ಸಿನಿಮಾದಲ್ಲಿ ಕಥೆ, ಚಿತ್ರಕಥೆ, ನಟನೆ, ಸಂಭಾಷಣೆ, ಸಂಗೀತ ಎಷ್ಟು ಮುಖ್ಯವೋ, ಅಷ್ಟೇ ಮಹತ್ತ್ವದ ಪಾತ್ರವಹಿಸುವುದು ಡಬ್ಬಿಂಗ್. ನಟ, ನಟಿಯರು, ಕಲಾವಿದರು, ಸಂಗೀತಗಾರರಷ್ಟೇ ಮುಖ್ಯ ಪಾತ್ರ ಡಬ್ಬಿಂಗ್ ಕಲಾವಿದರದು. ಒಂದು ಕೃತಿಗೆ ದನಿಯ ಮೂಲಕ ಜೀವ, ಭಾವ ತುಂಬಲು ಒಬ್ಬ ಉತ್ತಮ ಡಬ್ಬಿಂಗ್ ಕಲಾವಿದನಿಂದ (Dubbing Artist) ಮಾತ್ರ ಸಾಧ್ಯ. ಹಾಗಾಗಿ ಡಬ್ಬಿಂಗ್ ಸಹ ಒಂದು ಕಲೆ. ಅದು ಎಲ್ಲರಿಗೂ ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ಇಂಥ ಡಬ್ಬಿಂಗ್ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ತೊಡಗಿಸಿಕೊಂಡು, ಡಬ್ಬಿಂಗ್ ನಿರ್ದೇಶಕರಾಗಿ-ಕಲಾವಿದರಾಗಿ ಕಾರ್ಯನಿರತರಾಗಿರುವ ಕನ್ನಡದ ಅಪೂರ್ವ ಸಾಧಕ ಸುದರ್ಶನ್ ಕುಮಾರ್ (Sudarshan Kumar). ಡಬ್ಬಿಂಗ್ ಕ್ಷೇತ್ರದಲ್ಲಿ ಇವರದು ಅಪ್ರತಿಮ ಸಾಧನೆ. ಭಾರತೀಯ ಚಲನಚಿತ್ರದ ಹೆಸರಾಂತ ನಾಯಕನಟರಿಗೆ ಕಂಠದಾನ ಮಾಡಿದ್ದಾರೆ ಇವರು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ತುಳು, ಕೊಂಕಣಿ, ಬೆಂಗಾಲಿ ಸೇರಿ ಹಲವಾರು ಭಾಷೆಗಳ ಸುಮಾರು 3700 ಚಲನಚಿತ್ರಗಳಿಗೆ ಡಬ್ಬಿಂಗ್, ಅಷ್ಟೇ ಅಲ್ಲದೆ 15000ಕ್ಕೂ ಹೆಚ್ಚು ಜಾಹೀರಾತುಗಳಿಗೆ, ನೂರಾರು ಕಾರ್ಟೂನ್‌ಗಳಿಗೆ ದನಿಯಾಗಿದ್ದಾರೆ.
ಸುದರ್ಶನ್ ಕುಮಾರ್ ಡಬ್ಬಿಂಗ್ ನಿರ್ದೇಶಕ ಸಹ ಹೌದು. ಡಬ್ಬಿಂಗ್‌ಗಾಗಿ ಇವರಿಗೆ ರಾಜ್ಯ ಪ್ರಶಸ್ತಿಯೂ ಲಭಿಸಿದೆ. ಇವರ ನಾಯಕತ್ವದಲ್ಲಿ ಧ್ವನಿಯ ಬಗ್ಗೆ, ಡಬ್ಬಿಂಗ್ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಮಂದಿಗೆ ಡಬ್ಬಿಂಗ್ ಹಾಗೂ ವಾಯ್ಸ್ ಓವರ್ ತರಬೇತಿ ನೀಡಲಾಗುತ್ತದೆ. ಈ ಕಾರ್ಯಕ್ಕೆ ಇವರ ಜೊತೆ ಕೈಜೋಡಿಸಿರುವುದು ಖ್ಯಾತ ಪತ್ರಕರ್ತ-ಸುದ್ದಿ ನಿರೂಪಕ ಗೌರೀಶ್ ಅಕ್ಕಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ಮತ್ತು ಆಲ್ಮಾ ಮೀಡಿಯಾ ಸ್ಕೂಲ್‌ನ ನೇತೃತ್ವ ವಹಿಸಿಕೊಂಡಿರುವ ಗೌರೀಶ್ ಅಕ್ಕಿ.
