುಂಬಗಳ ಆಸಕ್ತಿಯ ಕೊರತೆ:

PISA 2025 ರ ವರದಿಯ ಪ್ರಕಾರ, ಅಮೆರಿಕ ಸೇರಿದಂತೆ ಪ್ರಪಂಚದ ಬಹುತೇಕ ದೇಶಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸ್ವಂತ ಕುಟುಂಬಗಳಿಂದ ಸೂಕ್ತ ಶೈಕ್ಷಣಿಕ ಬೆಂಬಲವನ್ನು ಪಡೆಯುತ್ತಿಲ್ಲ, ಅದರಲ್ಲೂ ವಿಶೇಷವಾಗಿ ಗಂಡು ಮಕ್ಕಳಿಗೆ ಸಿಗುವ ಬೆಂಬಲದಲ್ಲಿ ಭಾರಿ ಕೊರತೆಯಿದೆ. ಪೋಷಕರು ತಮ್ಮ ಮಕ್ಕಳ ಶಾಲಾ ಕೆಲಸಗಳು ಅಥವಾ ಅಧ್ಯಯನದ ವಿಷಯಗಳಲ್ಲಿ ಎಷ್ಟು ಆಸಕ್ತಿ ವಹಿಸುತ್ತಾರೆ ಎಂಬ ಪ್ರಶ್ನೆಗೆ ನಿರಾಶಾದಾಯಕ ಉತ್ತರಗಳು ಬಂದಿವೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿದ OECD ಶಿಕ್ಷಣ ನಿರ್ದೇಶಕ ಆಂಡ್ರಿಯಾಸ್ ಸ್ಕ್ಲೀಚರ್, ಪೋಷಕರು ತಮ್ಮ ಮಕ್ಕಳ ಶಿಕ್ಷಣದಲ್ಲಿ ವೈಯಕ್ತಿಕ ಕಾಳಜಿ ವಹಿಸುವ ಬದಲು ತಮ್ಮನ್ನು ಕೇವಲ ‘ಶಾಲೆಯ ಗ್ರಾಹಕರು’ (School customers) ಎಂದು ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಶೈಕ್ಷಣಿಕ ಸಾಧನೆಯಲ್ಲಿ ಏಷ್ಯಾದ ದೇಶಗಳ ಮುನ್ನಡೆ:

ಈ ಬಾರಿಯ PISA ಪರೀಕ್ಷೆಯಲ್ಲಿ ಏಷ್ಯಾದ ದೇಶಗಳ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಚೀನಾ, ಸಿಂಗಾಪುರ, ತೈವಾನ್, ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳ ಮಕ್ಕಳು ಗರಿಷ್ಠ ಅಂಕಗಳನ್ನು ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಯುನೈಟೆಡ್ ಕಿಂಗ್‌ಡಮ್ ಮತ್ತು ನ್ಯೂಜಿಲೆಂಡ್ ಮಕ್ಕಳು ಉತ್ತಮ ಸಾಧನೆ ತೋರಿದ್ದರೂ, ಅಮೆರಿಕದ ಮಕ್ಕಳ ಓದುವಿಕೆ ಮತ್ತು ಗಣಿತದ ಅಂಕಗಳಲ್ಲಿ ನಿರಂತರ ಕುಸಿತ ಕಂಡುಬಂದಿದೆ. ಚೀನಾದಲ್ಲಿ ಸುಮಾರು ಶೇ. 100 ರಷ್ಟು ವಿದ್ಯಾರ್ಥಿಗಳು ಗಣಿತ ಮತ್ತು ಓದುವಿಕೆಯಲ್ಲಿ ಮೂಲಭೂತ ಮಟ್ಟಕ್ಕಿಂತ ಹೆಚ್ಚಿನ ಅಂಕ ಗಳಿಸಿದ್ದರೆ, ಅಮೆರಿಕದಲ್ಲಿ ಈ ಪ್ರಮಾಣ ಗಣಿತದಲ್ಲಿ ಶೇ. 65 ಮತ್ತು ಓದುವಿಕೆಯಲ್ಲಿ ಶೇ. 74 ರಷ್ಟಿದೆ.

ಇದನ್ನೂ ಓದಿ: ಕ್ಯಾಂಪಸ್ ಇಂಟರ್ವ್ಯೂಗೂ ಮುನ್ನವೇ ಒಲಿದ ಅದೃಷ್ಟ; ಭಾರತದ 21 ವರ್ಷದ ವಿದ್ಯಾರ್ಥಿಗೆ ನೆದರ್‌ಲ್ಯಾಂಡ್ಸ್ ಕಂಪನಿಯಿಂದ 2.5 ಕೋಟಿ ರೂ. ಜಾಬ್ ಆಫರ್!

