AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸನಾತನ ಧರ್ಮದ 10 ಶಕ್ತಿಶಾಲಿ ಹಾಗೂ ಮಹಾನ್ ಗುರುಗಳು;ಜ್ಞಾನ, ಶೌರ್ಯ ಮತ್ತು ರಾಜಧರ್ಮದ ಹರಿಕಾರರು!

ಶಿಕ್ಷಕರ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ, ರಾಮಾಯಣ, ಮಹಾಭಾರತ ಮತ್ತು ವೇದಗಳಿಂದ ಆಯ್ದ ಹಿಂದೂ ಧರ್ಮದ 10 ಅತ್ಯಂತ ಶಕ್ತಿಶಾಲಿ ಹಾಗೂ ಶ್ರೇಷ್ಠ ಗುರುಗಳ ಕುರಿತು ಇಲ್ಲಿ ವಿವರಿಸಲಾಗಿದೆ. ಈ ಮಹಾನ್ ಋಷಿಗಳು ಕೇವಲ ವೇದ-ಶಾಸ್ತ್ರಗಳನ್ನಷ್ಟೇ ಅಲ್ಲದೆ, ಶಸ್ತ್ರಾಸ್ತ್ರ, ರಾಜನೀತಿ, ನೀತಿಶಾಸ್ತ್ರ ಮತ್ತು ಭಕ್ತಿ ಮಾರ್ಗವನ್ನೂ ಜಗತ್ತಿಗೆ ಕಲಿಸಿದವರು. ಭಾರತೀಯ ಗುರು ಪರಂಪರೆಯ ಈ ಆಚಾರ್ಯರ ಅಸಾಧಾರಣ ಜ್ಞಾನ ಮತ್ತು ತಪೋಶಕ್ತಿ ಇಂದಿಗೂ ಸ್ಫೂರ್ತಿದಾಯಕವಾಗಿದೆ.

ಸನಾತನ ಧರ್ಮದ 10 ಶಕ್ತಿಶಾಲಿ ಹಾಗೂ ಮಹಾನ್ ಗುರುಗಳು;ಜ್ಞಾನ, ಶೌರ್ಯ ಮತ್ತು ರಾಜಧರ್ಮದ ಹರಿಕಾರರು!
ಮಹಾನ್ ಗುರುಗಳು
ಅಕ್ಷತಾ ವರ್ಕಾಡಿ
|

Updated on:Sep 05, 2026 | 12:48 PM

Share

ರಾಮಾಯಣ, ಮಹಾಭಾರತ, ವೇದಗಳು ಮತ್ತು ಪುರಾಣಗಳಲ್ಲಿ ಅಸಾಧಾರಣವಾದ ಜ್ಞಾನ ಹಾಗೂ ತಪೋಶಕ್ತಿಯನ್ನು ಹೊಂದಿದ್ದ ಅನೇಕ ಮಹಾನ್ ಗುರುಗಳ ಉಲ್ಲೇಖವಿದೆ. ಈ ಋಷಿಗಳು ಮತ್ತು ಆಚಾರ್ಯರು ಕೇವಲ ವೇದ-ಶಾಸ್ತ್ರಗಳನ್ನು ಕಲಿಸುವುದಕ್ಕೆಷ್ಟೇ ಸೀಮಿತವಾಗಿರಲಿಲ್ಲ; ಶಸ್ತ್ರಾಸ್ತ್ರ ಶಿಕ್ಷಣ, ರಾಜಕೀಯ, ರಾಜಧರ್ಮ, ನೀತಿಶಾಸ್ತ್ರ ಮತ್ತು ಭಕ್ತಿ ಮಾರ್ಗವನ್ನು ಜಗತ್ತಿಗೆ ತೋರಿಸಿಕೊಟ್ಟವರು. ಭಾರತದಲ್ಲಿ ಗುರು ಸ್ಥಾನಕ್ಕೆ ಸರ್ವೋಚ್ಚ ಗೌರವವಿದೆ. ಶಿಕ್ಷಕರ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ, ಹಿಂದೂ ಧರ್ಮದ 10 ಅತ್ಯಂತ ಶಕ್ತಿಶಾಲಿ ಹಾಗೂ ಶ್ರೇಷ್ಠ ಗುರುಗಳ ವಿವರ ಇಲ್ಲಿದೆ:

ಗುರು ದ್ರೋಣಾಚಾರ್ಯರು:

