ರಾಷ್ಟ್ರಪತಿಗಳಿಂದ ದಿವ್ಯ ಗೌರವ: 2026ರ ಸಾಲಿನ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಮುಡಿಗೇರಿಸಿಕೊಂಡ ಬೆಂಗಳೂರಿನ ಶಿಕ್ಷಕಿ ರಾಧಾ ರಾಜೇಶ್!

ಬೆಂಗಳೂರಿನ ಇಂದಿರಾನಗರದ ನ್ಯೂ ಹೊರೈಜನ್ ಪಬ್ಲಿಕ್ ಸ್ಕೂಲ್​​ನ ಜೀವಶಾಸ್ತ್ರ ಶಿಕ್ಷಕಿ ರಾಧಾ ರಾಜೇಶ್ ಅವರಿಗೆ 2026ರ ಸಾಲಿನ ಪ್ರತಿಷ್ಠಿತ 'ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ' ಲಭಿಸಿದೆ. ಲಿಯೋನೆಲ್ ಮೆಸ್ಸಿ, ಮೈಕೆಲ್ ಶೂಮಾಕರ್ ಅವರ ನೈಜ ಉದಾಹರಣೆಗಳು, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಹಾಗೂ ಪ್ರ್ಯಾಕ್ಟಿಕಲ್ ಬೋಧನಾ ಶೈಲಿಯ ಮೂಲಕ ವಿಜ್ಞಾನವನ್ನು ಜೀವಂತಗೊಳಿಸಿ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಾಧಕರನ್ನಾಗಿ ರೂಪಿಸಿದ್ದಾರೆ. ಇವರ ಕ್ರಾಂತಿಕಾರಿ ಶೈಕ್ಷಣಿಕ ಪಯಣದ ಸಮಗ್ರ ವಿವರ ಇಲ್ಲಿದೆ.

ರಾಷ್ಟ್ರಪತಿಗಳಿಂದ ದಿವ್ಯ ಗೌರವ: 2026ರ ಸಾಲಿನ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಮುಡಿಗೇರಿಸಿಕೊಂಡ ಬೆಂಗಳೂರಿನ ಶಿಕ್ಷಕಿ ರಾಧಾ ರಾಜೇಶ್!
ರಾಧಾ ರಾಜೇಶ್

Updated on: Sep 05, 2026 | 4:16 PM

ಬೆಂಗಳೂರಿನ ಇಂದಿರಾನಗರದ ‘ನ್ಯೂ ಹೊರೈಜನ್ ಪಬ್ಲಿಕ್ ಸ್ಕೂಲ್’ನ ಜೀವಶಾಸ್ತ್ರ (ಬಯಾಲಜಿ) ಶಿಕ್ಷಕಿ ಹಾಗೂ ವಿಭಾಗೀಯ ಮುಖ್ಯಸ್ಥೆಯಾದ ರಾಧಾ ರಾಜೇಶ್ ಅವರು 2026ರ ಸಾಲಿನ ಪ್ರತಿಷ್ಠಿತ ‘ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಂಡಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು (ಸೆಪ್ಟೆಂಬರ್ 5)ರ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಇವರು ಈ ದಿವ್ಯ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈ ಬಾರಿ ದೇಶಾದ್ಯಂತ ಆಯ್ಕೆಯಾದ ಒಟ್ಟು 48 ಅತ್ಯುತ್ತಮ ಶಿಕ್ಷಕರಲ್ಲಿ ಸಿಐಸ್‌ಸಿಇ (CISCE) ಮಂಡಳಿಯನ್ನು ಪ್ರತಿನಿಧಿಸಿದ ಏಕೈಕ ಶಿಕ್ಷಕಿ ರಾಧಾ ರಾಜೇಶ್.