ಹೆಚ್ಚುತ್ತಿರುವ ಡಿಜಿಟಲ್ ಗೊಂದಲಗಳು (Digital Distractions):

ವರದಿಯ ಪ್ರಕಾರ, ಶಾಲಾ ತರಗತಿಗಳಲ್ಲಿ ಮಕ್ಕಳ ಗಮನ ಬೇರೆಡೆ ಸೆಳೆಯುವ ಡಿಜಿಟಲ್ ಗೊಂದಲಗಳು ಹೆಚ್ಚಾಗುತ್ತಿವೆ. ಉನ್ನತ ಆದಾಯದ ದೇಶಗಳಲ್ಲಿ ಕಾಲು ಭಾಗಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಜ್ಞಾನ ತರಗತಿಗಳಲ್ಲಿ ಡಿಜಿಟಲ್ ಸಾಧನಗಳಿಂದ ಗೊಂದಲಕ್ಕೊಳಗಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಜಪಾನ್, ಕೊರಿಯಾ ಮತ್ತು ಚೀನಾದ ತರಗತಿಗಳಲ್ಲಿ ಡಿಜಿಟಲ್ ಗೊಂದಲ ವರದಿ ಮಾಡಿದವರ ಸಂಖ್ಯೆ ಶೇ. 10 ಕ್ಕಿಂತ ಕಡಿಮೆಯಿದೆ. ಶಾಲೆಗಳಲ್ಲಿ ದಿನಕ್ಕೆ 2 ರಿಂದ 3 ಗಂಟೆಗಳ ಕಾಲ ತಂತ್ರಜ್ಞಾನ ಬಳಸುವವರ ಅಂಕಗಳು ಸುಧಾರಿಸಿದ್ದರೆ, ಅದಕ್ಕಿಂತ ಹೆಚ್ಚು ಸಮಯ ಡಿಜಿಟಲ್ ಸಾಧನ ಬಳಸಿದ ವಿದ್ಯಾರ್ಥಿಗಳ ಅಂಕಗಳು ತೀವ್ರವಾಗಿ ಕುಸಿದಿವೆ.

ಕೃತಕ ಬುದ್ಧಿಮತ್ತೆ (AI) ಬಳಸುವ ವಿದ್ಯಾರ್ಥಿಗಳ ಅಂಕಗಳಲ್ಲಿ ಕುಸಿತ:

ಅಧ್ಯಯನದಲ್ಲಿ ತಿಳಿದುಬಂದ ಅತ್ಯಂತ ಮಹತ್ವದ ಅಂಶವೆಂದರೆ AI ತಂತ್ರಜ್ಞಾನದ ಬಳಕೆ. ಶಾಲಾ ಕಾರ್ಯಗಳಿಗಾಗಿ (ಪಠ್ಯ ಸಂಕ್ಷಿಪ್ತಗೊಳಿಸುವುದು, ಕರಡು ರಚಿಸುವುದು ಅಥವಾ ಸಂಶೋಧನೆ) AI ಬಳಸುವ ವಿದ್ಯಾರ್ಥಿಗಳು, AI ಬಳಸದ ವಿದ್ಯಾರ್ಥಿಗಳಿಗಿಂತ ವಿಜ್ಞಾನ ವಿಷಯದಲ್ಲಿ ಕಡಿಮೆ ಅಂಕಗಳನ್ನು ಗಳಿಸುತ್ತಿದ್ದಾರೆ. AI ಬಳಸದ ವಿದ್ಯಾರ್ಥಿಗಳು ಬಳಸುವವರಿಗಿಂತ ಸರಾಸರಿ 20 ಅಂಕಗಳನ್ನು ಹೆಚ್ಚು ಗಳಿಸಿದ್ದು, ಇದು ಸುಮಾರು ಒಂದು ವರ್ಷದ ಹೆಚ್ಚುವರಿ ಶಾಲಾ ಶಿಕ್ಷಣಕ್ಕೆ ಸಮನಾದ ವ್ಯತ್ಯಾಸವನ್ನು ತೋರಿಸುತ್ತದೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:02 pm, Thu, 10 September 26

Loading...
Unable to load recommendations.
Follow Us