
ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಅಪಾರ ಪ್ರಮಾಣದ ಪುಸ್ತಕಗಳನ್ನು ಓದುವುದಕ್ಕಿಂತ ‘ಏನು ಓದಬೇಕು’ ಮತ್ತು ‘ಹೇಗೆ ಓದಬೇಕು’ ಎಂಬ ಸ್ಪಷ್ಟತೆ ಹೊಂದುವುದು ಅತ್ಯಂತ ಮುಖ್ಯ. ಪ್ರಸಿದ್ಧ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರ ಪ್ರಕಾರ, ಕೇವಲ ಕೋಚಿಂಗ್ ಇನ್‌ಸ್ಟಿಟ್ಯೂಟ್ ನೀಡುವ ಸಿದ್ಧ ನೋಟ್ಸ್‌ಗಳನ್ನು ನೆಚ್ಚಿಕೊಂಡರೆ ಸಾಲದು. ಬದಲಿಗೆ ಮೂಲಭೂತ ಪರಿಕಲ್ಪನೆಗಳು, ವಿಶ್ಲೇಷಣಾತ್ಮಕ ಚಿಂತನೆಗೆ ಆದ್ಯತೆ ನೀಡಬೇಕು. ಪ್ರಸ್ತುತ ಯುಪಿಎಸ್‌ಸಿ ಪರೀಕ್ಷಾ ಮಾದರಿಯು ವೇಗವಾಗಿ ಬದಲಾಗುತ್ತಿದ್ದು, ಕೇವಲ ಮಾಹಿತಿಯನ್ನು ನೆನಪಿಟ್ಟುಕೊಳ್ಳುವುದಕ್ಕಿಂತ ವಿಷಯಗಳನ್ನು ಆಳವಾಗಿ ಗ್ರಹಿಸಿ ಅನ್ವಯಿಸುವ ಕೌಶಲ್ಯ ಬೆಳೆಸಿಕೊಳ್ಳುವುದು ನಿರ್ಣಾಯಕವಾಗಿದೆ.
UPSC ತಯಾರಿಗೆ ಸೂಕ್ತ ತಳಪಾದ ನಿರ್ಮಿಸಲು 6 ರಿಂದ 12 ನೇ ತರಗತಿಯವರೆಗಿನ NCERT ಪುಸ್ತಕಗಳನ್ನು ಓದುವುದು ಅತ್ಯಗತ್ಯ. ಇವುಗಳ ಮೂಲಕ ಇತಿಹಾಸ, ಭೌಗೋಳಿಕತೆ, ವಿಜ್ಞಾನ, ಅರ್ಥಶಾಸ್ತ್ರ ಹಾಗೂ ರಾಜಕೀಯ ವಿಷಯಗಳ ಮೂಲಭೂತ ಪರಿಕಲ್ಪನೆಗಳ ಬಗ್ಗೆ ಸ್ಪಷ್ಟ ತಿಳುವಳಿಕೆ ಬೆಳೆಯುತ್ತದೆ. ಈ ಅಡಿಪಾಯವಿಲ್ಲದೆ ಕ್ಲಿಷ್ಟಕರವಾದ ವಿಷಯಗಳನ್ನು ಅರ್ಥೈಸಿಕೊಳ್ಳುವುದು ಕಷ್ಟಕರ.
ಅಭ್ಯರ್ಥಿಗಳು ಸರ್ಕಾರಿ ನೀತಿಗಳು, ಯೋಜನೆಗಳು ಮತ್ತು ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಕೇವಲ ಖಾಸಗಿ ಮೂಲಗಳನ್ನು ನಂಬದೆ ಅಧಿಕೃತ ಮಾಹಿತಿಯನ್ನು ಪಡೆಯಬೇಕು. ಈ ನಿಟ್ಟಿನಲ್ಲಿ ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋ (PIB) ಬಿಡುಗಡೆ ಮಾಡುವ ನಿಖರ ಹಾಗೂ ಅಧಿಕೃತ ಲೇಖನಗಳು ಮತ್ತು ಮಾಹಿತಿಯನ್ನು ಪರಿಶೀಲಿಸುವುದು ಪರೀಕ್ಷೆಯ ದೃಷ್ಟಿಯಿಂದ ಅತ್ಯಂತ ಉಪಯುಕ್ತ.
ಸರ್ಕಾರ ಪ್ರಕಟಿಸುವ ಮಾಸಿಕ ನಿಯತಕಾಲಿಕೆಗಳು UPSC ಅಭ್ಯರ್ಥಿಗಳಿಗೆ ಅತ್ಯುತ್ತಮ ಆಕರಗಳಾಗಿವೆ. ಇವು ಮುಖ್ಯ ಪರೀಕ್ಷೆಯಲ್ಲಿ (Mains) ಗುಣಮಟ್ಟದ ಉತ್ತರಗಳನ್ನು ಬರೆಯಲು, ಪ್ರಬಂಧಗಳಿಗೆ (Essays) ಅಗತ್ಯವಿರುವ ಉದಾಹರಣೆಗಳು, ಅಂಕಿಅಂಶಗಳು ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ವಿಶೇಷವಾಗಿ ನೆರವಾಗುತ್ತವೆ.
