ವರುಣಾ ಆಯ್ತು ಇದೀಗ ಚಿಕ್ಕಮಗಳೂರಿನಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕಿರಿಕ್: ಪ್ರಚಾರ ವೇಳೆ ತಳ್ಳಾಟ, ನೂಕಾಟ
ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ ಉಂಟಾಗಿದ್ದು, ಚಿಕ್ಕಮಗಳೂರು ತಾಲೂಕಿನ ಸಾದರಹಳ್ಳಿಯಲ್ಲಿ ಪ್ರಚಾರ ವೇಳೆ ಗಲಾಟೆ ನಡೆದಿದೆ.

ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Elections 2023) ಕಾವು ಹೆಚ್ಚಾಗುತ್ತಿದೆ. ಪ್ರತಿಯೊಂದು ಪಕ್ಷಗಳು ಸಹ ವಿಭಿನ್ನವಾಗಿ ಮತ ಪ್ರಚಾರಗಳಲ್ಲಿ ತೊಡಗಿಕೊಂಡಿವೆ. ಜೊತೆಗೆ ರಾಜ್ಯ ರಾಜಕೀಯದಲ್ಲಿ ಟೀಕೆಗಳ ಮಹಾಪೂರವೇ ಹರಿಯುತ್ತಿದೆ. ಇವೆಲ್ಲದರ ಮಧ್ಯೆ ಕಾರ್ಯಕರ್ತರ ನಡುವೆ ಹಲ್ಲೆ ಆರೋಪಗಳು ಕೇಳಿಬರುತ್ತಿವೆ. ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದರಾಮನ ಹುಂಡಿ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಿನ್ನೆಯಷ್ಟೇ ಗಲಾಟೆ ನಡೆದಿತ್ತು. ಇದೀಗ ಚಿಕ್ಕಮಗಳೂರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕಿರಿಕ್ ಉಂಟಾಗಿದೆ.
ಚಿಕ್ಕಮಗಳೂರು ತಾಲೂಕಿನ ಸಾದರಹಳ್ಳಿಯಲ್ಲಿ ಪ್ರಚಾರ ವೇಳೆ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ ಉಂಟಾಗಿದೆ. ಪ್ರಚಾರ ವೇಳೆ ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಹೆಚ್.ಡಿ.ತಮ್ಮಯ್ಯ ಮುಖಾಮುಖಿಯಾಗಿದ್ದಾರೆ. ಅಭಿವೃದ್ಧಿ ಬಗ್ಗೆ ಹೆಚ್.ಡಿ.ತಮ್ಮಯ್ಯ ಪ್ರಸ್ತಾಪಿಸಿದ್ದು, ಈ ವೇಳೆ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಸಿಟಿ ರವಿ ಕಾರಿನಲ್ಲಿದ್ದಾಗ ಕಾರ್ಯಕರ್ತರಿಂದ ಕಿರಿಕ್ ಮಾಡಿದ್ದು, ಕಾಂಗ್ರೆಸ್ ಕಾರ್ಯಕರ್ತರನ್ನು H.D.ತಮ್ಮಯ್ಯ ಸಮಾಧಾನಪಡಿಸಿದರು.