ವಿಶಿಷ್ಟ ಬೋಧನಾ ಶೈಲಿಯಿಂದಲೇ ಖ್ಯಾತಿಗಳಿಸಿದ್ದ ಶಿಕ್ಷಕಿ ರಾಧಾ ರಾಜೇಶ್:

ಕೇವಲ ಪಠ್ಯಪುಸ್ತಕದ ಸಿದ್ಧಾಂತಗಳ ಹೊರತಾಗಿ ವಿಷಯಗಳನ್ನು ನೈಜ ಜೀವನದ ಪ್ರಸಿದ್ಧ ಉದಾಹರಣೆಗಳೊಂದಿಗೆ ಜೋಡಿಸಿ ಬೋಧಿಸುವುದು ರಾಧಾ ರಾಜೇಶ್ ಅವರ ವಿಶೇಷತೆ. ಪಿಟ್ಯುಟರಿ ಗ್ರಂಥಿ ಮತ್ತು ‘ಗ್ರೋತ್ ಹಾರ್ಮೋನ್’ ಬಗ್ಗೆ ವಿವರಿಸುವಾಗ ವಿಶ್ವಪ್ರಸಿದ್ಧ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಬಾಲ್ಯದಲ್ಲಿ ಎದುರಿಸಿದ್ದ ಗ್ರೋತ್ ಹಾರ್ಮೋನ್ ಕೊರತೆಯ ಕಥೆಯನ್ನು ವಿದ್ಯಾರ್ಥಿಗಳಿಗೆ ವಿವರಿಸುತ್ತಾರೆ. ಮಿದುಳಿನ ಗಾಯಗಳು (Traumatic Brain Injury) ಮತ್ತು ನರಮಂಡಲದ ಕುರಿತು ಪಾಠ ಮಾಡುವಾಗ ಕಾರು ರೇಸಿಂಗ್ ಚಾಂಪಿಯನ್ ಮೈಕೆಲ್ ಶೂಮೇಕರ್ ಅನುಭವಿಸಿದ ಸ್ಕೀಯಿಂಗ್ ಅಪಘಾತದ ಪ್ರಸಂಗವನ್ನು ಉದಾಹರಿಸುತ್ತಾರೆ. ಇನ್ನು ನರಕೋಶಗಳ ಸಂಪರ್ಕ (Synaptic connections) ವಿವರಿಸಲು ತಮ್ಮ ತಂದೆಗೆ ಇದ್ದ ಪಾರ್ಕಿನ್ಸನ್ ಕಾಯಿಲೆಯ ಅನುಭವವನ್ನು ಹಂಚಿಕೊಳ್ಳುವ ಮೂಲಕ ವಿಜ್ಞಾನವನ್ನು ಜೀವಂತಗೊಳಿಸುತ್ತಾರೆ.

ಕೃತಕ ಬುದ್ಧಿಮತ್ತೆ (AI) ಮತ್ತು ತಂತ್ರಜ್ಞಾನದ ಸೃಜನಶೀಲ ಬಳಕೆ:

ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅತ್ಯಂತ ಸಮರ್ಥವಾಗಿ ಅಳವಡಿಸಿಕೊಂಡಿರುವ ರಾಧಾ ರಾಜೇಶ್, ವರ್ಚುವಲ್ ಲ್ಯಾಬ್‌ಗಳು, 3D ಸಿಮ್ಯುಲೇಶನ್‌ಗಳು ಹಾಗೂ ಕೃತಕ ಬುದ್ಧಿಮತ್ತೆ (AI) ಆಧಾರಿತ ಕಲಿಕಾ ಪರಿಕರಗಳನ್ನು ಬಳಸುತ್ತಾರೆ. ಇಷ್ಟೇ ಅಲ್ಲದೆ ‘ರಾಧಾ ರಾಜೇಶ್ – ಬಯಾಲಜಿ ಬಿಯಾಂಡ್ ದಿ ಕ್ಲಾಸ್‌ರೂಮ್’ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ತರಗತಿಯ ಆಚೆಗೂ ಸಾವಿರಾರು ವಿದ್ಯಾರ್ಥಿಗಳಿಗೆ ಸುಲಭ ರೀತಿಯಲ್ಲಿ ಜೀವಶಾಸ್ತ್ರ ಬೋಧಿಸುತ್ತಿದ್ದಾರೆ. ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ಪ್ರಶ್ನಿಸುವ ಮತ್ತು ತಾರ್ಕಿಕವಾಗಿ ಆಲೋಚಿಸುವ ಸಾಮರ್ಥ್ಯ ಹೆಚ್ಚಿಸಲು ಬಳಸಬೇಕೇ ಹೊರತು, ಸ್ವತಂತ್ರ ಚಿಂತನೆಯನ್ನು ಬಿಡಲು ಅಲ್ಲ ಎಂಬುದು ಇವರ ಸಿದ್ಧಾಂತವಾಗಿದೆ.

