AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಕಿಡ್ ಇಂಟರ್​ನ್ಯಾಷನಲ್ ಶಾಲೆಯ ವಿರುದ್ಧ ಮತ್ತೊಂದು ಎಫ್​ಐಆರ್ ದಾಖಲು

ಬೆಂಗಳೂರಿನ ವರ್ತೂರು ಬಳಿಯ ಹರಳೂರು ರಸ್ತೆಯಲ್ಲಿರುವ ಆರ್ಕಿಡ್ ಶಾಲೆಯ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಆರ್ಕಿಡ್ ಇಂಟರ್​ನ್ಯಾಷನಲ್ ಶಾಲೆಯ ವಿರುದ್ಧ ಮತ್ತೊಂದು ಎಫ್​ಐಆರ್ ದಾಖಲು
ಪ್ರಾತಿನಿಧಿಕ ಚಿತ್ರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Jul 23, 2022 | 1:38 PM

Share

ಬೆಂಗಳೂರು: ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎನಿಸಿರುವ ಆರ್ಕಿಡ್ ಇಂಟರ್​ನ್ಯಾಷನಲ್ ಶಾಲೆಯ (Orchids The International School) ವಿರುದ್ಧ ಮತ್ತೊಂದು ಎಫ್​ಐಆರ್ ದಾಖಲಾಗಿದೆ. ಅನುಮತಿ ಪಡೆಯದೆ ಸಂಸ್ಥೆಯು ಶಾಲೆ ನಡೆಸುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ದೂರಿದ್ದಾರೆ. ಇದೇ ದೂರು ಆಧರಿಸಿ ಬೆಂಗಳೂರಿನ ವರ್ತೂರು ಬಳಿಯ ಹರಳೂರು ರಸ್ತೆಯಲ್ಲಿರುವ ಶಾಲೆಯ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಪ್ರಸಕ್ತ ವರ್ಷಕ್ಕೆ 77ಕ್ಕೂ ಹೆಚ್ಚು ಮಕ್ಕಳ ದಾಖಲೆ ಪಡೆದು ವಂಚಿಸಲಾಗಿದೆ ಎಂದು ಅಧಿಕಾರಿಗಳು ದೂರಿನಲ್ಲಿ ಹೇಳಿದ್ದಾರೆ. ಶಾಲೆಯು ಮಕ್ಕಳ ದಾಖಲಾತಿಗಾಗಿ ಪೋಷಕರಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಮಕ್ಕಳಿಗೆ ಬೇರೆಡೆಗೆ ದಾಖಲಾತಿಗೆ ಅವಕಾಶ ಕಲ್ಪಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

ಮಾಗಡಿ ರಸ್ತೆ ಆರ್ಕಿಡ್ ಶಾಲೆ ವಿರುದ್ಧ ಎಫ್​ಐಆರ್ ದಾಖಲು

ಮಾಗಡಿ ರಸ್ತೆಯ ಗೊಲ್ಲರಹಟ್ಟಿಯಲ್ಲಿ ನಡೆಸುತ್ತಿರುವ ಆರ್ಕಿಡ್ ಶಾಲೆಗೆ ಶಿಕ್ಷಣ ಇಲಾಖೆಯಿಂದ ಅಗತ್ಯ ಅನುಮತಿ ಪಡೆದುಕೊಂಡಿಲ್ಲ ಎಂದು ಶಿಕ್ಷಣ ಇಲಾಖೆ ಪೊಲೀಸರಿಗೆ ದೂರು ನೀಡಿದೆ. ಶಾಲೆಯಲ್ಲಿ ಕಲಿಯುತ್ತಿದ್ದ ಸುಮಾರು 104 ಮಕ್ಕಳು ಮತ್ತು ಪೋಷಕರಲ್ಲಿ ಇದರಿಂದ ಆತಂಕ ವ್ಯಕ್ತವಾಗಿದ್ದು, ಏನು ಮಾಡಬೇಕು ಎಂದು ತೋಚದ ಸ್ಥಿತಿ ತಲುಪಿದ್ದಾರೆ.

