ಲಿಂಗಾಯತ ಡ್ಯಾಂ ಎಷ್ಟು ಗಟ್ಟಿ ಇದೆ ಎಂಬುದು ನಿಮಗೆ ಗೊತ್ತಿಲ್ಲ; ಡಿಕೆ ಶಿವಕುಮಾರ್​ಗೆ ಸಿಎಂ ಬೊಮ್ಮಾಯಿ ತಿರುಗೇಟು

ಕೆಲವು ಮಂದಿ ಲಿಂಗಾಯತ ನಾಯಕರು ಕಾಂಗ್ರೆಸ್​ ಸೇರ್ಪಡೆಯಾಗಿರುವುದನ್ನು ಡ್ಯಾಂಗೆ ಹೋಲಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಲಿಂಗಾಯತ ಡ್ಯಾಂ ಎಷ್ಟು ಗಟ್ಟಿ ಇದೆ ಎಂಬುದು ನಿಮಗೆ ಗೊತ್ತಿಲ್ಲ; ಡಿಕೆ ಶಿವಕುಮಾರ್​ಗೆ ಸಿಎಂ ಬೊಮ್ಮಾಯಿ ತಿರುಗೇಟು
ಬಸವರಾಜ ಬೊಮ್ಮಾಯಿ ಹಾಗೂ ಡಿಕೆ ಶಿವಕುಮಾರ್
Follow us
|

Updated on: Apr 21, 2023 | 4:40 PM

ಬೆಂಗಳೂರು: ಕೆಲವು ಮಂದಿ ಲಿಂಗಾಯತ ನಾಯಕರು ಕಾಂಗ್ರೆಸ್​ ಸೇರ್ಪಡೆಯಾಗಿರುವುದನ್ನು ಡ್ಯಾಂಗೆ ಹೋಲಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ಗೆ (DK Shivakumar) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿರುಗೇಟು ನೀಡಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಬೊಮ್ಮಾಯಿ, ನಿಮ್ಮ (ಡಿಕೆ ಶಿವಕುಮಾರ್) ಹೇಳಿಕೆಯಿಂದ ಲಿಂಗಾಯತ ಧರ್ಮವನ್ನು ಒಡೆಯುವ ಮತ್ತೊಂದು ಹುನ್ನಾರ ಬಯಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಲಿಂಗಾಯತ ಮತ ಸೆಳೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯ ಪೈಪೋಟಿ ಆರಂಭವಾಗಿದೆ. ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಸೇರಿದಂತೆ ಕೆಲವು ನಾಯಕರು ಕಾಂಗ್ರೆಸ್​ ಸೇರ್ಪಡೆಯಾಗಿದ್ದರ ಲಾಭ ಪಡೆಯಲು ‘ಕೈ’ ನಾಯಕರು ಮುಂದಾಗಿದ್ದರೆ, ಇದಕ್ಕೆ ಪ್ರತಿ ತಂತ್ರ ರೂಪಿಸುವ ಮೂಲಕ ಲಿಂಗಾಯತ ಮತಬ್ಯಾಂಕ್ ಭದ್ರಪಡಿಸಿಕೊಳ್ಳಲು ಬಿಜೆಪಿ ಮುಂದಾಗಿದೆ.

‘ಡಿಕೆ ಶಿವಕುಮಾರ್ ಅವರೇ, ಲಿಂಗಾಯತ ಡ್ಯಾಮಿನ ಬಗ್ಗೆ ಮಾತನಾಡಿದ್ದೀರಿ. ಇದು ಎಷ್ಟು ಗಟ್ಟಿ ಇದೆ ಎಂಬ ಅರಿವು ನಿಮಗಿಲ್ಲ. ನೀವು ಅದನ್ನು ಒಡೆಯುವ ಭ್ರಮೆಯಲ್ಲಿದ್ದೀರಿ. 2018ರಲ್ಲಿ ನಿಮ್ಮ ಸರ್ಕಾರ ಇದ್ದು ಇದನ್ನು ಒಡೆಯಲು ಸಾಧ್ಯವಾಗಿಲ್ಲ. ಈಗೇನು ಮಾಡಲು ಸಾಧ್ಯ? ಮೊದಲು ನಿಮ್ಮ ಕಾಂಗ್ರೆಸ್ಸಿನ ಗುಂಡಿಯಲ್ಲಿ ನೀರಿಲ್ಲ. ಅದರ ಬಗ್ಗೆ ಚಿಂತನೆ ಮಾಡಿ, ನಿಮ್ಮ ಹೇಳಿಕೆನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಮೇ 13ಕ್ಕೆ ಯಾರಯಾರ ಡ್ಯಾಮ್​ನಲ್ಲಿ ಎಷ್ಟು ನೀರಿದೆ ಅಂತ ಗೊತ್ತಾಗುತ್ತದೆ. ನಿಮ್ಮ ಹೇಳಿಕೆಯಿಂದ ಲಿಂಗಾಯತ ಧರ್ಮವನ್ನು ಒಡೆಯುವ ಮತ್ತೊಂದು ಹುನ್ನಾರ ಬಯಲಾಗಿದೆ’ ಎಂದು ಬೊಮ್ಮಾಯಿ ಅವರು ಟ್ವೀಟ್​​ನಲ್ಲಿ ಉಲ್ಲೇಖಿಸಿದ್ದಾರೆ.

ಏನು ಹೇಳಿದ್ದರು ಡಿಕೆ ಶಿವಕುಮಾರ್?

ಬಿಜೆಪಿ ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ್ದ ಡಿಕೆ ಶಿವಕುಮಾರ್, ಡ್ಯಾಂ ಒಡೆದರೆ ಹರಿದು ಹೋಗುವ ನೀರನ್ನು ತಡೆ ಹಿಡಿಯಲಾಗದು. ಮತ್ತೆ ಹೊಸದಾಗಿ ಡ್ಯಾಂ ಕಟ್ಟಬೇಕಷ್ಟೆ. ಡ್ಯಾಂ ಒಡೆದು ಹರಿದುಹೋಗುವ ನೀರು ಸಮುದ್ರ ಸೇರಲೇಬೇಕು ಎಂದು ಹೇಳಿದ್ದರು.

ಇದನ್ನೂ ಓದಿ: ಲಿಂಗಾಯತರ ಮತ ಸೆಳೆಯಲು ಕಾಂಗ್ರೆಸ್ ಮತ್ತೊಂದು ತಂತ್ರ; ಬಸವ ಜಯಂತಿಗೆ ವಿಭಿನ್ನ ಕಾರ್ಯಕ್ರಮ

ಬಿಜೆಪಿಯ ಪ್ರಮುಖ ಲಿಂಗಾಯತ ನಾಯಕರಾದ ಜಗದೀಶ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಇತ್ತೀಚೆಗಷ್ಟೇ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ದೊರೆಯದ ಕಾರಣ ಉಭಯ ನಾಯಕರು ಈ ಕ್ರಮ ಕೈಗೊಂಡಿದ್ದರು. ಇನ್ನೂ ಕೆಲವು ಮಂದಿ ಬಿಜೆಪಿಯ ಲಿಂಗಾಯತ ನಾಯಕರನ್ನು ಕಾಂಗ್ರೆಸ್ ಸೆಳೆದಿತ್ತು. ಬಿಜೆಪಿಯನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸಲೂ ಕಾಂಗ್ರೆಸ್ ಹಲವಾರು ಟೀಕೆಗಳನ್ನು ಮಾಡಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಡಿಕೆ ಶಿವಕುಮಾರ್ ಹೇಳಿಕೆಗೆ ಬೊಮ್ಮಾಯಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