Assam Assembly polls: ಕೇವಲ 90 ವೋಟರ್ಗಳಿರುವ ಮತಗಟ್ಟೆಯಲ್ಲಿ 181 ವೋಟ್ಗಳ ಚಲಾವಣೆ! 6 ಅಧಿಕಾರಿಗಳು ಸಸ್ಪೆಂಡ್
ಆಯೋಗವು ಅಸ್ಸಾಂನಲ್ಲಿ ಈ ವರ್ಷ ಮರು-ಮತದಾನ ಘೋಷಿಸಿರುವ ಎರಡನೇ ನಿದರ್ಶನ ಇದಾಗಿದೆ. ಇದಕ್ಕೂ ಮೊದಲು ರತಾಬರಿ ಕ್ಷೇತ್ರದಲ್ಲಿ ಹೊಸ ಸುತ್ತಿನ ಮತದಾನ ನಡೆಸುವಂತೆ ಆದೇಶಿಸಲಾಗಿತ್ತು.
ಗುವಹಾಟಿ: ಆಸ್ಸಾಮಿನ ದಿಮಾ ಹಸಾವೊ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಕೇವಲ 90 ನೋಂದಾಯಿತ ಮತರದಾರರಿದ್ದರೂ 181 ವೋಟುಗಳು ಚಲಾವಣೆಯಾಗಿರುವ ಹಿನ್ನೆಲೆಯಲ್ಲಿ 6 ಅಧಿಕಾರಿಗಳನ್ನು ಚುನಾವಣಾ ಆಯೋಗವು ಸಸ್ಪೆಂಡ್ ಮಾಡಿದೆ. ಏಪ್ರಿಲ್ 1 ರಂದು ಅಸ್ಸಾಂ ವಿಧಾನಸಭೆಗೆ ಎರಡನೇ ಹಂತದ ಚುನಾವಣೆ ನಡೆದ ಸದರಿ ಜಿಲ್ಲೆಯ ಹಫ್ಲಾಂಗ್ ಹೆಸರಿನ ಮತಕ್ಷೇತ್ರದಲ್ಲಿ ಈ ಅಕ್ರಮ ಜರುಗಿದೆ. 2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಬೀರ್ ಭದ್ರ ಹಗ್ಜೇರ್ ಅವರು ಗೆಲುವು ದಾಖಲಿಸಿದ್ದ ಕ್ಷೇತ್ರದಲ್ಲಿ ಶೇಕಡಾ 74ರಷ್ಟು ಮತದಾನವಾಗಿದೆ. ಮೂಲಗಳ ಪ್ರಕಾರ ಮುಖ್ಯ ಮತಗಟ್ಟೆಯೊಂದಕ್ಕೆ ಪೂರಕ ಮತಗಟ್ಟೆಯಾಗಿದ್ದ ಹಫ್ಲಾಂಗ್ನಲ್ಲಿ ಆಯೋಗವು ಮರು-ಮತದಾನ ನಡೆಸುವ ಆದೇಶವನ್ನು ಜಾರಿಗೊಳಿಸುವ ನಿರೀಕ್ಷೆಯಿದೆ.
ಆಯೋಗದ ಎದುರು ಹೇಳಿಕೆಗಳನ್ನು ದಾಖಲಿಸಿರುವ ಪ್ರಿಸೈಡಿಂಗ್ ಮತ್ತು ಪ್ರಥಮ ಪೊಲಿಂಗ್ ಆಫೀಸರ್ಗಳು ಮುಖ್ಯ ಮತಗಟ್ಟೆಯಲ್ಲಿ ನೋಂದಾಯಿತರಾಗಿದ್ದ ಮತದಾರರಿಗೆ ಪೂರಕ ಮತಗಟ್ಟೆಯಲ್ಲಿ ಮತ ಚಲಾಯಿಸುವ ಅವಕಾಶ ನೀಡಿದ್ದನ್ನು ಒಪ್ಪಿಕೊಂಡಿದ್ದಾರೆ, ಎಂದು ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಪ್ರೆಸ್ ನೋಟ್ನಲ್ಲಿ ಹೇಳಲಾಗಿದೆ.
ಪಿಟಿಐ ಮೂಲಗಳ ಪ್ರಕಾರ, ಸಿಖೋಸೀಮ್ ಲಂಘುಮ್ (ಸೆಕ್ಟರ್ ಅಧಿಕಾರಿ), ಪ್ರಹ್ಲಾದ್ ರಾಯ್ (ಪ್ರಿಸೈಡಿಂಗ್ ಆಫೀಸರ್), ಪರಮೇಶ್ವರ ಚರಂಗ್ಸಾ (ಪ್ರಥಮ ಪೋಲಿಂಗ್ ಅಧಿಕಾರಿ), ಸ್ವರಾಜ್ ಕಾಂತ ದಾಸ್ (ದ್ವಿತೀಯ ಪೋಲಿಂಗ್ ಅಧಿಕಾರಿ) ಮತ್ತು ಲಾಲ್ಜಮ್ಲೊ ಥೀಕ್ (ತೃತೀಯ ಪೋಲಿಂಗ್ ಅಧಿಕಾರಿ) ಅವರನ್ನು ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ತತ್ಕ್ಷಣದಿಂದಲೇ ಸಸ್ಪೆಂಡ್ ಮಾಡಲಾಗಿದೆ, ಎಂದು ಪ್ರಕಟಣೆ ತಿಳಿಸುತ್ತದೆ.
