ಲಿಂಗಾಯತರ ಮತ ಸೆಳೆಯಲು ಕಾಂಗ್ರೆಸ್ ಮತ್ತೊಂದು ತಂತ್ರ; ಬಸವ ಜಯಂತಿಗೆ ವಿಭಿನ್ನ ಕಾರ್ಯಕ್ರಮ

ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಬಿಜೆಪಿ ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಿದೆ ಎಂಬ ದಾಳ ಉರುಳಿಸಿದ್ದ ‘ಕೈ’ ನಾಯಕರು ಇದೀಗ ಲಿಂಗಾಯತ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಮತ್ತೊಂದು ತಂತ್ರಗಾರಿಕೆ ಹೂಡಿದ್ದಾರೆ.

ಲಿಂಗಾಯತರ ಮತ ಸೆಳೆಯಲು ಕಾಂಗ್ರೆಸ್ ಮತ್ತೊಂದು ತಂತ್ರ; ಬಸವ ಜಯಂತಿಗೆ ವಿಭಿನ್ನ ಕಾರ್ಯಕ್ರಮ
ರಾಹುಲ್ ಗಾಂಧಿ
Follow us
|

Updated on: Apr 21, 2023 | 3:57 PM

ಬಾಗಲಕೋಟೆ: ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಕಾಂಗ್ರೆಸ್ (Congress) ಸೇರ್ಪಡೆಯಾದ ಬೆನ್ನಲ್ಲೇ ಬಿಜೆಪಿ (BJP) ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಿದೆ ಎಂಬ ದಾಳ ಉರುಳಿಸಿದ್ದ ‘ಕೈ’ ನಾಯಕರು ಇದೀಗ ಲಿಂಗಾಯತ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಮತ್ತೊಂದು ತಂತ್ರಗಾರಿಕೆ ಹೂಡಿದ್ದಾರೆ. ಬಸವಣ್ಣನ ಐಕ್ಯಸ್ಥಳ ಕೂಡಲಸಂಗಮದಲ್ಲಿ ಬಸವ ಜಯಂತಿ ಆಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪಕ್ಷದ ನಾಯಕ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ನೇರವಾಗಿ ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ಕಾರ್ಯಕ್ರಮ ನಡೆಸದೇ, ಅದರಲ್ಲಿ ರಾಹಲ್ ಗಾಂಧಿ ಹಾಗೂ ಇತರ ನಾಯಕರು ಭಾಗವಹಿಸುವಂತೆ ಮಾಡುವ ಮೂಲಕ ಲಿಂಗಾಯತ ಪರ ಎಂದು ಬಿಂಬಿಸುವುದು ಕಾಂಗ್ರೆಸ್ ತಂತ್ರಗಾರಿಕೆ ಎನ್ನಲಾಗಿದೆ.

ಏಪ್ರಿಲ್ 23ರಂದು ಕೂಡಲಸಂಗಮಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದು, ಸಂಗಮೇಶ್ವರ ದೇವಸ್ಥಾನ, ಅಣ್ಣ ಬಸವಣ್ಣನ ಐಕ್ಯ ಮಂಟಪ ದರ್ಶನ ಪಡೆಯಲಿದ್ದಾರೆ. ಬಳಿಕ ಸಭಾಭವನದಲ್ಲಿ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಬಸವ ಜಯಂತಿ ದಿನ ಕೂಡಲಸಂಗಮ ಕ್ಷೇತ್ರಕ್ಕೆ ರಾಹುಲ್ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಸ್ಥಳ ಪರಿಶೀಲನೆ ನಡೆಸಿ, ಸಭೆ ನಡೆಸಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಜಿಲ್ಲಾ ಅಧ್ಯಕ್ಷ ಎಸ್ ಜಿ.ನಂಜಯ್ಯನಮಠ ಜೊತೆ ಕೆಪಿಸಿಸಿ ಹಾಗೂ ಎಐಸಿಸಿ ಪ್ರತಿನಿಧಿಗಳು ಸಭೆ ನಡೆಸಿದ್ದಾರೆ. ಬಸವ ಸಂಘಟನೆಯ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ.

ಇದನ್ನೂ ಓದಿ: Karnataka Polls: ಲಿಂಗಾಯತ ವಿರೋಧ ಎದುರಿಸಲು ಬಿಜೆಪಿಗೆ ಯಡಿಯೂರಪ್ಪ ಗುರಾಣಿ; ಬೆಳಗಾವಿ ಬಂಡಾಯ ತಣಿಸಿದ ಸಂತೋಷ್ ತಂತ್ರ

ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಜೊತೆ ಕಾಂಗ್ರೆಸ್ ಪಕ್ಷದ ಯಾವೆಲ್ಲ ಮುಖಂಡರು ಭಾಗವಹಿಸಲಿದ್ದಾರೆ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಪಕ್ಷಕ್ಕೆ ಸೀಮಿತವಾಗಿ ಕಾರ್ಯಕ್ರಮ ನಡೆಸದೇ ಬೇರೆಯದೇ ರೂಪ ನೀಡುವ ಮೂಲಕ ಲಿಂಗಾಯತರನ್ನು ಸೆಳೆಯುವುದು ಕಾಂಗ್ರೆಸ್ ಯೋಜನೆ ಎನ್ನಲಾಗಿದೆ.

ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಕಾಂಗ್ರೆಸ್ ಮುಂದಾಗಿತ್ತು. ಆದರೆ, ಇದಕ್ಕೆ ಬಿಜೆಪಿಯೂ ಪ್ರತಿ ತಂತ್ರಗಾರಿಕೆ ರೂಪಿಸಿತ್ತು. ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿದ್ದ ಬಿಜೆಪಿ ಹೈಕಮಾಂಡ್, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಇತರ ಲಿಂಗಾಯತ ನಾಯಕರನ್ನು ಮುಂದಿಟ್ಟುಕೊಂಡು ಲಿಂಗಾಯತ ವಿರೋಧಿ ಹಣೆಪಟ್ಟಿಯನ್ನು ತಪ್ಪಿಸಲು ತಂತ್ರಗಾರಿಕೆ ರೂಪಿಸಿತ್ತು.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