AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನ ಹೆರಿಗೆಗೆ ಆಸ್ಪತ್ರೆ ಮಾಡಿಸೋಣ: ಕಿಡಿ ಹೊತ್ತಿಸಿದ ಕಾಂಗ್ರೆಸ್ ಶಾಸಕ ದೇಶಪಾಂಡೆ ಕೀಳು ನುಡಿ

ನಾಲಿಗೆ ಮೇಲಿನ ಹಿಡಿತ ಕಳೆದುಕೊಳ್ಳುವ ರಾಜಕಾರಣಿಗಳು ಅದೆಂತಹ ಅವಾಂತರ ಸೃಷ್ಟಿಸುತ್ತಾರೆ ಎಂಬುದಕ್ಕೆ ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಹಳಿಯಾಳ ಶಾಸಕ ಆರ್‌ವಿ ದೇಶಪಾಂಡೆ ಸಾಕ್ಷಿ. ಹೌದು.. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ಆಸ್ಪತ್ರೆಯ ಕೊರತೆಯ ಬಗ್ಗೆ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ ನಿನ್ನ ಹೆರಿಗೆಗೆ ಆಸ್ಪತ್ರೆ ಮಾಡಿಸೋಣ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಈ ಕೀಳು ಮಟ್ಟದ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ರಮೇಶ್ ಬಿ. ಜವಳಗೇರಾ
|

Updated on:Sep 03, 2025 | 11:02 PM

Share

ಬೆಂಗಳೂರು, (ಸೆಪ್ಟೆಂಬರ್ 03): ಕಾಂಗ್ರೆಸ್‌ನ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಆರ್.ವಿ. ದೇಶಪಾಂಡೆ (RV Deshpande) ಅವರು ವಿವಾದಾಸ್ಪದ ಹೇಳಿಕೆಯೊಂದಿಗೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ಆಸ್ಪತ್ರೆಯ ಕೊರತೆಯ ಬಗ್ಗೆ ಪತ್ರಕರ್ತೆಯೊಬ್ಬರು ಪ್ರಶ್ನಿಸಿದಾಗ, ದೇಶಪಾಂಡೆ ಅವರು ಅತ್ಯಂತ ಅಸಂಬದ್ಧ ಮತ್ತು ಅವಮಾನಕರ ಉತ್ತರ ನೀಡಿದ್ದಾರೆ. “ನಿನ್ನ ಹೆರಿಗೆಗೆ ಆಸ್ಪತ್ರೆ ಮಾಡಿಸೋಣ, ಚಿಂತಿಸಬೇಡ” ಎಂದು ಉಡಾಫೆಯಿಂದ ಮಾತನಾಡಿದ್ದಾರೆ. ದೇಶಪಾಂಡೆಯವರ ಈ ಕೀಳು ನುಡಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.  ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ದೇಶಪಾಂಡೆಯ ದುರಹಂಕಾರದ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಕಾಂಗ್ರೆಸ್‌ನ ಹಿರಿಯ ಶಾಸಕನಿಂದ ಇಂತಹ ಕೀಳುಮಾತು? ಇದೇನಾ ಮಹಿಳೆಯರಿಗೆ ಕೊಡುವ ಗೌರವ?” ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ.