ಆಯೋಗವು ಅಸ್ಸಾಂನಲ್ಲಿ ಈ ವರ್ಷ ಮರು-ಮತದಾನ ಘೋಷಿಸಿರುವ ಎರಡನೇ ನಿದರ್ಶನ ಇದಾಗಿದೆ. ಇದಕ್ಕೂ ಮೊದಲು ರತಾಬರಿ ಕ್ಷೇತ್ರದಲ್ಲಿ ಹೊಸ ಸುತ್ತಿನ ಮತದಾನ ನಡೆಸುವಂತೆ ಆದೇಶಿಸಲಾಗಿತ್ತು. ಬಿಜೆಪಿ ಪಕ್ಷದ ಅಭ್ಯರ್ಥಿಯೋಬ್ಬರ ಕಾರಿನಲ್ಲಿ ಚುನಾವಣಾ ಅಧಿಕಾರಿಗಳು ವಿದ್ಯುನ್ಮಾನ ಮತಯಂತ್ರಗಳನ್ನು (ಈವಿಎಮ್) ಸಾಗಿಸಿದ್ದು ವಿವಾದ ಸೃಷ್ಟಿಸಿದ ನಂತರ ಆಯೋಗ ಆದೇಶ ಹೊರಡಿಸಿ ನಾಲ್ವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿತ್ತು.
ಸದರಿ ಘಟನೆಯು ಆ ಮತಕ್ಷೇತ್ರವಿರುವ ಕರೀಮ್ಗಂಜ್ ಜಿಲ್ಲೆಯಲ್ಲಿ ವಿವಾದ ಜೊತೆಗೆ ಗಲಭೆಯನ್ನೂ ಸೃಷ್ಟಿಸಿತ್ತು. ಆ ಕಾರು ಹತ್ತಿರದ ಪತ್ಥರ್ಕಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಷ್ಣೇಂದು ಪಾಲ್ ಅವರ ಪತ್ನಿಗೆ ಸೇರಿದ್ದಾಗಿತ್ತು.
ಘಟನೆ ಬಗ್ಗೆ ವಿವರವನ್ನು ಕೇಳಿದಾಗ ಚುನಾವಣಾ ಆಯೋಗವು, ‘ಬಿಯು, ಸಿಯು ಮತ್ತು ವಿವಿಪ್ಯಾಟ್ ಮುಂತಾದವುಗಳನ್ನೊಳಗೊಂಡಿದ್ದ ಈವಿಎಮ್ನ ಸೀಲ್ ಹಾಗೆಯೇ ಇತ್ತು ಮತ್ತು ಯಂತ್ರಕ್ಕೆ ಯಾವುದೇ ರೀತಿಯ ಧಕ್ಕೆಯಾಗಿರಲಿಲ್ಲ,’ ಎಂದು ಹೇಳಿತ್ತು.
ವಿರೋಧ ಪಕ್ಷಗಳು ಇದನ್ನು ಅಸ್ತ್ರವನ್ನಾಗಿ ಬಳಸಿ ಬಿಜೆಪಿಯು ಈವಿಎಮ್ಗಳನ್ನು ವಶಪಡಿಸಿಕೊಳ್ಳುವ ಕೆಲಸದಲ್ಲಿ ತೊಡಗಿದೆ ಎಂದು ಹೇಳಿದ್ದವು. ಕಾಂಗ್ರೆಸ್ ಪಕ್ಷದ ಗೌರವ್ ಗೊಗೊಯಿ ತಮ್ಮ ಟ್ವೀಟ್ನಲ್ಲಿ, ‘ಕೇವಲ ಹೀಗೆ ಮಾಡಿ ಮಾತ್ರ ಬಿಜೆಪಿ ಅಸ್ಸಾಂನಲ್ಲಿ ಗೆಲುವು ಸಾಧಿಸಬಲ್ಲದು,’ ಎಂದು ಹೇಳಿದ್ದರು.
ಅಸ್ಸಾಂ ವಿಧಾನಸಭೆಗೆ ಮೂರು ಹಂತದ ಚುನಾವಣೆಗಳು ನಡೆಯುತ್ತಿದ್ದು ಮೊದಲ ಹಂತ ಮಾರ್ಚ್ 27 ರಂದು ನಡೆದು ಎರಡನೇ ಹಂತ ಏಪ್ರಿಲ್ 1 ರಂದು ನಡೆಯಿತು. ಮೂರನೇ ಹಾಗೂ ಅಂತಿಮ ಹಂತದ ಮತದಾನವು ನಾಳೆ ಅಂದರೆ ಮಂಗಳವಾರ ನಡೆಯಲಿದೆ
ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಬೊಡೊಲ್ಯಾಂಡ್ ಪೀಪಲ್ಸ್ ಫ್ರಂಟನ್ನು ಒಳಗೊಂಡ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟವು (ಮಹಾಜೋಟ್) ಅದನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿವೆ.
ಚುನಾವಣೆಯ ಫಲಿತಾಂಶಗಳು ಮೇ 2ರಂದು ಪ್ರಕಟವಾಗಲಿವೆ.