ಮಹರ್ಷಿ ಭಾರದ್ವಾಜರ ಪುತ್ರರಾದ ದ್ರೋಣಾಚಾರ್ಯರನ್ನು ದೇವಗುರು ಬೃಹಸ್ಪತಿಯ ಅವತಾರವೆಂದೇ ಪರಿಗಣಿಸಲಾಗುತ್ತದೆ. ಇವರು ಪರಶುರಾಮ, ಮಹರ್ಷಿ ಅಗ್ನಿವೇಶ, ಅಗಸ್ತ್ಯ ಮತ್ತು ನಾರಾಯಣರಿಂದ ಶಸ್ತ್ರಾಸ್ತ್ರ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದರು. ಭೀಷ್ಮ ಪಿತಾಮಹರ ವಿನಂತಿಯಂತೆ ಕೌರವರು ಮತ್ತು ಪಾಂಡವರಿಗೆ ಧನುರ್ವಿದ್ಯೆ ಹಾಗೂ ಯುದ್ಧ ಕೌಶಲ್ಯಗಳನ್ನು ಕಲಿಸಿದ ಪ್ರಮುಖ ಆಚಾರ್ಯರಿವರು. ಕರ್ಣ ಸೇರಿದಂತೆ ದೇಶದ ಹಲವು ರಾಜಕುಮಾರರು ಇವರಿಂದಲೇ ಶಸ್ತ್ರಾಸ್ತ್ರ ಶಿಕ್ಷಣ ಪಡೆದಿದ್ದರು.

ಭಗವಾನ್ ಪರಶುರಾಮ:

ವಿಷ್ಣುವಿನ ಆರನೇ ಅವತಾರವಾದ ಪರಶುರಾಮರು ಶಿವನಿಂದಲೇ ಯುದ್ಧ ಕಲೆ ಮತ್ತು ದೈವಿಕ ಪರಶು (ಕೊಡಲಿ) ಅಸ್ತ್ರವನ್ನು ಪಡೆದವರು. ಇವರು ತಮ್ಮ ತಂದೆ ಜಮದಗ್ನಿಯಿಂದ ಆರಂಭಿಕ ಶಿಕ್ಷಣ ಪಡೆದರು. ಮಹಾಭಾರತ ಕಾಲದಲ್ಲಿ ದ್ರೋಣಾಚಾರ್ಯ, ಕರ್ಣ ಮತ್ತು ಭೀಷ್ಮನಂತಹ ಮಹಾನ್ ಯೋಧರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿದ ಪರಮ ಗುರು ಇವರಾಗಿದ್ದಾರೆ.

ದೇವಗುರು ಬೃಹಸ್ಪತಿ:

ಸಕಲ ದೇವತೆಗಳ ಗುರುವಾದ ಬೃಹಸ್ಪತಿಯು ನೀತಿಶಾಸ್ತ್ರ, ಅರ್ಥಶಾಸ್ತ್ರ, ವಾಸ್ತುಶಿಲ್ಪ ಹಾಗೂ ದೇವತಾಶಾಸ್ತ್ರಗಳಲ್ಲಿ ಅಗಾಧ ಜ್ಞಾನ ಹೊಂದಿದ್ದವರು. ಇವರ ಉಪಸ್ಥಿತಿಯಿಲ್ಲದೆ ದೇವತೆಗಳ ಯಜ್ಞಗಳು ಪೂರ್ಣಗೊಳ್ಳುತ್ತಿರಲಿಲ್ಲ. ಶಿವನಿಗೆ ಕಠಿಣ ತಪಸ್ಸು ಮಾಡಿ ದೇವಗುರು ಹಾಗೂ ಗ್ರಹದ ಸ್ಥಾನಮಾನ ಪಡೆದ ಇವರು, ಭೀಷ್ಮ ಪಿತಾಮಹರಿಗೆ ರಾಜನೀತಿಯ ಜ್ಞಾನವನ್ನು ಧಾರೆ ಎರೆದಿದ್ದರು.

