Academic Bank of Credits : ಹೊಸ ಶಿಕ್ಷಣ ನೀತಿಯಡಿಯಲ್ಲಿ ವಿದ್ಯಾರ್ಥಿಗಳಿಗೆ ಡಿಜಿ ಲಾಕರ್ ವ್ಯವಸ್ಥೆ, ಇದು ವಿದ್ಯಾರ್ಥಿಗಳಿಗೆ ಹೇಗೆ ಪ್ರಯೋಜನಕಾರಿ?
ಭಾರತ ಸರ್ಕಾರವು ಜನರಲ್ಲಿ ಶಿಕ್ಷಣವನ್ನು ಉತ್ತೇಜಿಸಲು ಜಾರಿಗೆ ತಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈಗಾಗಲೇ ಕೆಲವು ವಿಶ್ವವಿದ್ಯಾನಿಲಯವು ಅನುಷ್ಠಾನಕ್ಕೆ ತಂದಿದೆ. ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್ ಸ್ಥಾಪಿಸಲಾಗಿದೆ. ಹಾಗಾದ್ರೆ ಈ ಯೋಜನೆಯ ವಿಶೇಷತೆಯೇನು? ಇದರಿಂದ ವಿದ್ಯಾರ್ಥಿಗಳಿಗಾಗುವ ಲಾಭಗಳೇನು? ಎನ್ನುವುದರ ಸಂಪೂರ್ಣ ಮಾಹಿತಿಯೂ ಇಲ್ಲಿದೆ..
ಕೇಂದ್ರ ಸರ್ಕಾರವು 2020 ರಲ್ಲಿ ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ಜಾರಿಗೆ ತಂದಿದೆ. ಈ ರಾಷ್ಟ್ರೀಯ ಶಿಕ್ಷಣ ನೀತಿಯಾನುಸಾರವಾಗಿ ಭಾರತ ಕೇಂದ್ರಿತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದಲ್ಲದೆ, ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ನಮ್ಮ ರಾಷ್ಟ್ರವನ್ನು ಸುಸ್ಥಿರ ಮತ್ತು ಶೈಕ್ಷಣಿಕವಾಗಿ ಮುನ್ನೆಡೆಸುವ ಗುರಿಯನ್ನು ಹೊಂದಿದೆ. ಇದರಡಿಯಲ್ಲಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಮಾರ್ಗಗಳನ್ನು ಆಯ್ಕೆ ಮಾಡಲು ಮತ್ತು ಮಾರ್ಪಡಿಸಲು ಶೈಕ್ಷಣಿಕ ನಮ್ಯತೆಯನ್ನು ಒದಗಿಸುವ ಮೂಲಕ ಜ್ಞಾನದ ಹಸಿವನ್ನು ನೀಗಿಸಲು “ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್” ಸ್ಥಾಪಿಸಲಾಗಿದ್ದು, ಇದು ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಿದೆ.
ಏನಿದು ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್?
2020 ರಲ್ಲಿ ಜಾರಿಗೆ ತಂದ ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ’ಯಡಿಯಲ್ಲಿ ಬರುವ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಸ್ಥಾಪಿಸಲಾಗಿದೆ. ಇದು ವಾಣಿಜ್ಯ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತದೆ, ಅಲ್ಲಿ ವಿದ್ಯಾರ್ಥಿಗಳು ಗ್ರಾಹಕರಾಗುತ್ತಾರೆ ಮತ್ತು ಎಬಿಸಿಯೂ ಈ ವಿದ್ಯಾರ್ಥಿಗಳಿಗೆ ಹಲವಾರು ಸೇವೆಗಳನ್ನು ನೀಡುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಅವರು ಗಳಿಸಿದ ಕ್ರೆಡಿಟ್‌ಗಳ ಮೂಲಕ ಅಳೆಯಲಾಗುತ್ತದೆ.
