ಸಿದ್ದರಾಮಯ್ಯಗೆ ಸಹಕಾರ ಕೊಟ್ಟಿದ್ದೇನೆ, ಈಗ ಅವರು ಸಹಕರಿಸುವ ವಿಶ್ವಾಸವಿದೆ: ಪರೋಕ್ಷವಾಗಿ ಸಿಎಂ ಹುದ್ದೆ ಬಿಟ್ಟುಕೊಂಡುವಂತೆ ಡಿಕೆ ಶಿವಕುಮಾರ್ ಮನವಿ
ಕಾಡಸಿದ್ದೇಶ್ವರ ಮಠ ನಮಗೆ ಪುಣ್ಯ ಕ್ಷೇತ್ರ. ಪ್ರತಿ ಸಂದರ್ಭದಲ್ಲೂ ಶ್ರೀಗಳು ನಮಗೆ ಮಾರ್ಗದರ್ಶನ ನೀಡಿದ್ದಾರೆ. ನಾನು ಅಧಿಕಾರ ತೆಗೆದುಕೊಂಡಾಗಿನಿಂದಲೂ ಪ್ರತಿಯೊಂದನ್ನು ಗುರುಗಳ ಮಾರ್ಗದರ್ಶನ ಪಡೆದಿದ್ದೇನೆ ಎಂದು ಟಿಕೆಟ್ ಹಂಚಿಕೆ ಬಗ್ಗೆನೂ ನೊಣವಿನಕೆರೆ ಗುರುವಿನ ಸನ್ನಿಧಿಯಲ್ಲಿ ಡಿಕೆ ಶಿವಕುಮಾರ್ ರಿವಿಲ್ ಮಾಡಿದ್ದಾರೆ.
ತುಮಕೂರು: ಕಾಂಗ್ರೆಸ್ಗೆ (Congress) ಭರ್ಜರಿ ಬಹುಮತ ದೊರೆತಿದೆ. ಬರುವ ಬುಧವಾರ ಅಥವಾ ಗುರುವಾರ ಸರ್ಕಾರ ರಚಿಸುವ ಸಾಧ್ಯತೆಗಳಿದ್ದು, ಮುಖ್ಯಮಂತ್ರಿ ಯಾರಾಗ್ತಾರೆ ಎಂಬ ಕುತೂಹಲ ಮೂಡಿದೆ. ಸಿಎಂ ರೇಸ್ನಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ ಇದ್ದು, ಗೊಂದಲ ಗೂಡಾಗಿದೆ. ಇದೀಗ ನಾನು ಸಿಎಂ ಆಗಲು ಸಿದ್ದರಾಮಯ್ಯ ಅವರು ಸಹಕರಿಸಬೇಕೆಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ (DK Shivakumar) ಅವರು ಹೇಳಿದ್ದಾರೆ. ಹೌದು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪಕ್ಷದ ವಿಚಾರದಲ್ಲಿ ನಾನು ಹಲವು ಬಾರಿ ಸೋತಿದ್ದೇನೆ. ನಾನು ಸೋತು ಸಿದ್ದರಾಮಯ್ಯಗೆ ಸಹಕಾರ ಕೊಟ್ಟಿದ್ದೇನೆ. ಈಗ ಸಿದ್ದರಾಮಯ್ಯನವರು ನನಗೆ ಸಹಕರಿಸುವ ವಿಶ್ವಾಸವಿದೆ. ಆರಂಭದಲ್ಲಿ ಮಂತ್ರಿ ಮಾಡದಿದ್ದಾಗ ತಾಳ್ಮೆಯಿಂದ ಇರಲಿಲ್ವಾ. ಆವಾಗ ನಾನು ಸಿದ್ದರಾಮಯ್ಯನವರಿಗೆ ಸಹಕಾರ ಕೊಟ್ಟಿದ್ದೇನೆ ಎನ್ನುವ ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಅವರು ಸಹಕರಿಸಬೇಕೆಂದು ಹೇಳಿದ್ದಾರೆ.
