‘ಟಿಎಂಸಿ ಚಿಹ್ನೆ ವಿವಾದವನ್ನು 3 ತಿಂಗಳೊಳಗೆ ಬಗೆಹರಿಸಿ’; ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷದ ಎರಡು ಬಣಗಳ ನಡುವಿನ ಪಕ್ಷದ ಹೆಸರು ಮತ್ತು ಚಿಹ್ನೆ ವಿವಾದವನ್ನು, ಎದುರಾಳಿ ಬಣವು ತನ್ನ ಉತ್ತರವನ್ನು ಸಲ್ಲಿಸಿದ 3 ತಿಂಗಳೊಳಗೆ ಇತ್ಯರ್ಥಪಡಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಮುಂಬರುವ ಉಪಚುನಾವಣೆಗೂ ಮುನ್ನ ಪಕ್ಷದ ಚಿಹ್ನೆಯನ್ನು ಫ್ರೀಜ್ ಮಾಡುವ ಚುನಾವಣಾ ಆಯೋಗದ ಮಧ್ಯಂತರ ನಿರ್ಧಾರವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಆದೇಶ ಹೊರಬಿದ್ದಿದೆ.

ಮುಖ್ಯಾಂಶಗಳು
- ಸೆಪ್ಟೆಂಬರ್ 18ರಂದು ಟಿಎಂಸಿ ಮೂಲ ಹೆಸರು ಮತ್ತು ಚಿಹ್ನೆ ಫ್ರೀಜ್
- ಎದುರಾಳಿ ಬಣದ ಉತ್ತರ ಸಲ್ಲಿಕೆಯಾದ 3 ತಿಂಗಳೊಳಗೆ ವಿವಾದ ಇತ್ಯರ್ಥಕ್ಕೆ ಸುಪ್ರೀಂ ಆದೇಶ
- ಪ್ರಮಾಣಪತ್ರಗಳ ಶೀಘ್ರ ಪರಿಶೀಲನೆಗೆ AI ತಂತ್ರಜ್ಞಾನ ಬಳಸಲು ಸಲಹೆ
ನವದೆಹಲಿ, ಸೆಪ್ಟೆಂಬರ್ 28: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷ ಇಬ್ಭಾಗವಾಗಿದ್ದು, ಪಕ್ಷದ ಚಿಹ್ನೆಗಾಗಿ ಎರಡೂ ಬಣಗಳ ನಡುವೆ ಹಗ್ಗಜಗ್ಗಾಟ ನಡೆದಿದೆ. ಇದರ ನಡುವೆ, ತೃಣಮೂಲ ಕಾಂಗ್ರೆಸ್‌ನ ಬಣಗಳ ನಡುವಿನ ಚಿಹ್ನೆ ವಿವಾದವನ್ನು 3 ತಿಂಗಳೊಳಗೆ ಇತ್ಯರ್ಥಪಡಿಸುವಂತೆ ಸುಪ್ರೀಂ ಕೋರ್ಟ್ ಇಂದು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಎರಡೂ ಕಡೆಯವರು ಅಗತ್ಯ ಪ್ರತಿಕ್ರಿಯೆಗಳು ಮತ್ತು ಸಾಕ್ಷ್ಯಗಳನ್ನು ಸಲ್ಲಿಸಲು ನಿಗದಿಪಡಿಸಲಾದ 4 ವಾರಗಳ ಕಾಲಾವಕಾಶ ಮುಕ್ತಾಯಗೊಂಡ ನಂತರ ಈ 3 ತಿಂಗಳ ಅವಧಿ ಪ್ರಾರಂಭವಾಗಲಿದೆ ಎಂದು ಕೋರ್ಟ್ ತಿಳಿಸಿದೆ.
ಟಿಎಂಸಿ ಬಣಗಳ ನಡುವಿನ ವಿವಾದದ ನಡುವೆ, ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಹೆಸರು ಮತ್ತು ಅದರ ‘ಹೂವು ಮತ್ತು ಹುಲ್ಲು’ ಚುನಾವಣಾ ಚಿಹ್ನೆಯನ್ನು ಫ್ರೀಜ್ ಮಾಡಿದ ಚುನಾವಣಾ ಆಯೋಗದ ಸೆಪ್ಟೆಂಬರ್ 17ರ ನಿರ್ಧಾರವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸ್ಥಾಪಕಿ ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.
ಇದನ್ನೂ ಓದಿ: ವಂದೇ ಮಾತರಂ ಹಾಡದಿದ್ದರೆ ಶಿಕ್ಷೆ ಇಲ್ಲ: ಸುಪ್ರೀಂ ಕೋರ್ಟ್‌ನಿಂದ ಕೇಂದ್ರಕ್ಕೆ ಖಡಕ್ ಸಂದೇಶ
ಚುನಾವಣಾ ಆಯೋಗದ ಪರ ಹಿರಿಯ ವಕೀಲ ದಾಮಾ ಶೇಷಾದ್ರಿ ನಾಯ್ಡು ವಾದ ಮಂಡಿಸಿ, ಪಕ್ಷದ ಕಾರ್ಯಕರ್ತರಿಂದ ಬರುವ ಅಫಿಡವಿಟ್ಸ್ ಲಕ್ಷಾಂತರ ಸಂಖ್ಯೆಯಲ್ಲಿರುವುದರಿಂದ ಚಿಹ್ನೆ ವಿವಾದಗಳ ಇತ್ಯರ್ಥಕ್ಕೆ ಸಮಯ ಹಿಡಿಯುವುದು ಸಹಜ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಾಗ್ಚಿ ಅವರು, ಈ ವಿಷಯವು ಆಯೋಗದ ಮೆಟ್ಟಿಲೇರಿ ಈಗಾಗಲೇ 3ತಿಂಗಳು ಕಳೆದಿದ್ದು, ಪರಿಶೀಲನೆಗಾಗಿ ಆಯೋಗವು ಎಐ ತಂತ್ರಜ್ಞಾನವನ್ನು ಬಳಸಿ 3 ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸಲಹೆ ನೀಡಿದರು.
