CET Ranking: ಸೆಪ್ಟೆಂಬರ್ 29ರಂದು ಪರಿಷ್ಕೃತ ಸಿಇಟಿ ರ್ಯಾಂಕಿಂಗ್ ಪ್ರಕಟ
ಸೆಪ್ಟೆಂಬರ್ 29ರಂದು ಪರಿಷ್ಕೃತ ಸಿಇಟಿ ರ್ಯಾಂಕಿಂಗ್ ಪ್ರಕಟ ವಾಗಲಿದ್ದು, ಅಕ್ಟೋಬರ್ 3ರಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿವೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಬೆಂಗಳೂರು: ಸೆಪ್ಟೆಂಬರ್ 29ರಂದು ಪರಿಷ್ಕೃತ ಸಿಇಟಿ (CET) ರ್ಯಾಂಕಿಂಗ್ ಪ್ರಕಟ ವಾಗಲಿದ್ದು, ಅಕ್ಟೋಬರ್ 3ರಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿವೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಸಿಇಟಿ ರ್ಯಾಂಕಿಂಗ್ ಬಿಕ್ಕಟ್ಟು ಹಿನ್ನೆಲೆ
ಪುನಾರಾವರ್ತಿತರ 2021ನೇ ಸಾಲಿನ ಪಿಯು ಅಂಕಗಳನ್ನು 2022ನೇ ಸಾಲಿನ ಸಿಇಟಿಗೆ ಪರಿಗಣಿಸುವ ವಿಚಾರದಲ್ಲಿ ಸಮಸ್ಯೆ ಉದ್ಭವಿಸಿತ್ತು. ಈ ಕುರಿತು ಸಿಇಟಿ ರ್ಯಾಂಕಿಗ್ನಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳ ಪಿಯು ಅಂಕ ಪರಿಗಣಿಸಲ್ಲವೆಂದು ಜುಲೈ 30ರಂದು ಆದೇಶ ಹೊರಡಿಸಿತ್ತು. ರಾಜ್ಯ ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಪುನರಾವರ್ತಿತ ವಿದ್ಯಾರ್ಥಿಗಳು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ ಪುನರಾವರ್ತಿತ ವಿದ್ಯಾರ್ಥಿಗಳ ಪಿಯುಸಿ ಅಂಕವನ್ನು ಪರಿಗಣಿಸುವಂತೆ ಆದೇಶ ನೀಡಿತ್ತು.
ಹೈಕೋರ್ಟ್ 2020-21ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿದ್ದ, ಸಿಇಟಿ ಪರೀಕ್ಷೆಗೆ ಪುನರಾವರ್ತಿತರಾಗಿರುವ ಅಭ್ಯರ್ಥಿಗಳಿಗೆ ವೃತ್ತಿಪರ ಕೋರ್ಸ್ಗಳ ಸೀಟು ಹಂಚಿಕೆ ಮಾಡುವಾಗ ದ್ವಿತೀಯ ಪಿಯುಸಿಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಸಹ ಪರಿಗಣಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೈಕೋರ್ಟ್ ಆದೇಶ ನೀಡಿತ್ತು.
ಆದರೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್ ಮೇಲ್ಮನವಿ ಸಲ್ಲಿಸಲು ಮುಂದಾಗಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ನಿಮ್ಮ ಶಿಕ್ಷಣ ಇಲಾಖೆ ನೀಡಿದ ಪಿಯು ಬೋರ್ಡ್ ಅಂಕಪಟ್ಟಿಯನ್ನೇ ಪರಿಗಣಿಸೊಲ್ಲ ಅಂದರೆ ಹೇಗೆ? ಒಂದು ವರ್ಷ ಮಕ್ಕಳಿಗೆ ಪ್ಲೇಸ್ಮೆಂಟ್ ಇಲ್ಲದಂತಾಗುತ್ತೆ. ಇದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ನೇರ ಹೊಣೆಯಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಒಂದು ವರ್ಷ ಮಕ್ಕಳ ಭವಿಷ್ಯ ಹಾಳಾಗುತ್ತೆ. ಕೋರ್ಟ್ ಆದೇಶವನ್ನ ಪಾಲಿಸದೆ ಮೇಲ್ಮನವಿ ಸಲ್ಲಿಸಿದರೆ ಕೋರ್ಟ್ ಆದೇಶಕ್ಕೂ ಬೆಲೆ ಇಲ್ವಾ ? ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಬೇಡಿ. ನಾವೂ ಕಾನೂನಾತ್ಮಕವಾಗಿ ಹೋರಾಟಕ್ಕೆ ಮುಂದಾಗುತ್ತೇವೆ. ಯಾವ ಮಕ್ಕಳಿಗೂ ಅನ್ಯಾಯವಾಗದಂತೆ ಸಮಿತಿ ರಚಿಸಿ ಎಂದು ಆಗ್ರಹಿಸಿದ್ದರು.
ಈ ಸಂಬಂಧ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡ ಅಧ್ಯಕ್ಷತೆಯಲ್ಲಿ ಐವರ ಸಮಿತಿ ರಚಿಸಿತ್ತು. ಸಮಿತಿ ವರದಿಯನ್ನು ಸಿದ್ದಪಡಿಸಿತ್ತು. ವರದಿಯನ್ನು ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಮುಚ್ಚಿದ ಲಗೋಟೆಯಲ್ಲಿ ಇಂದು ಹೈಕೋರ್ಟ್‌ಗೆ ವರದಿಯನ್ನು ನೀಡಿದರು.
ರಾಜ್ಯದ ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:34 pm, Fri, 23 September 22