ಇದನ್ನೂ ಓದಿ: ಸನಾತನ ಧರ್ಮದ 10 ಶಕ್ತಿಶಾಲಿ ಹಾಗೂ ಮಹಾನ್ ಗುರುಗಳು;ಜ್ಞಾನ, ಶೌರ್ಯ ಮತ್ತು ರಾಜಧರ್ಮದ ಹರಿಕಾರರು!

ವಿದ್ಯಾರ್ಥಿಗಳ ಸಾಧನೆ ಹಾಗೂ ಪ್ರತಿಷ್ಠಿತ ಪ್ರಶಸ್ತಿಗಳ ಗೌರವ:

ಇವರ ಸುದೀರ್ಘ ಮಾರ್ಗದರ್ಶನದಲ್ಲಿ ಸಾವಿರಾರು ವಿದ್ಯಾರ್ಥಿಗಳು ವೈದ್ಯಕೀಯ, ವೈಜ್ಞಾನಿಕ ಸಂಶೋಧನೆ ಹಾಗೂ ರಾಷ್ಟ್ರೀಯ ಮಟ್ಟದ ಸಾಧನೆಗಳತ್ತ ಹೆಜ್ಜೆ ಹಾಕಿದ್ದಾರೆ. ಇವರಿಂದ ತರಬೇತಿ ಪಡೆದ ವಿದ್ಯಾರ್ಥಿಯೊಬ್ಬರು ಪ್ರತಿಷ್ಠಿತ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ಗಳಿಸಿ ಪ್ರಸ್ತುತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯಷ್ಟೇ ಅಲ್ಲದೆ, ಇಸ್ರೋದ ಯು.ಆರ್. ರಾವ್ ಉಪಗ್ರಹ ಕೇಂದ್ರದಿಂದ (URSC) ನೀಡಲಾಗುವ ‘ಟಿಚರ್ಸ್ ಇನ್‌ಸೈಟ್ ಅವಾರ್ಡ್’ ಅನ್ನು ಸತತ ನಾಲ್ಕು ಬಾರಿ (2022, 2024, 2025 ಮತ್ತು 2026) ಪ್ರಥಮ ಸ್ಥಾನದೊಂದಿಗೆ ಪಡೆದುಕೊಂಡಿದ್ದಾರೆ.

ಪ್ರೀತಿಯ ‘ಮಾತೃ ಸ್ವರೂಪಿ’ ಶಿಕ್ಷಕಿ:

ಶಿಕ್ಷಕರ ಕುಟುಂಬ ಹಿನ್ನೆಲೆಯಿಂದ ಬಂದಿರುವ ರಾಧಾ ರಾಜೇಶ್ ಅವರು, 2014 ರಿಂದ ನ್ಯೂ ಹೊರಿಜನ್ ಪಬ್ಲಿಕ್ ಶಾಲೆಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಯಲ್ಲಿ ಕೇವಲ ಬೋಧಕಿಯಾಗಿರದೆ, ವಿದ್ಯಾರ್ಥಿಗಳ ವೈಯಕ್ತಿಕ ಸಮಸ್ಯೆಗಳನ್ನು ಆಲಿಸಿ ಕೌನ್ಸಿಲಿಂಗ್ ನೀಡುವ ಮೂಲಕ ಶಾಲೆಯ ‘ಮಾತೃ ಸ್ವರೂಪಿ’ಯಾಗಿ ಅಪಾರ ಪ್ರೀತಿ ಮತ್ತು ಗೌರವವನ್ನು ಗಳಿಸಿದ್ದಾರೆ. ಇವರ ಈ ಸುದೀರ್ಘ ಶೈಕ್ಷಣಿಕ ಸೇವೆ ಮತ್ತು ಕ್ರಾಂತಿಕಾರಿ ಬೋಧನಾ ವಿಧಾನಕ್ಕೆ ಈಗ ರಾಷ್ಟ್ರೀಯ ಮಟ್ಟದ ಅತ್ಯುನ್ನತ ಪುರಸ್ಕಾರ ಲಭಿಸಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us