ನ್ಯಾಯಾಲಯವು ಸಮಯದ ಚೌಕಟ್ಟನ್ನು ನಿಗದಿಪಡಿಸುವುದಾದರೆ, ಪಕ್ಷಗಳು ತಮ್ಮ ಅಫಿಡವಿಟ್‌ಗಳನ್ನು ಸಲ್ಲಿಸಿದ ದಿನಾಂಕದಿಂದ ಅದನ್ನು ಲೆಕ್ಕಹಾಕಬೇಕು ಎಂದು ವಕೀಲ ನಾಯ್ಡು ಮನವಿ ಮಾಡಿದರು. ಅಲ್ಲದೆ, ಗತಕಾಲದಲ್ಲಿ ಇಂತಹ ಚಿಹ್ನೆ ವಿವಾದಗಳಲ್ಲಿ ಚುನಾವಣಾ ಆಯೋಗ ತೆಗೆದುಕೊಂಡಿದ್ದ ಸಮಯದ ಪಟ್ಟಿಯನ್ನು ಅವರು ಸುಪ್ರೀಂ ಕೋರ್ಟ್‌ಗೆ ಹಸ್ತಾಂತರಿಸಿದರು.
ಮಮತಾ ಬ್ಯಾನರ್ಜಿ ಬಣದ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಕಲ್ಯಾಣ್ ಬಂಡೋಪಾಧ್ಯಾಯ ವಾದ ಮಂಡಿಸಿ, ತಮ್ಮ ಬಣವು ಜುಲೈನಲ್ಲೇ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಿದೆ. ಆದರೆ ಎದುರಾಳಿ ಬಣವು ತನ್ನ ಎದುರು-ಪ್ರತಿಕ್ರಿಯೆಯನ್ನು ಇನ್ನೂ ಸಲ್ಲಿಸಬೇಕಾಗಿದೆ ಎಂದು ಪೀಠದ ಗಮನಕ್ಕೆ ತಂದರು.
ಸುಪ್ರೀಂ ಕೋರ್ಟ್‌ನಲ್ಲಿ ಮಮತಾ ಬ್ಯಾನರ್ಜಿ ಅರ್ಜಿ:
ಮುಂಬರುವ ಉಪಚುನಾವಣೆಗಳಿಗೆ ಮೂಲ ಪಕ್ಷದ ಗುರುತನ್ನು ಫ್ರೀಜ್ ಮಾಡಿ ಸೆಪ್ಟೆಂಬರ್ 17ರಂದು ಮಧ್ಯಂತರ ಆದೇಶ ಹೊರಡಿಸಿದ್ದ ಚುನಾವಣಾ ಆಯೋಗ, ಎರಡು ಬಣಗಳಿಗೆ ಪ್ರತ್ಯೇಕ ಹೆಸರು ಮತ್ತು ಚಿಹ್ನೆಗಳನ್ನು ಹಂಚಿಕೆ ಮಾಡಿದ ಕೆಲವೇ ಗಂಟೆಗಳಲ್ಲಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಆಯೋಗವು ಮಮತಾ ಬ್ಯಾನರ್ಜಿ ಅವರ ಬಣಕ್ಕೆ “ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್” ಎಂದು ಹೆಸರಿಟ್ಟು “ಫುಟ್‌ಬಾಲ್ ಆಟಗಾರ” ಚಿಹ್ನೆಯನ್ನು ಹಂಚಿಕೆ ಮಾಡಿದೆ. ಬಂಡಾಯ ಬಣವನ್ನು “ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್” ಎಂದು ಗುರುತಿಸಿ “ಲಕೋಟೆ” ಚಿಹ್ನೆಯನ್ನು ನೀಡಲಾಗಿದೆ. ಈ ವ್ಯವಸ್ಥೆಯು ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ಸೇರಿದಂತೆ ಮುಂಬರುವ ಉಪಚುನಾವಣೆಗಳಿಗೆ ಅನ್ವಯಿಸಲಿದೆ. ಎರಡೂ ಬಣಗಳು ಪಕ್ಷದ ಹೆಸರು, ಚಿಹ್ನೆ ಮತ್ತು ಸಾಂಸ್ಥಿಕ ನಿಯಂತ್ರಣಕ್ಕೆ ಹಕ್ಕು ಸಾಧಿಸಿದ ನಂತರ ಚುನಾವಣಾ ಆಯೋಗವು ಸೆಪ್ಟೆಂಬರ್ 17ರಂದು ಈ ಆದೇಶ ಹೊರಡಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:27 pm, Mon, 28 September 26