ಇನ್ನು ದೇಶಪಾಂಡೆಯವರ ಈ ಕೀಳುಮಟ್ಟದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದ್ದು, ನೆಟ್ಟಿಗರು ಬಾಯಿಗೆ ಬೈಯುತ್ತಿದ್ದಾರೆ. ಕಾಂಗ್ರೆಸ್ ನ ಓರ್ವ ಹಿರಿಯ ಶಾಸಕನಾಗಿ ಈ ರಿತಿ ಪದಬಳಕೆ ಸಲ್ಲ ಎಂದು ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇನ್ನು ಈ ಬಗ್ಗೆ ರಾಜ್ಯ ಬಿಜೆಪಿ ಪ್ರತಿಕ್ರಿಯಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಆಸ್ಪತ್ರೆ ಸಮಸ್ಯೆ ಕುರಿತು ಪ್ರಶ್ನೆ ಕೇಳಿದ ಮಹಿಳಾ ಪತ್ರಕರ್ತೆಗೆ ನಿನ್ನ ಹೆರಿಗೆ ಬೇರೆ ಕಡೆ ಮಾಡಿಸುವುದಾಗಿ ಉಡಾಫೆಯ ಉತ್ತರವನ್ನು ಕಾಂಗ್ರೆಸ್‌ನ ಹಿರಿಯ ನಾಯಕ, ಶಾಸಕರಾದ ಆರ್‌. ವಿ. ದೇಶಪಾಂಡೆ ನೀಡಿದ್ದಾರೆ. ಶಾಸಕರ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರ ವಿಚಾರದಲ್ಲಿ ಕಾಂಗ್ರೆಸ್‌ನ ಮಹಿಳಾ ವಿರೋಧಿ ಧೋರಣೆ ವ್ಯಕ್ತವಾಗುತ್ತಿದೆ. ಸಮಸ್ಯೆ ಹೇಳಿಕೊಂಡು ಬರುವ ಮಹಿಳೆಯರ ದುಪಟ್ಟಾ ಎಳೆಯುವ ಮುಖ್ಯಮಂತ್ರಿ ಒಂದೆಡೆಯಾದರೆ, ಸಮಸ್ಯೆ ಕುರಿತು ಪ್ರಶ್ನಿಸುವ ಮಹಿಳಾ ಪತ್ರಕರ್ತರಿಗೆ ಉಡಾಫೆಯ ಉತ್ತರ ನೀಡುವ ಕೈ ಶಾಸಕರು ಮತ್ತೊಂದೆಡೆ. ರಾಜ್ಯದಲ್ಲಿ ಮೂಲಭೂತ ಅವಶ್ಯಕತೆಗಳನ್ನು ಕೇಳೋದು ತಪ್ಪಾ? ಅಸಭ್ಯವಾಗಿ ಉತ್ತರ ನೀಡಿದ ಕಾಂಗ್ರೆಸ್ ಶಾಸಕರು ಈ ಕೂಡಲೇ ಕ್ಷಮೆಯಾಚಿಸಬೇಕು ಎಂದಿದೆ.

ಇನ್ನು ಇದನ್ನು ಜೆಡಿಎಸ್ ಸಹ ಖಂಡಿಸಿದ್ದು, ದೇಶಪಾಂಡೆಯವರೇ ನಿಮ್ಮದು ಅದೆಂತಹ ಕೀಳು ಮನಸ್ಥಿತಿ ? ಜಿಲ್ಲೆಗೆ ಒಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಲ್ಪಿಸಿಕೊಡಿ ಅಂತ ಪ್ರಶ್ನೆಮಾಡಿದ ಹಿರಿಯ ಪತ್ರಕರ್ತೆಗೆ “ನಿನ್ನ ಹೆರಿಗೆಯಾಗಲಿ” ಎನ್ನುವುದು, ನೀವು ಸ್ತ್ರೀಯರಿಗೆ ಕೊಡುವ ಗೌರವವೇ ? ಹಿರಿಯ ಶಾಸಕರಾಗಿರುವ ದೇಶಪಾಂಡೆ ಅವರೇ, ನಿಮ್ಮ ಈ ಉದ್ಧಟತನ ಮಾತುಗಳು ಮಹಿಳೆಯರ ಕುಲಕ್ಕೆ ಮಾಡಿರುವ ಅಪಮಾನ. ಈ ಕೂಡಲೇ ಆ ಮಹಿಳಾ ಪತ್ರಕರ್ತೆಗೆ ಕ್ಷಮೆ ಕೇಳಿ ಎಂದು ಆಗ್ರಹಿಸಿದೆ.

ಇದಕ್ಕೆ ಕರ್ನಾಟಕ ಪತ್ರಕರ್ತೆಯರ ಸಂಘವು ಸಹ ದೇಶಪಾಂಡೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿದೆ. ದೇಶಪಾಂಡೆ ಅವರು ಹಿರಿಯರಾಗಿ, ಮಾಜಿ ಸಚಿವರಾಗಿ, ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದುಕೊಂಡು ಇಂತಹ ಉಡಾಫೆ ಹೇಳಿಕೆ ನೀಡಬಾರದಿತ್ತು. ಸಮಾಜದ ಪರವಾಗಿ ಪ್ರಶ್ನೆಯನ್ನು ಎತ್ತಿದ ಪತ್ರಕರ್ತೆಗೆ ಜವಾಬ್ದಾರಿಯಿಂದ ಉತ್ತರಿಸಬೇಕಿತ್ತು. ಅವರ ಈ ನಡೆಯನ್ನು ಸಂಘವು ತೀವ್ರವಾಗಿ ಖಂಡಿಸುತ್ತದೆ. ಹೆಣ್ಣು ಮಕ್ಕಳ ಘನತೆ ಧಕ್ಕೆ ಆಗುವ ರೀತಿ ಮಾತನಾಡಿರುವುದು ಸರಿಯಲ್ಲ. ಕೂಡಲೇ ಅವರ ಕ್ಷಮೆ ಕೇಳಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಆಗ್ರಹಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:51 pm, Wed, 3 September 25