ನೊಣವಿನಕೆರೆ ಗುರುವಿನ ಸನ್ನಿಧಿಯಲ್ಲಿ ಟಿಕೆಟ್ ಹಂಚಿಕೆ ವಿಚಾರ ರಿವಿಲ್
ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಡಸಿದ್ದೇಶ್ವರ ಮಠ ನಮಗೆ ಪುಣ್ಯ ಕ್ಷೇತ್ರ. ಪ್ರತಿ ಸಂದರ್ಭದಲ್ಲೂ ಶ್ರೀಗಳು ನಮಗೆ ಮಾರ್ಗದರ್ಶನ ನೀಡಿದ್ದಾರೆ. ನಾನು ಅಧಿಕಾರ ತೆಗೆದುಕೊಂಡಾಗಿನಿಂದಲೂ, ಯಾರಿಗೆ ಟಿಕೆಟ್ ಕೊಡಬೇಕು, ಯಾರಿಗೆ ಕೊಡಬಾರದು ಎಂಬ ತೀರ್ಮಾನವನ್ನು ಇಲ್ಲೇ ಮಾಡಿದ್ದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ರಾಜ್ಯಕ್ಕೆ ಒಳ್ಳೆಯದಾಗಲಿ ಅಂತಾ ಮಾರ್ಗದರ್ಶನ ಕೊಟ್ಟಿದ್ದಾರೆ. ಇನ್ಕಮ್ ಟ್ಯಾಕ್ಸ್, ಐಟಿ ರೇಡ್ ಆದಾಗಲೂ ನಾನು ಅಜ್ಜಯ್ಯನ ಮಾರ್ಗದರ್ಶನ ಪಡೆದಿದ್ದೆ. ಹೆಲಿಕಾಪ್ಟರ್ ದುರಂತ ಆದ ನಂತರ ಕೂಡ ನನ್ನ ಮಗಳು ಇಲ್ಲಿಗೆ ಬಂದು ಹೋದಳು. ನನಗೆ ಮಾನಸಿಕವಾಗಿ ಧೈರ್ಯ ಕೊಟ್ಟವರು ಅಜ್ಜಯ್ಯನವರು ಎಂದು ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆಗೆ ಲಕ್ಷ್ಮಣ ಸವದಿ ಹೇಳಿದ್ದಿಷ್ಟು
ನಾನು 134 ಕ್ಷೇತ್ರದಲ್ಲಿ ಗೆಲ್ಲಿಸು ಅಂತ ಕೇಳ್ಕೊಂಡಿದ್ದೆ. ಯಾರ ಹಂಗಿನಲ್ಲೂ ನಾವು ಅಧಿಕಾರ ಮಾಡಬಾರದು ಅಂತ ಬೇಡಿಕೊಂಡಿದ್ದೆ. ಹೆಣ್ಣು ಮಕ್ಕಳ ಬಗ್ಗೆ ಹೆಚ್ಚು ಚಿಂತನೆ ಮಾಡಬೇಕು ಎನ್ನುವ ಮಾರ್ಗದರ್ಶನ ಬಂದಿತ್ತು. ಹೀಗಾಗಿಯೇ ನಾವು ಗೃಹಲಕ್ಷ್ಮಿ, ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ಕೊಡೋ ಯೋಜನೆ ಮಾಡಿದ್ವಿ ಎಂದು ಮಾಹಿತಿ ನೀಡಿದರು.
ಅಜ್ಜಯ್ಯ ಆಶೀರ್ವಾದದಿಂದ ಇನ್ನೂ ಎತ್ತರಕ್ಕೆ ಹೋಗುವ ನಂಬಿಕೆ ಇದೆ. ದಿನೇಶ್ ಗುಂಡೂರಾವ್ ಅವರು ನೈತಿಕ ರಾಜೀನಾಮೆ ಕೊಟ್ಟಾಗ, ಸೋನಿಯಾ ಗಾಂಧಿ ಅವರು ನನ್ನ ಹೆಗಲಿಗೆ ಜವಾಬ್ದಾರಿ ಹೊರೆಸಿದರು. ನಾನು ಜೈಲಿಂದ ಹೊರಬರುತ್ತಲೇ ಅಧಿಕಾರ ಹಿಡಿದೆ. ಹಗಲು ರಾತ್ರಿ ದುಡಿದಿದ್ದೇನೆ ಎಂದು ತಿಳಿಸಿದ್ದಾರೆ.
ಚೆಲುವರಾಯಸ್ವಾಮಿ ಇಲ್ಲಿ ಬಂದಿದ್ದಾರೆ. ಅವರಿಗೆ ಒಂದು ಆತಂಕ ಇತ್ತು. ಮಂಡ್ಯದಲ್ಲಿ ಏನಾಗುತ್ತೋ ಏನೋ ಅನ್ನೋ ಆತಂಕ ಇತ್ತು. ಅವರಿಗೇ ಕೂಡ ಧೈರ್ಯ ತುಂಬಿದೆ. ಈಗ ಮಂಡ್ಯದಲ್ಲಿ ಕಾಂಗ್ರೆಸ್ಗೆ ಗೆಲುವಾಗಿದೆ. ಇದು ಮಂಡ್ಯ ಜನತೆಯ ಗೆಲುವು. ಮಂಡ್ಯ ಜಿಲ್ಲೆಯಲ್ಲೂ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದಿದೆ. ಇಲ್ಲಿಗೆ ಮಂಡ್ಯ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಬಂದಿದ್ದಾರೆ. ಇದು ಪ್ಲ್ಯಾನ್ ಅಲ್ಲ ಎಂದರು.
ಮುಖ್ಯಮಂತ್ರಿ ಯಾರಾಗ್ತಾರೆ ಪ್ರಶ್ನೆಗೆ ಉತ್ತರಿಸಿದ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ಆಗುತ್ತಾರೆ. ಪಕ್ಷಕ್ಕೋಸ್ಕರ ಹಗಲು ರಾತ್ರಿ ದುಡಿದಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಮಂತ್ರಿ ಸ್ಥಾನ ಸಿಗದಿದ್ದಾಗ ನಾನು ತಾಳ್ಮೆಯಿಂದ ಇರಲಿಲ್ಲವೇ? ನನಗೆ ಸಚಿವ ಸ್ಥಾನ ಸಿಗದಿದ್ದಾಗಲೂ ಅವರಿಗೆ ಸಹಕಾರ ಕೊಟ್ಟಿದ್ದೇನೆ ಎಂದು ತಿಳಿಸಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿ
Published On - 1:26 pm, Sun, 14 May 23