ಸುದರ್ಶನ್ ಅವರ ‘ವಾಯ್ಸ್ ವೆನ್ಯು’ ಸಂಸ್ಥೆ ಹಾಗೂ ಗೌರೀಶ್ ಅಕ್ಕಿ ಅವರ ‘ಆಲ್ಮಾ ಮೀಡಿಯಾ ಸ್ಕೂಲ್’ ಜಂಟಿಯಾಗಿ 18 ದಿನಗಳ ಡಬ್ಬಿಂಗ್ ಮತ್ತು ವಾಯ್ಸ್ ಓವರ್ ಕಾರ್ಯಾಗಾರವನ್ನು ಆಯೋಜಿಸುತ್ತಿದೆ. ಮುಂದಿನ ಸೋಮವಾರ ಮೇ 9 ರಿಂದ ಆರಂಭವಾಗಲಿರುವ ಈ ಕಾರ್ಯಾಗಾರ ಜಯನಗರದಲ್ಲಿರುವ ಆಲ್ಮಾ ಮೀಡಿಯಾ ಸ್ಕೂಲ್ ಮತ್ತು ಬಸವೇಶ್ವರನಗರದಲ್ಲಿರುವ ವಾಯ್ಸ್ ವೆನ್ಯು ಡಬ್ಬಿಂಗ್ ಸ್ಟುಡಿಯೋದಲ್ಲಿ ನಡೆಯಲಿದೆ.
ಮೊದಲ ಐದು ದಿನ ಗೌರೀಶ್ ಅಕ್ಕಿ ಅವರಿಂದ ವಾಯ್ಸ್ ಓವರ್ ತರಬೇತಿ ಹಾಗೂ ಮಿಕ್ಕ ದಿನಗಳಲ್ಲಿ ಸುದರ್ಶನ್ ಅವರಿಂದ ಡಬ್ಬಿಂಗ್ ತರಬೇತಿ ಇರುತ್ತದೆ. ಆಸಕ್ತರು ಯಾರು ಬೇಕಾದರೂ ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬಹುದು, ಇದಕ್ಕೆ ವಯಸ್ಸಿನ ಮಿತಿಯಿಲ್ಲ. ಆಸಕ್ತರು ಕೂಡಲೇ ನೋಂದಾಯಿಸಿಕೊಳ್ಳಲು, ಹೆಚ್ಚಿನ ಮಾಹಿತಿ ತಿಳಿಯಲು ಈ ಸಂಖ್ಯೆಗೆ ಕರೆಮಾಡಬಹುದು: 76187 46667
ಬಹುತೇಕರಿಗೆ ತಮ್ಮ ದನಿ ಬಹಳ ಚೆನ್ನಾಗಿದೆ, ವಿಶಿಷ್ಟವಾಗಿದೆ; ಸಿನಿಮಾ ಕಲಾವಿದರಿಗೆ ತಾವೂ ದನಿ ನೀಡಬೇಕು. ಚಲನಚಿತ್ರ, ಧಾರಾವಾಹಿ, ಕಾರ್ಟೂನ್, ಜಾಹೀರಾತುಗಳಲ್ಲಿ ಡಬ್ಬಿಂಗ್ ಕಲಾವಿದರಾಗಿ ಕೆಲಸ ಮಾಡಬೇಕು ಎಂಬ ಆಸಕ್ತಿ, ಅದಮ್ಯ ಆಸೆ ಇರುತ್ತದೆ. ಆದರೆ ಅವರಿಗೆಲ್ಲ ಕಲಿಕೆಯ ದಾರಿ ಅಸ್ಪಷ್ಟವಾಗಿರುತ್ತದೆ. ಸೂಕ್ತ ಧ್ವನಿ ಇದ್ದರೂ ಅದನ್ನು ಹೇಗೆ ಬಳಸಿಕೊಳ್ಳಬೇಕು, ದುಡಿಮೆಯ ಮಾರ್ಗವಾಗಿ ಪರಿವರ್ತಿಸಿಕೊಳ್ಳುವುದು ಹೇಗೆ ಎಂಬುದು ಗೊತ್ತಿರುವುದಿಲ್ಲ. ಮಾರ್ಗದರ್ಶನದ ಕೊರತೆ ಕಾಡುತ್ತಿರುತ್ತದೆ.
ಅಂಥವರಿಗೆಲ್ಲ ಕಲಿಯಲು ಇದು ಸಕಾಲ. ಇಂಥ ಇಬ್ಬರು ಮಾರ್ಗದರ್ಶಕರ ಅಡಿಯಲ್ಲಿ ತರಬೇತಿ ಪಡೆಯುವುದು ನಿಜಕ್ಕೂ ಒಳ್ಳೆಯ ಅವಕಾಶ . ಡಬ್ಬಿಂಗ್, ವಾಯ್ಸ್ ಓವರ್.. ಒಟ್ಟಾರೆ ಧ್ವನಿಯನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು, ಧ್ವನಿಯ ಶಕ್ತಿಯನ್ನು ಅರಿತುಕೊಳ್ಳಲು ಇದೊಂದು ಯುಕ್ತ ವೇದಿಕೆ. ಆಸಕ್ತರು ಭಾಗವಹಿಸಿ.
ಹೆಚ್ಚಿನ ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