ಅತ್ಯಾಚಾರ, ಜಾತಿ ನಿಂದನೆ ಆರೋಪ ಎದುರಿಸುತ್ತಿದ್ದ ಮುನಿರತ್ನಗೆ ಬಿಗ್ ರಿಲೀಫ್: 3 ಪ್ರಕರಣಗಳಲ್ಲಿ ಬಿ ರಿಪೋರ್ಟ್
ಸ್ವಪಕ್ಷದ ಕಾರ್ಯಕರ್ತೆ ಮೇಲೆ ಅತ್ಯಾಚಾರ, ಜಾತಿ ನಿಂದನೆ ಸೇರಿದಂತೆ ಒಟ್ಟು 6 ಪ್ರಕರಣಗಳಲ್ಲಿ ಆರೋಪಿಯಾಗಿರುವ ಶಾಸಕ ಮುನಿರತ್ನಗೆ ಸಿಐಡಿ ಎಸ್ಐಟಿ ಅಧಿಕಾರಿಗಳು ಬಿಗ್ ರಿಲೀಫ್ ನೀಡಿದ್ದಾರೆ. ಮುನಿರತ್ನ ವಿರುದ್ಧದ 3 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಮಾಡಲಾಗಿದೆ. ಆ ಕುರಿತ ಮಾಹಿತಿ ಇಲ್ಲಿದೆ.

ಬೆಂಗಳೂರು, ಸೆಪ್ಟೆಂಬರ್ 4: ಮಹಿಳೆ ಮೇಲೆ ಅತ್ಯಾಚಾರ, ಜಾತಿನಿಂದನೆ ಸೇರಿದಂತೆ ಒಟ್ಟು ಆರು ಕೃತ್ಯಗಳನ್ನು ಎಸಗಿದ ಆರೋಪ ಎದುರಿಸುತ್ತಿರುವ ರಾಜರಾಜೇಶ್ವರಿನಗರ (RR Nagar) ಶಾಸಕ ಮುನಿರತ್ನಗೆ (Munirathna) ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣದ ತನಿಖೆ ನಡೆಸಿದ ಸಿಐಡಿ ಎಸ್ಐಟಿ ಅಧಿಕಾರಿಗಳು ಮೂರು ಪ್ರಕರಣಗಳಲ್ಲಿ ಸೂಕ್ತ ಸಾಕ್ಷ್ಯಧಾರಗಳ ಕೊರತೆ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಆ ಮೂಲಕ, ಅತ್ಯಾಚಾರ ಮಾಡಿಸಿದ್ದರು ಎನ್ನಲಾಗಿದ್ದ ಆರೋಪದಡಿ ತನಿಖೆ ಎದುರಿಸಿದ್ದ ಮುನಿರತ್ನಗೆ ಕೇಸಲ್ಲಿ ಮುಕ್ತಿ ಸಿಕ್ಕಂತಾಗಿದೆ.
ಏನಿದು ಮುನಿರತ್ನ ವಿರುದ್ಧದ ಪ್ರಕರಣ?
2025 ಮೇ 20 ರಂದು ಸುಮಾರು 40 ವರ್ಷ ವಯಸ್ಸಿನ ಮಹಿಳೆ ನಗರದ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶಾಸಕ ಮುನಿರತ್ನ ಸೇರಿದಂತೆ ಅವರ ಬೆಂಬಲಿಗರು ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದರು. ಈ ಬಗ್ಗೆ ಆರ್ಎಂಸಿ ಯಾರ್ಡ್ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸಿದ್ದರು. ನಂತರ ಸರ್ಕಾರ ಪ್ರಕರಣವನ್ನು ಸಿಐಡಿ ಎಸ್ಐಟಿ ತನಿಖೆಗೆ ವಹಿಸಿತ್ತು. ಕಳೆದ ಐದು ತಿಂಗಳಿನಿಂದ ತನಿಖೆ ನಡೆಸಿದ ಎಸ್ಐಟಿ ತಂಡವು ಸಾಕ್ಷ್ಯಧಾರಗಳ ಕೊರತೆ ಹಿನ್ನೆಲೆಯಲ್ಲಿ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಿ. ರಿಪೋರ್ಟ್ ಸಲ್ಲಿಕೆ ಮಾಡಿದೆ.
ಮುನಿರತ್ನ ಹೇಳಿದ್ದೇನು?
ಸಿಐಡಿ ಎಸ್ಐಟಿ ಬಿ ರಿಪೋರ್ಟ್ ಸಲ್ಲಿಸಿದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಮುನಿರತ್ನ, ಇದು ಸತ್ಯಕ್ಕೆ ಸಂದ ಜಯವಾಗಿದೆ. ಕಂಡವರ ಹೆಣ್ಣು ಮಕ್ಕಳಿಂದ ದೂರು ಕೊಡಿಸುವುದನ್ನು ಬಿಡಬೇಕು. ಡಿಕೆ ಸುರೇಶ್ ಸೋತ ನಂತರ, ಕುಸುಮಾ ಸೋತ ನಂತರ ನನ್ನ ವಿರುದ್ಧ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗಿವೆ. ಯಾರಿಗೆ ಯಾವುದೂ ಶಾಶ್ವತವಲ್ಲ, ನಾನು ಎಲ್ಲವನ್ನು ದೇವರಿಗೆ ಬಿಟ್ಟಿದ್ದೇನೆ. ಸುದ್ದಿಗೋಷ್ಠಿ ನಡೆಸಿ, ಎಲ್ಲ ಮಾಹಿತಿಗಳನ್ನು ಹಂಚಿಕೊಳ್ಳುತ್ತೇನೆ ಎಂದರು.
ಇದನ್ನೂ ಓದಿ: ಹೆಣ್ಣಿಗೆ ಶಾಸಕಿಯಾಗುವ ಹುಚ್ಚು ಹಿಡಿದರೆ ಅದನ್ನು ಬಿಡಿಸುವುದು ಸಾಧ್ಯವಿಲ್ಲ: ಮುನಿರತ್ನ, ಬಿಜೆಪಿ ಶಾಸಕ
ಶಾಸಕ ಮುನಿರತ್ನ ವಿರುದ್ದ ಒಟ್ಟು ಆರು ಕೇಸ್ಗಳು ದಾಖಲಾಗಿದ್ದವು. ನಂದಿನಿಲೇಔಟ್ ಠಾಣೆಯಲ್ಲಿ ಮಹಿಳೆಯ ಸೀರೆ ಎಳೆದು ದೌರ್ಜನ್ಯ ಮಾಡಿದ್ದ ಆರೋಪದಡಿ ದೂರು ದಾಖಲಾಗಿದ್ದು, ಈ ಕೇಸ್ನಲ್ಲಿಯೂ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ಹಾಗೆಯೇ ಯಶವಂತಪುರದಲ್ಲಿ ಠಾಣೆಯಲ್ಲಿ ದಾಖಲಾಗಿದ್ದ, ಬೆಂಕಿಯಿಟ್ಟು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿಯೂ ಸಹ ಬಿ. ರಿಪೋರ್ಟ್ ಸಲ್ಲಿಕೆಯಾಗಿದೆ. ಸದ್ಯ ಶಾಸಕ ಮುನಿರತ್ನಗೆ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಇನ್ನುಳಿದ ಮೂರು ಪ್ರಕರಣಗಳಲ್ಲಿ ಎಸ್ಐಟಿ ತನಿಖೆ ಮುಂದುವರಿಯಲಿದೆ.



