SSLC PUC: ವಿಧಾನಸಭೆಯಲ್ಲಿ ಎಸ್ಎಸ್ಎಲ್ಸಿ, ಪಿಯು ಮಂಡಳಿ ವಿಲೀನ ವಿಧೇಯಕ ಅಂಗೀಕಾರ
‘ಎರಡೂ ಮಂಡಳಿಗಳು ವಿಲೀನಗೊಂಡರೂ ಈಗಿರುವ ರೀತಿಯಲ್ಲಿ ಪ್ರತ್ಯೇಕವಾಗಿ ಪಬ್ಲಿಕ್ ಪರೀಕ್ಷೆಗಳು ಮುಂದುವರಿಯುತ್ತವೆ‘ ಎಂದು ಸಚಿವರು ತಿಳಿಸಿದ್ದಾರೆ.
ಬೆಂಗಳೂರು: ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (Karnataka State Secondary Education Examination Board) ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು (Karnataka Pre-University Certificate Examination) ವಿಲೀನಗೊಳಿಸುವ ‘ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ತಿದ್ದುಪಡಿ) ವಿಧೇಯಕ’ಕ್ಕೆ ವಿಧಾನಸಭೆಯು ಗುರುವಾರ (ಸೆ 28) ಅನುಮೋದನೆ ನೀಡಿದೆ. ‘ಎರಡೂ ಮಂಡಳಿಗಳು ವಿಲೀನಗೊಂಡರೂ ಈಗಿರುವ ರೀತಿಯಲ್ಲಿ ಪ್ರತ್ಯೇಕವಾಗಿ ಪಬ್ಲಿಕ್ ಪರೀಕ್ಷೆಗಳು ಮುಂದುವರಿಯುತ್ತವೆ. ಅನಗತ್ಯ ಗೊಂದಲಗಳು ಬೇಡ’ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಸ್ ವಿಧೇಯಕದ ಮೇಲಿನ ಚರ್ಚೆಯ ವೇಳೆ ಸ್ಪಷ್ಟಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಎರಡೂ ಮಂಡಳಿಗಳೂ ಒಗ್ಗೂಡಿದ ನಂತರ ಅದರ ಹೆಸರನ್ನು ‘ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯ ನಿರ್ಣಯ ಮಂಡಳಿ’ ಎಂದು ಬದಲಿಸಲಾಗುವುದು. ಈ ಮಂಡಳಿಯನ್ನು ಓರ್ವ ಐಎಎಸ್ ಅಧಿಕಾರಿ ನಿರ್ವಹಿಸುತ್ತಾರೆ ಎಂದು ಸಚಿವರು ವಿವರಿಸಿದರು.
ಪ್ರಸ್ತುತ ಪಿಯು ಪರೀಕ್ಷಾ ಮಂಡಳಿಯ ನಿರ್ದೇಶಕರು ಹಲವು ಆಡಳಿತ ಮತ್ತು ಶೈಕ್ಷಣಿಕ ಕಾರ್ಯಭಾರವನ್ನು ಹೊರಬೇಕಿದೆ. ಇದು ಶೈಕ್ಷಣಿಕ ಗುಣಮಟ್ಟದ ಮೇಲೆಯೂ ಪರಿಣಾಮ ಬೀರುತ್ತದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸುವ ಉದ್ದೇಶದಿಂದ ಎರಡೂ ಮಂಡಳಿಗಳ ವಿಲೀನಕ್ಕೆ ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದರು.
ನಮ್ಮ ದೇಶದ ಹಲವು ರಾಜ್ಯಗಳಲ್ಲಿ ಪಿಯುಸಿಗೆ ಪ್ರತ್ಯೇಕ ವ್ಯವಸ್ಥೆಯಿಲ್ಲ. 10ನೇ ತರಗತಿ ನಂತರದ ಶಿಕ್ಷಣವನ್ನು 11 ಮತ್ತು 12ನೇ ತರಗತಿ ಎಂದೇ ಕರೆಯಲಾಗುತ್ತದೆ. ಕರ್ನಾಟಕವು ಇದೇ ಮಾದರಿ ಅನುಸರಿಸಲು ಮುಂದಾಗಿದೆ. ಹೊಸ ಶಿಕ್ಷಣ ನೀತಿ (ಎನ್ಇಪಿ) ಪ್ರಕಾರ ಶಿಕ್ಷಣವನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಎಲ್ಕೆಜಿಯಿಂದ 2ನೇ ತರಗತಿ, 3ರಿಂದ 5ನೇ ತರಗತಿ, 6ರಿಂದ 8ನೇ ತರಗತಿ ಹಾಗೂ 9ರಿಂದ 12ನೇ ತರಗತಿಯನ್ನು ಪ್ರತ್ಯೇಕ ವಿಭಾಗಗಳಾಗಿ ಪರಿಗಣಿಸಲಾಗಿದೆ. ಈ ಆಶಯಕ್ಕೆ ಅನುಗುಣವಾಗಿ ವಿಲೀನದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಎರಡೂ ವರ್ಷಗಳ ಹಿಂದೆಯೇ ಈ ವಿಚಾರದ ಬಗ್ಗೆ ಅಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಸ್ತಾಪಿಸಿದ್ದರು. ‘ಶಿಕ್ಷಣ ಇಲಾಖೆಯ ದೀರ್ಘಕಾಲದ ಬೇಡಿಕೆಯಿದು. ಏಕರೂಪದ ಮಂಡಳಿಯು ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ನಡೆಸಬೇಕು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ ಸಂಬಂಧಿಸಿದ ನೀತಿ ನಿರೂಪಣೆಗಾಗಿ ಪ್ರಾಥಮಿಕ ಶಿಕ್ಷಣ ಪರಿಷತ್ ರಚಿಸಲಾಗುವುದು’ ಎಂದು ಸುರೇಶ್ಕುಮಾರ್ ಅಗಸ್ಟ್ 29, 2020ರಲ್ಲಿ ಹೇಳಿದ್ದರು.