
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳು ಹಣಕಾಸಿನ ತೊಂದರೆಯಿಂದ ತಮ್ಮ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಪ್ರಧಾನ ಮಂತ್ರಿ ಯಶಸ್ವಿ ವಿದ್ಯಾರ್ಥಿವೇತನ ಯೋಜನೆ’ (PM-YASASVI) ಯನ್ನು ಜಾರಿಗೊಳಿಸಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ಯೋಜನೆಯು ಇತರ ಹಿಂದುಳಿದ ವರ್ಗಗಳು (OBC), ಆರ್ಥಿಕವಾಗಿ ಹಿಂದುಳಿದ ವರ್ಗಗಳು (EWS) ಮತ್ತು ಡಿನೋಟಿಫೈಡ್ ಬುಡಕಟ್ಟು ಜನಾಂಗದ (DNT) ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಆರ್ಥಿಕ ನೆರವು ನೀಡುತ್ತದೆ. ಶಾಲಾ ಹಂತದಿಂದ ಹಿಡಿದು ಕಾಲೇಜು ಹಂತದವರೆಗಿನ ಅರ್ಹ ವಿದ್ಯಾರ್ಥಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
‘ಪಿಎಂ ಯುವ ಸಾಧಕರ ವಿದ್ಯಾರ್ಥಿವೇತನ ಪ್ರಶಸ್ತಿ ಯೋಜನೆ ವೈಬ್ರಂಟ್ ಇಂಡಿಯಾ’ (PM-YASASVI) ಸಮಾಜದ ವಂಚಿತ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸುವ ಮಹತ್ವಾಕಾಂಕ್ಷಿ ಉಪಕ್ರಮವಾಗಿದೆ. ಆರ್ಥಿಕ ಅಡಚಣೆಗಳಿಂದಾಗಿ ಯಾವುದೇ ವಿದ್ಯಾರ್ಥಿಯು ಶಾಲೆ ತೊರೆಯಬಾರದು ಎಂಬುದು ಇದರ ಮುಖ್ಯ ಗುರಿಯಾಗಿದೆ. ಈ ಯೋಜನೆಯು ಪ್ರಮುಖವಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಗಳು, ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಗಳು, ಶಾಲಾ ಹಂತದಲ್ಲಿ ಉನ್ನತ ಶಿಕ್ಷಣ, ಕಾಲೇಜು ಹಂತದಲ್ಲಿ ಉನ್ನತ ಶಿಕ್ಷಣ ಹಾಗೂ ಒಬಿಸಿ (OBC) ಬಾಲಕ ಮತ್ತು ಬಾಲಕಿಯರಿಗಾಗಿ ಹಾಸ್ಟೆಲ್‌ಗಳ ನಿರ್ಮಾಣ ಎಂಬ ಐದು ಪ್ರಮುಖ ಅಂಶಗಳನ್ನು ಒಳಗೊಂಡಿದೆ.
ಪ್ರಧಾನ ಮಂತ್ರಿ ಯಶಸ್ವಿ ಯೋಜನೆಯಡಿಯಲ್ಲಿ ಆಯ್ಕೆಯಾಗುವ ಅರ್ಹ ವಿದ್ಯಾರ್ಥಿಗಳಿಗೆ ಅವರು ಓದುತ್ತಿರುವ ತರಗತಿಗೆ ಅನುಗುಣವಾಗಿ ವಾರ್ಷಿಕ 75,000 ದಿಂದ 1.25 ಲಕ್ಷ ರೂ. ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ಇದರನ್ವಯ 9 ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ 75,000ರೂ. ಹಾಗೂ 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ 1,25,000 ರೂ. ವಿದ್ಯಾರ್ಥಿವೇತನ ಲಭ್ಯವಾಗಲಿದೆ. ಈ ಆರ್ಥಿಕ ಸಹಾಯವು ವಿದ್ಯಾರ್ಥಿಗಳ ಶಾಲಾ ಶುಲ್ಕ, ಹಾಸ್ಟೆಲ್ ವೆಚ್ಚ ಮತ್ತು ಇತರ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ನೆರವಾಗುತ್ತದೆ.
ಇದನ್ನೂ ಓದಿ: 4ನೇ ತರಗತಿಗೆ ಶಾಲೆ ಬಿಟ್ಟು ಗುರುಕುಲ ಸೇರಿದ್ದ ಬಾಲಕ ಈಗ ಇಸ್ರೋ ವಿಜ್ಞಾನಿ; ಯಜುರ್ವೇದ ಕಲಿತು JEE ಪಾಸ್ ಮಾಡಿದ ಕೇರಳದ ಯುವಕ
ಪಿಎಂ ಯಶಸ್ವಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು OBC, EWS ಅಥವಾ DNT ವರ್ಗಕ್ಕೆ ಸೇರಿದವರಾಗಿರಬೇಕು ಮತ್ತು ಪ್ರಸ್ತುತ 9ನೇ, 10ನೇ, 11ನೇ ಅಥವಾ 12ನೇ ತರಗತಿಯಲ್ಲಿ ಓದುತ್ತಿರಬೇಕು. ಅಲ್ಲದೆ, ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ ಅಂದರೆ 8ನೇ ಅಥವಾ 10ನೇ ತರಗತಿಯಲ್ಲಿ ಕನಿಷ್ಠ ಶೇ.60 ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯವು 2.5 ಲಕ್ಷ ರೂ. ಮೀರಿರಬಾರದು ಮತ್ತು ಅರ್ಜಿ ಸಲ್ಲಿಸುವ ಸಮಯದಲ್ಲಿ ಎಲ್ಲಾ ಅಗತ್ಯ ದಾಖಲೆಗಳು ಲಭ್ಯವಿರಬೇಕು.
ಈ ಯೋಜನೆಯ ಪ್ರಯೋಜನ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ಕೆಲವು ಪ್ರಮುಖ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಕಡ್ಡಾಯವಾಗಿದೆ. ಅರ್ಜಿದಾರರು ತಮ್ಮ ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರ, ಜಾತಿ ಅಥವಾ ವರ್ಗ ಪ್ರಮಾಣಪತ್ರ, ವಿದ್ಯಾರ್ಥಿಯ ಆಧಾರ್ ಕಾರ್ಡ್, ಹಿಂದಿನ ತರಗತಿಯ ಅಂಕಪಟ್ಟಿ ಹಾಗೂ ವಿದ್ಯಾರ್ಥಿಯ ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಅರ್ಹ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಅಧಿಕೃತ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ (NSP) ಮೂಲಕ ಈ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