ಜೆಡಿಎಸ್ ಅಭ್ಯರ್ಥಿ ಕಿಡ್ನಾಪ್ ಆರೋಪ ಪಟ್ಟ; ಪೊಲೀಸರಿಗೆ ದೂರು ನೀಡಿದ ಬಿಜೆಪಿ ಅಭ್ಯರ್ಥಿ
ವಿಧಾನಸಭೆ ಚುನಾವಣೆಗೆ ಇನ್ನು ಏಳು ದಿನಗಳು ಬಾಕಿಯಿದ್ದು, ಮತದಾರರನ್ನ ಸೆಳೆಯಲು ಆಯಾ ಕ್ಷೇತ್ರದ ಅಭ್ಯರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ಆದರೆ ಇದೀಗ ಜೆಡಿಎಸ್ ಅಭ್ಯರ್ಥಿಯಿಂದ ಕಿಡ್ನಾಪ್ ಹುನ್ನಾರ ಆರೋಪಿಸಿ, ಬಿಜೆಪಿ ಅಭ್ಯರ್ಥಿ ಎಸ್ ಆರ್ ವಿಶ್ವನಾಥ್ ಅವರು ಇಂದು(ಮೇ.3) ಜಿಲ್ಲೆಯ ಯಲಹಂಕ ತಾಲೂಕಿನ ರಾಜಾನುಕುಂಟೆ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ.
ಬೆಂಗಳೂರು ನಗರ: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election)ಗೆ ಇನ್ನು ಏಳು ದಿನಗಳು ಬಾಕಿಯಿದ್ದು, ಮತದಾರರನ್ನ ಸೆಳೆಯಲು ಆಯಾ ಕ್ಷೇತ್ರದ ಅಭ್ಯರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ಆದರೆ ಇದೀಗ ಜೆಡಿಎಸ್(JDS) ಅಭ್ಯರ್ಥಿಯಿಂದ ಕಿಡ್ನಾಪ್ ಹುನ್ನಾರ ಆರೋಪಿಸಿ, ಬಿಜೆಪಿ(BJP) ಅಭ್ಯರ್ಥಿ ಎಸ್ ಆರ್ ವಿಶ್ವನಾಥ್(S. R. Vishwanath) ಅವರು ಇಂದು(ಮೇ.3) ಜಿಲ್ಲೆಯ ಯಲಹಂಕ ತಾಲೂಕಿನ ರಾಜಾನುಕುಂಟೆ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ ಕುತಂತ್ರದಿಂದ ಪ್ರಚಾರ ಮಾಡಲು ಹುನ್ನಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇನ್ನು ಇದೇ ವೇಳೆ ಪೊಲೀಸ್ ಠಾಣೆ ಮುಂದೆ ವಿಶ್ವನಾಥ್ ಕಾರ್ಯಕರ್ತರು ಜಮಾಯಿಸಿದ್ದರು.
ಈ ಕುರಿತು ಮಾತನಾಡಿದ್ದ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ‘ಚುನಾವಣೆ ಪ್ರಚಾರ ಮುಗಿಸಿ ಬರುವಾಗ ಮುನೇಗೌಡರು ಸಂಚು ಮಾಡಿರುವುದು ಗೊತ್ತಾಗಿದೆ. ಜೆಡಿಎಸ್ ಅಭ್ಯರ್ಥಿ ಮುನೇಗೌಡ ಹಾಗು ಚರಣ್ರವರು ಸಂಚು ಮಾಡಿರೋದು ನೋಡ್ದೆ. ಕಳೆದ 4,5 ನೇ ತಾರೀಕಿನಂದು ಅವರನ್ನೇ ಅವರೇ ಕಿಡ್ನ್ಯಾಪ್ ಮಾಡಿ ವಿಶ್ವನಾಥ್ ಅವರು ಕಿಡ್ನ್ಯಾಪ್ ಮಾಡಿದ್ದಾರೆಂದು ಆರೋಪಿಸೋಕೆ ಪ್ಲಾನ್ ಮಾಡಿದ್ರು. ಸಿಂಗನಾಯಕನಹಳ್ಳಿ ಹೋಗುವಾಗ ಅವರ ಮೇಲೆ ಅವರೇ ಹಲ್ಲೆ ಮಾಡಿಕೊಂಡು ನನ್ನ ಮೇಲೆ ಎಫ್ಐಆರ್ ಮಾಡುವ ತರ ಪ್ಲಾನ್ ಮಾಡಿದ್ರು. ಇದರ ಬಗ್ಗೆ ತನಿಖೆ ಮಾಡಲು ಪೊಲೀಸರಿಗೆ ಮನವಿ ಮಾಡಿದ್ದೇನೆ. ನನ್ನ ಗ್ರಹಚಾರಕ್ಕೆ ಪ್ರತಿ ಸಲನೂ ಹೀಗೆ ಆಗ್ತಿದೆ. ಪ್ರತಿಬಾರಿ ಬಚಾವ್ ಆಗಿದ್ದೇನೆ. ಆದ್ರೀಗ ಈ ತರ ಗಲಾಟೆಗಳನ್ನ ಸೃಷ್ಟಿ ಮಾಡೋದು ಮಾತ್ರ ಮಾಡ್ತಾನೆ ಇದ್ದಾರೆ. ನಾನು ಆ ಅಭ್ಯರ್ಥಿಯನ್ನ ನೋಡಿದ್ದು ಒಂದೇ ಬಾರಿ. ಆದ್ರೆ, ನನ್ನೇ ಯಾಕೆ ಟಾರ್ಗೆಟ್ ಮಾಡ್ತಾರೆ ಗೊತ್ತಾಗ್ತಿಲ್ಲ. ನಾಳೆ ನಾನು ಈ ಬಗ್ಗೆ ಪೊಲೀಸರಿಗೆ ದೂರು ನೀಡುತಿದ್ದೇನೆ ಎಂದು ಹೇಳಿದ್ದರು.
ಇನ್ನು ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡ ತನ್ನನ್ನ ತಾನೇ ಕಿಡ್ನಾಪ್ ಮಾಡಿಸಿಕೊಳ್ಳುವ ಕುತಂತ್ರ ಹಿನ್ನೆಲೆ, ಯಲಹಂಕದ ನ್ಯೂ ಟೌನ್ ಪೊಲೀಸ್ ಠಾಣೆ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮುನೇಗೌಡ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಸುಳ್ಳು ಆರೋಪ ಮಾಡಿ ಕುತಂತ್ರ ರಾಜಕೀಯ ಮಾಡ್ತಿದ್ದಾನೆ ಎಂದು ನೂರಾರು ಕಾರ್ಯಕರ್ತರು ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಕಿಡ್ನಾಪ್ ಪ್ಲಾನ್ ವಿಡಿಯೋ ನಿನ್ನೆ(ಮೇ.2) ಬಿಡುಗಡೆಯಾಗಿತ್ತು. ಹೀಗಾಗಿ ಇಂದು ಯಲಹಂಕದ ಎಲ್ಲಾ ಪೊಲೀಸ್ ಠಾಣೆಗಳ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