UPSC ಪರೀಕ್ಷೆಯಲ್ಲಿ ಯಾವುದೇ ವಿಷಯವನ್ನು ಒಂದೇ ಕೋನದಿಂದ ನೋಡುವ ಬದಲು ಅದರ ಸಾಧಕ-ಬಾಧಕಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ಪ್ರಮುಖ ದಿನಪತ್ರಿಕೆಗಳು ಮತ್ತು ವೆಬ್‌ಸೈಟ್‌ಗಳಲ್ಲಿನ ಸಂಪಾದಕೀಯಗಳನ್ನು (Editorials) ಪ್ರತಿದಿನ ಓದಬೇಕು. ಇದು ಅಭ್ಯರ್ಥಿಗಳಲ್ಲಿ ವಿಶ್ಲೇಷಣಾತ್ಮಕ ಚಿಂತನೆ ಮತ್ತು ಸಮತೋಲಿತ ದೃಷ್ಟಿಕೋನವನ್ನು ಬೆಳೆಸಲು ಸಹಾಯ ಮಾಡುತ್ತದೆ.
ಭಾರತದ ಆರ್ಥಿಕತೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಕೇಂದ್ರ ಬಜೆಟ್ ಮತ್ತು ಆರ್ಥಿಕ ಸಮೀಕ್ಷೆಯನ್ನು (Economic Survey) ಆಳವಾಗಿ ಅಧ್ಯಯನ ಮಾಡುವುದು ಅತ್ಯಗತ್ಯ. ಆರ್ಥಿಕ ಸಮೀಕ್ಷೆಯ ಮೂಲಕ ದೇಶದ ಕಳೆದ ವರ್ಷದ ಆರ್ಥಿಕ ಸಾಧನೆಗಳನ್ನು ತಿಳಿಯಬಹುದು. ಹಾಗೆಯೇ ಬಜೆಟ್ ಮೂಲಕ ಮುಂಬರುವ ಅವಧಿಯಲ್ಲಿ ಸರ್ಕಾರವು ಯಾವ ವಲಯಗಳಿಗೆ ಆದ್ಯತೆ ನೀಡುತ್ತಿದೆ ಎಂಬುದನ್ನು ಗ್ರಹಿಸಬಹುದು.
ಇಂಡಿಯಾ ಇಯರ್ ಬುಕ್ ನಂತಹ ಅಧಿಕೃತ ಉಲ್ಲೇಖ ಪುಸ್ತಕಗಳು ಭಾರತದ ವಿವಿಧ ರಾಜ್ಯಗಳು, ಕೇಂದ್ರ ಸಚಿವಾಲಯಗಳು, ಸರ್ಕಾರಿ ನೀತಿಗಳು, ಭೌಗೋಳಿಕ ಅಂಶಗಳು ಹಾಗೂ ತಾಂತ್ರಿಕ ಕ್ಷೇತ್ರಗಳ ಬೆಳವಣಿಗೆಯ ವಿವರಗಳನ್ನು ಕಲಿಯಲು ಬಹಳ ಉಪಯುಕ್ತವಾಗಿವೆ.
ನೂರಾರು ಪುಸ್ತಕಗಳು ಮತ್ತು ಟಿಪ್ಪಣಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಬದಲು, ಸೀಮಿತ ಹಾಗೂ ವಿಶ್ವಾಸಾರ್ಹ ಮೂಲಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಪದೇ ಪದೇ ಪುನರಾವರ್ತನೆ (Revision) ಮಾಡುವುದು ಯಶಸ್ಸಿನ ಸೂತ್ರವಾಗಿದೆ. ನೀವು ಎಷ್ಟು ಪುಸ್ತಕಗಳನ್ನು ಓದಿದ್ದೀರಿ ಎನ್ನುವುದಕ್ಕಿಂತ, ಓದಿದ್ದನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡು ಪ್ರಶ್ನೆಗಳಿಗೆ ಅನುಗುಣವಾಗಿ ಅನ್ವಯಿಸುತ್ತೀರಿ ಎಂಬುದು ಮುಖ್ಯ ಎನ್ನುವುದೇ ಐಎಎಸ್ ಅವನೀಶ್ ಶರಣ್ ಅವರ ಸಲಹೆಯ ಸಾರಾಂಶ.
ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:20 pm, Tue, 18 August 26