ಶಿಕ್ಷಣ ಇಲಾಖೆಯ ಅನುಮತಿ ಇಲ್ಲದೆ ಆರಂಭಿಸಿದ್ದ ಶಾಲೆಯಲ್ಲಿ ಪ್ರಿ ನರ್ಸರಿಯಿಂದ 7ನೇ ತರಗತಿವರೆಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಇದಕ್ಕಾಗಿ ಪೋಷಕರಿಂದ ಲಕ್ಷಾಂತರ ರೂಪಾಯಿ ಶುಲ್ಕ ಪಡೆದುಕೊಳ್ಳಲಾಗಿತ್ತು ಎಂದು ದೂರಲಾಗಿದೆ. ಶಾಲೆ ಅನುಮತಿ ಪಡೆದಿಲ್ಲ ಎನ್ನುವುದು ದೃಢಪಟ್ಟ ನಂತರ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಆಡಳಿತ ಮಂಡಳಿ ವಿರುದ್ಧ ಬೆಂಗಳೂರು ಉತ್ತರ-1 ಶೈಕ್ಷಣಿಕ ವಿಭಾಗದ ಬಿಇಒ ರಮೇಶ್ ದೂರು ದಾಖಲಿಸಿದ್ದರು. ಶಾಲೆಯ ಪ್ರಾಂಶುಪಾಲರು ಮತ್ತು ಕಾರ್ಯದರ್ಶಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೊಟೀಸ್ ಕಳಿಸಿದ್ದರು. ಎಫ್​ಐಆರ್ ದಾಖಲಾದ ನಂತರ ಮಕ್ಕಳಿಗೆ ಶಾಲೆಯು ಮಕ್ಕಳಿಗೆ ರಜೆ ನೀಡಿತ್ತು.

ಎಫ್​ಐಆರ್​ನಲ್ಲಿ ಪೊಲೀಸರು ಶಾಲೆಯ ಕಾರ್ಯದರ್ಶಿ ಮತ್ತು ಪ್ರಾಚಾರ್ಯರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ‘ಶಾಲೆಯ ಆಡಳಿತ ಮಂಡಳಿಯು ಶಿಕ್ಷಣ ಇಲಾಖೆಯ ಅನುಮತಿ ಪಡೆದಕೊಳ್ಳದೇ 2022-23ರ ಶೈಕ್ಷಣಿಕ ವರ್ಷಕ್ಕೆ ಮಕ್ಕಳನ್ನು ದಾಖಲಿಸಿಕೊಂಡು ಪೋಷಕರನ್ನು ವಂಚಿಸಿದೆ’ ಎಂದು ಬಿಇಒ ರಮೇಶ್ ಅವರು ದೂರಿನಲ್ಲಿ ಹೇಳಿದ್ದರು.

ದೂರಿನ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಆರ್ಕಿಡ್ಸ್ ಶಾಲೆಯು, ನಾವು ಅಗತ್ಯ ಅನುಮತಿ, ಲೈಸೆನ್ಸ್, ಅನುಮೋದನೆಗಾಗಿ ಕರ್ನಾಟಕದ ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಿದ್ದೇವೆ. ಇಲ್ಲಿ ನಡೆಯುತ್ತಿರುವ ನಿರ್ಮಾಣ ಚಟುವಟಿಕೆ ಕಾಮಗಾರಿ, ಶಾಲೆಯ ಬ್ರಾಂಡ್ ನೇಮ್ ಕಾರಣಕ್ಕೆ ಹಲವು ಪೋಷಕರು ನಮ್ಮ ಶಾಲೆಗೆ ಮಕ್ಕಳನ್ನು ದಾಖಲಿಸಲು ಉತ್ಸಾಹ ತೋರಿದರು. ತೀರಾ ಇತ್ತೀಚೆಗಷ್ಟೇ ನಮ್ಮ ಅರ್ಜಿ ತಿರಸ್ಕೃತಗೊಂಡಿರುವ ಮಾಹಿತಿ ಲಭ್ಯವಾಯಿತು. ಕೆಲವು ಸ್ಪಷ್ಟನೆಗಳನ್ನು ಅಧಿಕಾರಿಗಳು ಕೋರಿದ್ದಾರೆ. ಅವನ್ನು ಒದಗಿಸಿದ ನಂತರ ನಮಗೆ ಶೀಘ್ರದಲ್ಲಿಯೇ ಅನುಮತಿ ಸಿಗುವ ಸಾಧ್ಯತೆಯಿದೆ. ಅಲ್ಲಿಯವರೆಗೆ ವಿದ್ಯಾರ್ಥಿಗಳನ್ನು ಸಮೀಪದ ಆರ್ಕಿಡ್ಸ್ ಶಾಲೆಗಳಿಗೆ ಕಳಿಸಲು ವ್ಯವಸ್ಥೆ ಮಾಡಿದ್ದೇವೆ. ಮಕ್ಕಳ ಶಿಕ್ಷಣ ನಿಲ್ಲದಂತೆ ಕ್ರಮ ಕೈಗೊಂಡಿದ್ದೇವೆ’ ಎಂದು ಹೇಳಿತ್ತು.