ವಿದ್ಯಾರ್ಥಿಗಳಿಗೆ ಆಗಮನ ಹಾಗೂ ನಿರ್ಗಮನಕ್ಕೂ ಅವಕಾಶ
ಹೊಸ ಶಿಕ್ಷಣ ನೀತಿಯಲ್ಲಿ ಪದವಿ ಪೂರ್ವ ಮತ್ತು ಪದವಿ ಶಿಕ್ಷಣವು ಮೂರು ಅಥವಾ ನಾಲ್ಕು ವರ್ಷಗಳ ಅವಧಿಯಾಗಿದೆ. ಇಲ್ಲಿ ವಿದ್ಯಾರ್ಥಿಗಳು ಪೂರ್ಣ ಕೋರ್ಸ್ ಮುಗಿಸದೆ ಮಧ್ಯದಲ್ಲಿ ಕೋರ್ಸ್‌ನಿಂದ ನಿರ್ಗಮಿಸುವ ಅವಕಾಶವಿದೆ. ಅದಲ್ಲದೆ ತನ್ನ ವೈಯುಕ್ತಿಕ ಕಾರಣಗಳಿಂದ ವಿದ್ಯಾರ್ಥಿಗಳು ಅರ್ಧಕ್ಕೆ ನಿಲ್ಲಿಸಿದ ಶಿಕ್ಷಣವನ್ನು ಮುಂದುವರೆಸುವ ಅವಕಾಶವು ಇದೆ. ಈ ವೇಳೆಯಲ್ಲಿ ತಮ್ಮ ಹಿಂದಿನ ಶೈಕ್ಷಣಿಕ ವರ್ಷದ ಸ್ಕೋರ್ ಗಳು ಹಾಗೆ ಇರಲಿದ್ದು, ಕ್ರೆಡಿಟ್ ಸ್ಕೋರ್ ಗಳನ್ನು ಅಂತಿಮ ವರ್ಷಕ್ಕೆ ಮತ್ತೆ ಸೇರಿಸಿ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.
ಇದನ್ನೂ ಓದಿ: ಪ್ರತಿಯೊಬ್ಬ ವಿದ್ಯಾರ್ಥಿಯು ಈ ಸಿನಿಮಾಗಳನ್ನು ನೋಡಲೇಬೇಕು
ವಿದ್ಯಾರ್ಥಿಗಳಿಗೆ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ನಿಂದಾಗುವ ಪ್ರಯೋಜನಗಳು
ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ನಡಿಯಲ್ಲಿ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಗಳಿಸಿದ ಕ್ರೆಡಿಟ್‌ಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಡಲಾಗುತ್ತದೆ. ಸಂಗ್ರಹವಾದ ವಿದ್ಯಾರ್ಥಿಗಳ ಕ್ರೆಡಿಟ್ ಸ್ಕೋರ್‌ಗಳನ್ನು ಬೇರೊಂದು ವಿಷಯದಲ್ಲಿ ಗಳಿಸಿದ ಸ್ಕೋರ್ ಜೊತೆಗೆ ಸೇರಿಸಬಹುದು. ಇಲ್ಲದಿದ್ದರೆ ಬೇರೆ ವಿಷಯಕ್ಕೆ ವರ್ಗಾವಣೆ ಮಾಡುವ ಅವಕಾಶವಿದೆ. ಆದರೆ ವಿದ್ಯಾರ್ಥಿಗಳ ಕ್ರೆಡಿಟ್ ಅನ್ನು ನವೀಕರಿಸುವ ಪ್ರಕ್ರಿಯೆಯು ನಿಧಾನವಾಗಿದ್ದರೂ, ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಿದೆ. ವಿದ್ಯಾರ್ಥಿಗಳ ಈ ಕ್ರೆಡಿಟ್ ಸ್ಕೋರ್ ಗಳು ಸರಿಸುಮಾರು ಏಳು ವರ್ಷಗಳವರೆಗೆ ಸಕ್ರಿಯವಾಗಿರುತ್ತವೆ, ಹೀಗಾಗಿ ತಮ್ಮ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಲು ಅವಕಾಶವನ್ನು ನೀಡುತ್ತದೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.