ಛತ್ತೀಸ್‌ಗಢ, ಮಧ್ಯಪ್ರದೇಶದ ಸೋಲಿನಿಂದ ನಿರಾಸೆಯಾಗಿದೆ, ತೆಲಂಗಾಣ ಜನತೆಗೆ ಧನ್ಯವಾದ: ಮಲ್ಲಿಕಾರ್ಜುನ ಖರ್ಗೆ
ಜನಾದೇಶಕ್ಕಾಗಿ ತೆಲಂಗಾಣ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ. ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನಮಗೆ ಮತ ನೀಡಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ಈ ಮೂರು ರಾಜ್ಯಗಳಲ್ಲಿ ನಮ್ಮ ಸಾಧನೆ ನಿರಾಶಾದಾಯಕವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನವದೆಹಲಿ, ಡಿಸೆಂಬರ್ 3: ತೆಲಂಗಾಣದಲ್ಲಿ (Telangana) ಕಾಂಗ್ರೆಸ್ಗೆ (Congress) ಅಧಿಕಾರ ನೀಡಿದ್ದಕ್ಕಾಗಿ ಅಲ್ಲಿನ ಜನತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಭಾನುವಾರ ಧನ್ಯವಾದ ಅರ್ಪಿಸಿದ್ದಾರೆ. ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಪಕ್ಷದ ಸಾಧನೆ ನಿರಾಶಾದಾಯಕವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಈ ಸೋಲು ತಾತ್ಕಾಲಿಕ ಹಿನ್ನಡೆ ಎಂದು ಹೇಳಿರುವ ಅವರು, ಇವುಗಳನ್ನು ನಿವಾರಿಸಿ ಮತ್ತು ಬಿಜೆಪಿ ವಿರುದ್ಧ ಲೋಕಸಭೆ ಚುನಾವಣೆಗೆ ಸಂಪೂರ್ಣವಾಗಿ ಸಿದ್ಧರಾಗಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಮತ ಎಣಿಕೆಯ ಕೊನೆ ಹಂತದ ಟ್ರೆಂಡ್‌ಗಳ ಪ್ರಕಾರ, ತೆಲಂಗಾಣದಲ್ಲಿ ಕೆ ಚಂದ್ರಶೇಖರ ರಾವ್ ನೇತೃತ್ವದ ಬಿಆರ್‌ಎಸ್ ಸರ್ಕಾರವನ್ನು ಮಣಿಸಿ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಸಜ್ಜಾಗಿದೆ. ಆದರೆ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಮತ್ತು ಛತ್ತೀಸ್‌ಗಢದಲ್ಲಿ ಅದು ಅಧಿಕಾರವನ್ನು ಕಳೆದುಕೊಳ್ಳಲಿದೆ.
ಜನಾದೇಶಕ್ಕಾಗಿ ತೆಲಂಗಾಣ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ. ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನಮಗೆ ಮತ ನೀಡಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ಈ ಮೂರು ರಾಜ್ಯಗಳಲ್ಲಿ ನಮ್ಮ ಸಾಧನೆ ನಿರಾಶಾದಾಯಕವಾಗಿದೆ. ಆದರೆ ದೃಢಸಂಕಲ್ಪದಿಂದ ನಾವು, ಈ ಮೂರು ರಾಜ್ಯಗಳಲ್ಲಿ ನಮ್ಮನ್ನು ನಾವು ಪುನರ್ನಿರ್ಮಿಸಲು ಮತ್ತು ಪುನರುಜ್ಜೀವನಗೊಳಿಸಲು ನಮ್ಮ ಬಲವಾದ ಸಂಕಲ್ಪವನ್ನು ಪುನರುಚ್ಚರಿಸುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.
ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಖರ್ಗೆ, ಕಾಂಗ್ರೆಸ್ ಪಕ್ಷವು ಈ ನಾಲ್ಕು ರಾಜ್ಯಗಳಲ್ಲಿ ಉತ್ತಮ ಅಭಿಯಾನವನ್ನು ನಡೆಸಿದೆ. ನಮ್ಮ ಲಕ್ಷಾಂತರ ಕಾರ್ಯಕರ್ತರ ಶ್ರಮವನ್ನು ನಾನು ಗುರುತಿಸುತ್ತೇನೆ ಮತ್ತು ಪ್ರಶಂಸಿಸುತ್ತೇನೆ ಎಂದು ಖರ್ಗೆ ಹೇಳಿದರು.
ಇದನ್ನೂ ಓದಿ: ವಿಧಾನಸಭೆ ಚುನಾವಣೆ ಫಲಿತಾಂಶ: ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಬಿಜೆಪಿ ತೆಕ್ಕೆಗೆ, ತೆಲಂಗಾಣಕ್ಕೆ ಕಾಂಗ್ರೆಸ್ ‘ಗ್ಯಾರಂಟಿ’
ಐದು ರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಯ ಪೈಕಿ ನಾಲ್ಕರ ಫಲಿತಾಂಶ ಬಹುತೇಕ ಪ್ರಕಟಗೊಂಡಿದ್ದು, ಮೂರು ರಾಜ್ಯಗಳಲ್ಲಿ ಬಿಜೆಪಿ ಬಹುಮತ ಗಳಿಸಿದೆ. ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಮ್ಯಾಜಿಕ್ ಸಂಖ್ಯೆ ದಾಟಿರುವ ಬಿಜೆಪಿ ಮಧ್ಯಪ್ರದೇಶದಲ್ಲಿ ಅಧಿಕಾರ ಉಳಿಸಿಕೊಂಡಿದೆ. ತೆಲಂಗಾಣದಲ್ಲಿ ‘ಗ್ಯಾರಂಟಿ’ ಯೋಜನೆಗಳ ಮೂಲಕ ಅಬ್ಬರದ ಪ್ರಚಾರ ನಡೆಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತ ದೊರೆತಿದೆ.
ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