ಬೆಂಗಳೂರು: ಕೊರೊನಾ ಸೋಂಕಿನ ಎರಡನೇ ಅಲೆ ಹೆಚ್ಚಳವಾದ ಕಾರಣ ಮುಂದೂಡಲ್ಪಟ್ಟಿದ್ದ ಎಸ್ಎಸ್ಎಲ್ಸಿ ಪರೀಕ್ಷೆಗೆ ಮುಹೂರ್ತ ನಿಗದಿಯಾಗುವ ಕಾಲ ಹತ್ತಿರ ಬಂದಿದೆ. ಒಂದುವೇಳೆ ಕೊರೊನಾ ಸೋಂಕು ಹೆಚ್ಚಳವಾದರೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ಬಗ್ಗೆ ಯೋಚಿಸಲಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಂದು ಹೇಳಿದ್ದರಾದರೂ ಈಗ ಸೋಂಕು ಇಳಿಮುಖವಾಗುತ್ತಿರುವ ಕಾರಣ ಜುಲೈ ಅಂತ್ಯದಲ್ಲಿ ಪರೀಕ್ಷೆ ಆಯೋಜಿಸುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲಾ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಶಿಕ್ಷಣ ಇಲಾಖೆ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದ್ದು, ಜುಲೈ ಅಂತ್ಯಕ್ಕೆ ಪರೀಕ್ಷೆ ನಡೆಸಲು ಬೇಕಾದ ಸಿದ್ಧತೆಗಳೂ ಚುರುಕುಗೊಂಡಿವೆ ಎನ್ನಲಾಗಿದೆ.
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಈ ಬಾರಿ ಬೇರೆ ಮಾದರಿಯ ಪ್ರಶ್ನೆ ಪತ್ರಿಕೆಗಳನ್ನು ನೀಡುತ್ತಿರುವ ಕಾರಣ ಗೊಂದಲ ಮೂಡದಿರಲೆಂದು ಶಿಕ್ಷಣ ಇಲಾಖೆ ತನ್ನ ಅಧಿಕೃತ ವೆಬ್ಸೈಟ್ sslc.karnataka.gov.in ನಲ್ಲಿ ಮಾದರಿ ಪ್ರಶ್ನೆಪತ್ರಿಕೆಗಳನ್ನು ಪ್ರಕಟಿಸಿದೆ. ಮೂರು ದಿನಗಳ ಹಿಂದೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳ ಪ್ರಶ್ನೆ ಪತ್ರಿಕೆ ನೀಡಲಾಗಿದ್ದು, ಈಗ ಭಾಷಾ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಯನ್ನೂ ಪ್ರಕಟಿಸಲಾಗಿದೆ.
ಈ ಬಾರಿ ಬಹು ಆಯ್ಕೆ ಪ್ರಶ್ನೆಗಳನ್ನು ನೀಡುವ ಕುರಿತು ಈಗಾಗಲೇ ಶಿಕ್ಷಣ ಇಲಾಖೆ ಮಾಹಿತಿ ನೀಡಿದ್ದು, ಎಲ್ಲಾ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನೆಗಳನ್ನು ರೂಪಿಸಲಾಗುವುದು. ಯಾವ ವಿದ್ಯಾರ್ಥಿಯನ್ನೂ ನಪಾಸು ಮಾಡುವ ಉದ್ದೇಶ ನಮಗಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಇದೀಗ ಎಲ್ಲಾ ವಿಷಯಗಳ ಬಹು ಆಯ್ಕೆ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟವಾಗಿದ್ದು, ಪರೀಕ್ಷಾ ಸ್ವರೂಪದ ಬಗ್ಗೆ ಗೊಂದಲವಿರುವ ವಿದ್ಯಾರ್ಥಿಗಳು ಇದನ್ನು ನೋಡಿಕೊಂಡು ಅಭ್ಯಾಸ ಮಾಡಬಹುದಾಗಿದೆ.
ಮಾದರಿ ಪ್ರಶ್ನೆಪತ್ರಿಕೆ ಶಿಕ್ಷಣ ಇಲಾಖೆಯ ವೆಬ್ಸೈಟ್ನಲ್ಲಿ ಲಭ್ಯವಿದ್ದು, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಪ್ರಥಮ ಭಾಷೆ ಕನ್ನಡ, ಪ್ರಥಮ ಭಾಷೆ ಉರ್ದು, ಪ್ರಥಮ ಭಾಷೆ ಇಂಗ್ಲಿಷ್, ಪ್ರಥಮ ಭಾಷೆ ಸಂಸ್ಕೃತ, ದ್ವಿತೀಯ ಭಾಷೆ ಇಂಗ್ಲಿಷ್, ದ್ವಿತೀಯ ಭಾಷೆ ಕನ್ನಡ, ತೃತೀಯ ಭಾಷೆ ಹಿಂದಿ, ತೃತೀಯ ಭಾಷೆ ಇಂಗ್ಲಿಷ್ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆ ನೀಡಲಾಗಿದೆ. ಪ್ರತಿ ವಿಷಯಕ್ಕೆ ತಲಾ 40 ಅಂಕಗಳಂತೆ ಒಟ್ಟು 120 ಅಂಕದ 2 ಪ್ರಶ್ನೆಪತ್ರಿಕೆಗಳನ್ನು ಈ ಬಾರಿ ನೀಡಲಾಗುತ್ತಿದ್ದು, 3 ಗಂಟೆಗಳ ಕಾಲ ಪರೀಕ್ಷೆ ಜರುಗಲಿದೆ. ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳು ಬಹು ಆಯ್ಕೆಗೆ ಸಂಬಂಧಿಸಿದವುಗಳೇ ಆಗಿರಲಿದ್ದು, ಉತ್ತರಗಳನ್ನು OMR ಶೀಟ್ನಲ್ಲಿ ನಮೂದಿಸಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ಒಎಮ್ಆರ್ ಶೀಟ್ ಮಾದರಿಯನ್ನೂ ಇಲಾಖೆ ಪ್ರಕಟ ಮಾಡಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜುಲೈ 3ನೇ ವಾರ ಪರೀಕ್ಷೆ ಖಚಿತವಾಗಿ ನಡೆಯಲಿದ್ದು, 20 ದಿನಗಳ ಮುಂಚೆ ದಿನಾಂಕ ಘೋಷಿಸುವುದಾಗಿ ಈ ಹಿಂದೆಯೇ ಸಚಿವ ಸುರೇಶ್ ಕುಮಾರ್ ಹೇಳಿರುವುದರಿಂದ ಇನ್ನು ಕೆಲವೇ ದಿನಗಳಲ್ಲಿ ಸ್ಪಷ್ಟತೆ ಸಿಗಲಿದೆ. ಸದ್ಯ ಪ್ರಶ್ನೆ ಪತ್ರಿಕೆಗಳನ್ನು ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿ ಅಭ್ಯಾಸ ಮಾಡಲು ಸೂಚನೆ ನೀಡಲಾಗಿದ್ದು, ಶಾಲಾ ಶಿಕ್ಷಕರಿಗೂ ಈ ಕುರಿತು ಕಾರ್ಯ ಪ್ರವೃತ್ತರಾಗುವಂತೆ ತಿಳಿಸಲಾಗಿದೆ.