ಗುರು ಶುಕ್ರಾಚಾರ್ಯರು:

ಅಸುರರ ಗುರುವಾದ ಶುಕ್ರಾಚಾರ್ಯರು ಅಸಾಧಾರಣ ಜ್ಞಾನಿ. ಇವರಲ್ಲಿದ್ದ ‘ಸಂಜೀವಿನಿ ವಿದ್ಯೆ’ಯಿಂದ ದೇವ-ಅಸುರ ಯುದ್ಧದಲ್ಲಿ ಮರಣ ಹೊಂದಿದ ರಾಕ್ಷಸರನ್ನು ಮರಳಿ ಬದುಕಿಸುವ ಶಕ್ತಿ ಇವರಿಗಿತ್ತು. ದೇವಗುರು ಬೃಹಸ್ಪತಿಯು ತನ್ನ ಮಗ ಕಚನನ್ನು ಈ ಸಂಜೀವಿನಿ ವಿದ್ಯೆಯನ್ನು ಕಲಿಯಲು ಶುಕ್ರಾಚಾರ್ಯರ ಬಳಿಗೇ ಕಳುಹಿಸಿದ್ದರು. ಇವರು ಭೀಷ್ಮನಿಗೆ ರಾಜಕೀಯ ಮತ್ತು ಧರ್ಮಗ್ರಂಥಗಳ ಜ್ಞಾನ ಬೋಧಿಸಿದ್ದರು.

ಋಷಿ ಸಾಂದೀಪನಿ:

ಉಜ್ಜಯಿನಿಯಲ್ಲಿ ಆಶ್ರಮ ಹೊಂದಿದ್ದ ಸಾಂದೀಪನಿ ಮಹರ್ಷಿಗಳು ವೇದ, ವೇದಾಂತ, ಉಪನಿಷತ್ತು ಹಾಗೂ 64 ಕಲೆಗಳನ್ನು ಬೋಧಿಸುತ್ತಿದ್ದ ಶ್ರೇಷ್ಠ ಗುರು. ಶ್ರೀಕೃಷ್ಣ ಮತ್ತು ಬಲರಾಮರು ತಮ್ಮ ಉಪನಯನದ ನಂತರ ಸಾಂದೀಪನಿ ಋಷಿಗಳ ಆಶ್ರಮಕ್ಕೆ ಆಗಮಿಸಿ, ಕೇವಲ 64 ದಿನಗಳಲ್ಲಿ 64 ಕಲೆಗಳು ಹಾಗೂ ಶಸ್ತ್ರಾಸ್ತ್ರ ವಿದ್ಯೆಗಳನ್ನು ಕರಗತ ಮಾಡಿಕೊಂಡರು.

ದೇವರ್ಷಿ ನಾರದ:

ಧರ್ಮ, ಭಕ್ತಿ ಮತ್ತು ಸಂಗೀತದ ದಿವ್ಯ ಹರಿಕಾರರಾದ ನಾರದರು ಯುಗಯುಗಗಳಿಂದಲೂ ಮಾರ್ಗದರ್ಶಕರಾಗಿದ್ದಾರೆ. ಇವರು ವಾಲ್ಮೀಕಿಗೆ ರಾಮನಾಮದ ಮಹತ್ವ ತಿಳಿಸಿ ‘ರಾಮಾಯಣ’ ರಚನೆಗೆ ಸ್ಪೂರ್ತಿಯಾದರು. ಧ್ರುವ ಹಾಗೂ ಪ್ರಹ್ಲಾದನಿಗೆ ವಿಷ್ಣು ಭಕ್ತಿಯ ಮಾರ್ಗ ತೋರಿಸಿದ್ದಲ್ಲದೆ, ಧರ್ಮರಾಯನಿಗೆ (ಯುಧಿಷ್ಠಿರ) ರಾಜಧರ್ಮದ ತತ್ವಗಳನ್ನು ಬೋಧಿಸಿದವರು.

ಮಹರ್ಷಿ ವಿಶ್ವಾಮಿತ್ರ:

ಕ್ಷತ್ರಿಯ ರಾಜನಾಗಿ ಹುಟ್ಟಿ, ಕಠಿಣ ಆಧ್ಯಾತ್ಮಿಕ ತಪಸ್ಸಿನ ಮೂಲಕ ‘ಬ್ರಹ್ಮರ್ಷಿ’ ಪಟ್ಟ ಪಡೆದವರು ವಿಶ್ವಾಮಿತ್ರರು. ಸಪ್ತಋಷಿಗಳಲ್ಲಿ ಒಬ್ಬರಾದ ಇವರು, ಶ್ರೀರಾಮ ಮತ್ತು ಲಕ್ಷ್ಮಣರಿಗೆ ಬಾಲ-ಅತಿಬಲ ವಿದ್ಯೆಗಳನ್ನು ಹಾಗೂ ದಿವ್ಯಾಸ್ತ್ರಗಳನ್ನು ಪ್ರಯೋಗಿಸುವ ರಹಸ್ಯಗಳನ್ನು ಧಾರೆ ಎರೆದರು.

ಇದನ್ನೂ ಓದಿ: ಮನಿ ಪ್ಲಾಂಟ್‌ಗಿಂತಲೂ ಪವರ್‌ಫುಲ್ ಈ ಗಿಡ; ಮನೆಯಲ್ಲಿದ್ದರೆ ಕುಬೇರನ ಕೃಪೆಯಿಂದ ಅದೃಷ್ಟ ಖುಲಾಯಿಸುವುದು ಖಚಿತ!

ವೇದವ್ಯಾಸರು:

ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ, ಮಹಾಭಾರತ ಹಾಗೂ ಅಷ್ಟಾದಶ ಪುರಾಣಗಳನ್ನು ರಚಿಸಿದ ವೇದವ್ಯಾಸರನ್ನು ‘ಗುರುಗಳ ಗುರು’ ಎಂದು ಆರಾಧಿಸಲಾಗುತ್ತದೆ. ಇವರ ಜನ್ಮದಿನವನ್ನೇ ‘ಗುರು ಪೂರ್ಣಿಮೆ’ಯಾಗಿ ಆಚರಿಸಲಾಗುತ್ತದೆ. ಇವರು ತಮ್ಮ ಶಿಷ್ಯರಾದ ಪೈಲ, ಜೈಮಿನಿ, ವೈಶಂಪಾಯನ ಮತ್ತು ಸುಮಂತು ಮುನಿಗಳಿಗೆ ನಾಲ್ಕು ವೇದಗಳನ್ನು ಬೋಧಿಸಿದರು.

ಮಹರ್ಷಿ ವಸಿಷ್ಠ:

ಬ್ರಹ್ಮದೇವರ ಮಾನಸ ಪುತ್ರ ಹಾಗೂ ಸಪ್ತಋಷಿಗಳಲ್ಲಿ ಒಬ್ಬರಾದ ವಸಿಷ್ಠರು ಸೂರ್ಯವಂಶದ ಕುಲಗುರುಗಳು. ಶ್ರೀರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನರಿಗೆ ಆರಂಭಿಕ ವಿದ್ಯಾಭ್ಯಾಸ ನೀಡಿದವರು ಇವರೇ. ರಾಜ ಹರಿಶ್ಚಂದ್ರ, ಭಗೀರಥ ಮತ್ತು ದಿಲೀಪನಿಗೂ ಇವರೇ ಸನ್ಮಾರ್ಗ ತೋರಿದ್ದರು. ಋಗ್ವೇದದ ಏಳನೇ ಮಂಡಲದ ದ್ರಷ್ಟಾರರಾಗಿದ್ದಾರೆ.

ಭಗವಾನ್ ದತ್ತಾತ್ರೇಯ:

ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಂಯೋಜಿತ ಅವತಾರವೇ ಭಗವಾನ್ ದತ್ತಾತ್ರೇಯ. ಇವರು ತಮ್ಮ ಶಿಷ್ಯರಿಗೆ ಬ್ರಹ್ಮಜ್ಞಾನ ಮತ್ತು ಅಷ್ಟಸಿದ್ಧಿಗಳನ್ನು ಕರುಣಿಸಿದರು. ಪರಶುರಾಮ, ಪ್ರಹ್ಲಾದ, ಅಲರ್ಕ, ಕಾರ್ತವೀರ್ಯ ಅರ್ಜುನ ಹಾಗೂ ಯದು ರಾಜನಿಗೆ ಆತ್ಮಜ್ಞಾನ ಮತ್ತು ಪರಮಧರ್ಮದ ತತ್ವಗಳನ್ನು ಬೋಧಿಸಿದ ಜಗದ್ಗುರು ಇವರಾಗಿದ್ದಾರೆ.

ಇವರಲ್ಲದೆ, ವಾಲ್ಮೀಕಿ, ಅಗಸ್ತ್ಯ ಮತ್ತು ಭಾರದ್ವಾಜರಂತಹ ಅನೇಕ ಋಷಿಶ್ರೇಷ್ಠರು ಭಾರತೀಯ ಗುರು ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:47 pm, Sat, 5 September 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