ಸಿದ್ದರಾಮಯ್ಯ ಸಂಬಂಧಿಕರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ: ಬಿಜೆಪಿ ಕಾರ್ಯಕರ್ತ ಆರೋಪ
ಮೈಸೂರು: ಸಿದ್ದರಾಮಯ್ಯ ಸಂಬಂಧಿಕರು ನಮ್ಮ ಜೊತೆ ಗಲಾಟೆ ಮಾಡಿದರು. ಏಕಾಏಕಿ ಸಿದ್ದರಾಮಯ್ಯಗೆ ಜೈ, ಸೋಮಣ್ಣಗೆ ಧಿಕ್ಕಾರ ಎಂದು ಕೂಗಿದರು. ಕಲ್ಲು ತೂರಾಟ ನಡೆಸಿ ಕಾರುಗಳನ್ನು ಜಖಂಗೊಳಿಸಿದರು ಎಂದು ಬಿಜೆಪಿ ಕಾರ್ಯಕರ್ತರಾದ ರವಿಶಂಕರ್ ಆರೋಪ ಮಾಡಿದ್ದರು. ನಗರದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಸಿದ್ದರಾಮನಹುಂಡಿಯಲ್ಲಿ ಪ್ರಚಾರ ವೇಳೆ ಸಿದ್ದರಾಮಯ್ಯ ಸಂಬಂಧಿಕರು ನಮ್ಮ ಜೊತೆ ಗಲಾಟೆ ಮಾಡಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ: ಬಿಜೆಪಿ ಪ್ರಚಾರ ರಥದ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಕಲ್ಲೆಸೆತ ಆರೋಪ: ಸ್ವಲ್ಪದರಲ್ಲೇ ಪಾರಾದ ವಿ ಸೋಮಣ್ಣ, ಪ್ರತಾಪ್ ಸಿಂಹ
ಬಿಜೆಪಿ ಪ್ರಚಾರ ವಾಹನದಲ್ಲಿ ವಿ.ಸೋಮಣ್ಣ, ಪ್ರತಾಪ್ ಸಿಂಹ ಇದ್ದರು. ಏಕಾಏಕಿ ಕಲ್ಲು ತೂರಾಟ ನಡೆಸಿದ್ದಲ್ಲದೇ ದೊಣ್ಣೆಯಿಂದ ಹಲ್ಲೆ ಮಾಡಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತ ನಾಗೇಶ್ ಎನ್ನುವವರ ಕಾಲು ಮತ್ತು ಕೈಗೆ ಪೆಟ್ಟಾಗಿದೆ ಎಂದು ಹೇಳಿದ್ದರು.
ಘಟನೆ ಸಂಬಂಧ ಮೂವರನ್ನು ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಸಿದ್ದರಾಮಯ್ಯ ಆಪ್ತರು ಪೊಲೀಸರಿಗೆ ಕರೆ ಮಾಡಿದ ನಂತರ ಬಿಡುಗಡೆ ಮಾಡಲಾಗಿದೆ. ಘಟನೆ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುತ್ತೇವೆ. ನಾವು ಪ್ರಚಾರ ನಡೆಸಲು ಕಷ್ಟವಾಗಿದೆ, ಆದರೂ ಪ್ರಚಾರ ಮಾಡುತ್ತೇವೆ ಎಂದು ಬಿಜೆಪಿ ಕಾರ್ಯಕರ್ತರಾದ ರವಿಶಂಕರ್, ಶಿವಪ್ರಕಾಶ್ ಹೇಳಿದರು.
ಇದನ್ನೂ ಓದಿ: Karnataka Polls 2023: ಚುನಾವಣಾಧಿಕಾರಿಗೆ ಜೀವ ಬೆದರಿಕೆ ಆರೋಪ: ಬಿಜೆಪಿ ಕಾರ್ಯಕರ್ತನ ವಿರುದ್ಧ ಕೇಸ್ ಬುಕ್
ಆಮ್ ಆದ್ಮಿ ಪಕ್ಷದ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತನಿಂದ ಹಲ್ಲೆ
ಯಾದಗಿರಿ: ಚುನಾವಣಾ ಪ್ರಚಾರದ ವೇಳೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತನಿಂದ ಹಲ್ಲೆ ಮಾಡಿರುವಂತಹ ಘಟನೆ ಸುರಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲೆಯ ಹುಣಸಗಿ ತಾಲೂಕಿನ ತೊಳದಿನ್ನಿ ಗ್ರಾಮದಲ್ಲಿ ನಡೆದಿತ್ತು. ಗ್ರಾಮದಲ್ಲಿ ಪ್ರಚಾರ ಮಾಡಲು ಯಾಕೆ ಬಂದಿದ್ದೀಯಾ ಎಂದು ಪ್ರಶ್ನಿಸಿ ಹಲ್ಲೆ ಮಾಡಲಾಗಿತ್ತು. ಸುರಪುರ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಆರ್.ಎಂ.ನಾಯಕ ಎದರೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದರು. ಚುನಾವಣೆ ಹಿನ್ನೆಲೆ ಕಾರ್ಯಕರ್ತರ ಜೊತೆ ಆರ್.ಎಂ.ನಾಯಕ ಪ್ರಚಾರಕ್ಕೆ ಹೋಗಿದ್ದು, ಅಭ್ಯರ್ಥಿ ಪ್ರಚಾರ ಭಾಷಣ ಮಾಡುವಾಗ ಘಟನೆ ನಡೆದಿತ್ತು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:11 pm, Fri, 28 April 23




