AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ ಪ್ರವೇಶಿಸಲು ರಾಹುಲ್ ಗಾಂಧಿ ಅನುಮತಿ ಕೇಳಿದ್ಯಾಕೆ? ಇಲ್ಲಿದೆ ಅಚ್ಚರಿ ಸಂಗತಿ

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನಿನ್ನೆ ಕಾಪು ತಾಲೂಕಿನ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಒಳಗೆ ಹೋಗಲು ಅನುಮತಿ ಪಡೆದಿದ್ದಾರೆ.

ಉಡುಪಿ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ ಪ್ರವೇಶಿಸಲು ರಾಹುಲ್ ಗಾಂಧಿ ಅನುಮತಿ ಕೇಳಿದ್ಯಾಕೆ? ಇಲ್ಲಿದೆ ಅಚ್ಚರಿ ಸಂಗತಿ
ರಾಹುಲ್​ ಗಾಂಧಿ ದೇವಸ್ಥಾನ ಭೇಟಿ
ವಿವೇಕ ಬಿರಾದಾರ
|

Updated on: Apr 28, 2023 | 11:13 AM

Share

ಉಡುಪಿ: ಕಾಂಗ್ರೆಸ್ (Congress) ವರಿಷ್ಠ ರಾಹುಲ್ ಗಾಂಧಿ (Rahul Gandhi) ಅವರು ರಾಜ್ಯ ಪ್ರವಾಸದಲ್ಲಿದ್ದು, ನಿನ್ನೆ (ಏ.27) ರಂದು ಉಡುಪಿ (Udupi) ಭೇಟಿ ವೇಳೆ ಅಚ್ಚರಿಯ ಘಟನೆ ಒಂದು ನಡೆದಿದೆ. ರಾಹುಲ್​ ಗಾಂಧಿ ಅವರು ನಿನ್ನೆ ಕಾಪು ತಾಲೂಕಿನ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಒಳಗೆ ಹೋಗಲು ಅನುಮತಿ ಪಡೆದಿದ್ದಾರೆ. ಹೌದು ಮಹಾಲಕ್ಷ್ಮಿ ದೇವಸ್ಥಾನದ ಸಭಾಂಗಣದಲ್ಲಿ ರಾಹುಲ್​ ಗಾಂಧಿಯವರು ನಿನ್ನೆ ಮೀನುಗಾರರೊಂದಿಗೆ ಸಂವಾದ ನಡೆಸಿದರು. ಈ ವೇಳೆ ರಾಹುಲ್ ಗಾಂಧಿ ಅವರಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡರು ದೊಡ್ಡ ಗಾತ್ರದ ಅಂಜಲ್ ಮೀನೊಂದನ್ನು ಗಿಫ್ಟಾಗಿ ಕೊಟ್ಟರು. ಈ ಮೀನನ್ನು ರಾಹುಲ್ ಗಾಂಧಿ ಕೈಯಲ್ಲಿ ಹಿಡಿದು ಖುಷಿ ಪಟ್ಟರು. ಇದಾದ ನಂತರ ನೇರವಾಗಿ ಮಹಾಲಕ್ಷ್ಮಿ ದೇಗುಲಕ್ಕೆ ರಾಹುಲ್ ಗಾಂಧಿಯವರು ಹೋದರು.

ಈ ವೇಳೆ ರಾಹುಲ್​ ಗಾಂಧಿಯವರು ದೇವಸ್ಥಾನದ ಹೊಸ್ತಿಲಲ್ಲಿ ನಿಂತು “ನಾನು ಮೀನನ್ನು ಕೈಯಲ್ಲಿ ಹಿಡಿದಿದ್ದೆ, ನಾನಿನ್ನು ಕೈ ತೊಳೆದಿಲ್ಲ ದೇವಸ್ಥಾನದ ಒಳಗೆ ಬರಬಹುದೇ” ಎಂದು ಸ್ಥಳೀಯ ನಾಯಕರಿಗೆ ಮುಗ್ಧವಾಗಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಸುತ್ತಮುತ್ತ ಇದ್ದ ಕಾಂಗ್ರೆಸ್ ನಾಯಕರು, ಮೊಗವೀರ ಮುಖಂಡರು ಯಾವುದೇ ಅಭ್ಯಂತರ ಇಲ್ಲ ತಾವು ಒಳಗೆ ಬನ್ನಿ ಎಂದಿದ್ದಾರೆ. ಆದರೂ ರಾಹುಲ್ ಗಾಂಧಿ ಹೊಸ್ತಿಲ ಹೊರಗೆ ನಿಂತು ಆಲೋಚನೆ ಮಾಡಿದ್ದಾರೆ. ನಂತರ ಜೊತೆಗಿದ್ದವರು ದೇಗುಲದ ಒಳಗೆ ಕರೆದುಕೊಂಡು ಹೋಗಿದ್ದಾರೆ. ವಿಶೇಷ ಪೂಜೆ ಸಲ್ಲಿಕೆ ಮಾಡಿದ ಅರ್ಚಕರು ರಾಹುಲ್ ಗಾಂಧಿ ಅವರಿಗೆ ಆಯುಷ್ಯ ಆರೋಗ್ಯ ಭಾಗ್ಯ ಕರುಣಿಸಲಿ. ಸತ್ಯ ನ್ಯಾಯ ನೀತಿ ಧರ್ಮದ ಮೂಲಕ ದೇಶ ರಕ್ಷಣೆ ಮಾಡುವ ಶಕ್ತಿ ಸಾಮರ್ಥ್ಯ ನಿಮ್ಮಲ್ಲಿ ಇದೆ. ಭಾರತ ಜೋಡೋ ಎಂಬ ದೊಡ್ಡ ಕಾರ್ಯಕ್ರಮವನ್ನು ತಾವು ಮಾಡಿದ್ದೀರಿ ಎಂದು ಅರ್ಚಕರು ದೇವರ ಮುಂದೆ ಪ್ರಾರ್ಥಿಸಿ, ಪ್ರಸಾದವನ್ನು ನೀಡಿದ್ದಾರೆ.

ಇದನ್ನೂ ಓದಿ: ಪಕ್ಷವನ್ನ ಅಧಿಕಾರಕ್ಕೆ ತರುವ ಸಂಕಲ್ಪ! ಶೃಂಗೇರಿಯಲ್ಲಿ ಚಂಡಿಕಾಯಾಗ ಮುಗಿಸಿದ ಡಿಕೆ ಶಿವಕುಮಾರ್ ಅವರಿಂದ ಇಂದು ಉಡುಪಿಯಲ್ಲೂ ನವಚಂಡಿಕಾ ಯಾಗ!

ಇನ್ನು ಈ ಹಿಂದೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಸಿಟಿ ರವಿ ಮಾಂಸ ತಿಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇದು ಸಾಕಷ್ಟು ಸುದ್ದಿಯಾಗಿತ್ತು ಮತ್ತು ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿತ್ತು. ಹೀಗಾಗಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವುದೇಕೆ ಎಂದು ರಾಹುಲ್​ ಗಾಂಧಿಯವರು ದೇವಸ್ಥಾನಕ್ಕೆ ಪ್ರವೇಶ ನೀಡುವ ಮುನ್ನ ಅನುಮತಿ ಪಡೆದರು ಎನ್ನಲಾಗುತ್ತಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